ADVERTISEMENT

ಕನ್ನಡಾಂಬೆಯ ಅದ್ಧೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 7:25 IST
Last Updated 17 ನವೆಂಬರ್ 2017, 7:25 IST
ಕುಶಾಲನಗರದಲ್ಲಿ ಗುರುವಾರ ಕರ್ನಾಟಕ ಕಾವಲು ಪಡೆ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡಾಂಬೆಯ ಭವ್ಯ ಮೆರವಣಿಗೆ ನಡೆಯಿತು
ಕುಶಾಲನಗರದಲ್ಲಿ ಗುರುವಾರ ಕರ್ನಾಟಕ ಕಾವಲು ಪಡೆ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡಾಂಬೆಯ ಭವ್ಯ ಮೆರವಣಿಗೆ ನಡೆಯಿತು   

ಕುಶಾಲನಗರ: ಕರ್ನಾಟಕ ಕಾವಲು ಪಡೆ ಜಿಲ್ಲಾ ಘಟಕದಿಂದ 7ನೇ ವರ್ಷದ ವಾರ್ಷಿಕೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪಟ್ಟಣದಲ್ಲಿ ಗುರುವಾರ ಕನ್ನಡಾಂಬೆಯ ಭವ್ಯ ಪ್ರತಿಮೆಯ ಮೆರವಣಿಗೆ ನಡೆಯಿತು.

ವಿವಿಧ ಕಲಾತಂಡಗಳ ವರ್ಣ ರಂಜಿತ ಕಲಾ ಪ್ರದರ್ಶನ ಗಮನ ಸೆಳೆಯಿತು. ಪ್ರವಾಸಿ ಮಂದಿರದ ಬಳಿಯಿಂದ ಆರಂಭಗೊಂಡ ಅದ್ಧೂರಿ ಮೆರವಣಿಗೆಗೆ ಕರ್ನಾಟಕ ಕಾವಲು ಪಡೆ ರಾಜ್ಯ ಘಟಕ ಅಧ್ಯಕ್ಷ ಎನ್.ಮೋಹನ್ ಕುಮಾರ್ ಗೌಡ ಚಾಲನೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದ ವಿವಿಧ ಕಲಾತಂಡಗಳೊಂದಿಗೆ ತಾಯಿ ಭುವನೇಶ್ವರಿಯ ಪ್ರತಿಮೆಯನ್ನು ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ADVERTISEMENT

ಡೊಳ್ಳು ಕುಣಿತ, ಕೋಲಾಟ, ಕಂಸಾಳೆ ಮುಂತಾದ ಕಲಾತಂಡಗಳು ಮೆರವಣಿಗೆಯಲ್ಲಿ ಇದ್ದವು. ಪಟ್ಟಣದ ಪ್ರವಾಸಿ ಮಂದಿರದಿಂದ ಟೋಲ್ ಗೇಟ್ ನ ಕೊಪ್ಪ ಕಾವೇರಿ ಪ್ರತಿಮೆಯವರೆಗೆ ನಡೆಸಿದ ಮೆರವಣಿಗೆಯಲ್ಲಿ ವಾದ್ಯ ಗೋಷ್ಠಿಗಳೊಂದಿಗೆ ಸಂಘಟನೆಯ ಕಾರ್ಯಕರ್ತರು, ಶಾಲಾ ಮಕ್ಕಳು ಕನ್ನಡ ಬಾವುಟವನ್ನು ಹಿಡಿದು ಕನ್ನಡ ಪರ ಘೋಷಣೆಗಳನ್ನು ಕೂಗುತ್ತ ಸಾಗಿದರು.

ನಂತರ ಅನುಗ್ರಹ ಪಿಯು ಕಾಲೇಜಿನಲ್ಲಿ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು, ‘ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು. ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ‘ ಅಂಗಡಿ ಮುಂಗಟ್ಟುಗಳಲ್ಲಿ ವರ್ತಕರು ಕನ್ನಡ ನಾಮಫಲಕ ಅಳವಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಕಾವಲು ಪಡೆಯ ರಾಜ್ಯ ಘಟಕ ಅಧ್ಯಕ್ಷ ಮೋಹನ್ ಕುಮಾರ್ ಗೌಡ ಮಾತನಾಡಿ, ‘ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತರೂ ಗಡಿನಾಡು ಪ್ರದೇಶಗಳಲ್ಲಿ ಕನ್ನಡ ಭಾಷೆಯ ಸ್ಥಿತಿ ಡೋಲಾಯಮಾನವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷಗಳು ಕನ್ನಡ ಭಾಷೆ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕಾವಲು ಪಡೆ ಜಿಲ್ಲಾ ಘಟಕ ಅಧ್ಯಕ್ಷ ಎಂ.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಅನುಗ್ರಹ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಕೆ.ಸತೀಶ್, ಪ್ರಾಂಶುಪಾಲ ಪಂಡರೀನಾಥ್ ನಾಯ್ಡ್ , ಭಾರವಿ ಕನ್ನಡ ರವಿಚಂದ್ರನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಬೀಂದ್ರ ಪ್ರಸಾದ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್‌, ಕಾವಲು ಪಡೆ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.