ADVERTISEMENT

ಕಸ್ತೂರಿ ರಂಗನ್‌ ವರದಿ: ಕರಪತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 8:54 IST
Last Updated 11 ಏಪ್ರಿಲ್ 2017, 8:54 IST

ಮಡಿಕೇರಿ:  ಡಾ.ಕಸ್ತೂರಿ ರಂಗನ್ ವರದಿಯ ಪ್ರಮುಖಾಂಶಗಳ ಕರಪತ್ರವೊಂದನ್ನು ವಿವಿಧ ಸಂಘಟನಗಳ ಮುಖಂಡರು ಭಾನುವಾರ ತಾಲ್ಲೂಕಿನ ಮೂರ್ನಾಡಿನಲ್ಲಿ ಬಿಡುಗಡೆ ಮಾಡಿದರು.ಸೂಕ್ಷ್ಮ ಪರಿಸರ ವಲಯ ಘೋಷಣೆಯಿಂದ ಜನರಿಗೆ ಹಲವಾರು ತೊಂದರೆಗಳು ಉಂಟಾಗಬಹುದೆಂದು ಜನರಿಗೆ ಎಚ್ಚರಿಸುತ್ತಿದ್ದಾರೆ. ಈ ವರದಿ ಅನುಷ್ಠಾನದ ವಿರುದ್ಧ ರಾಜಕೀಯ ಪಕ್ಷಗಳು, ಇತರೆ ಸಂಘಟನೆಗಳು ಧ್ವನಿ ಎತ್ತಿವೆ.

ಸೂಕ್ಷ್ಮ ಪರಿಸರ ವಲಯ ಘೋಷಣೆಯಿಂದ ಕಾಡು ಹಾಗೂ ವನ್ಯಜೀವಿಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಸಿದ್ಧ ಪಡಿಸಿದ ಕಾನೂನು. ಬೃಹತ್ ವಾಣಿಜ್ಯ ಚಟುವಟಿಕೆಗಳನ್ನು ಪರಿಮಿತಿಗೊಳಿಸಲಾಗುತ್ತದೆ ಎಂದು ಸ್ಪಷ್ಟ ಪಡಿಸಿದರು.

ಕಸ್ತೂರಿ ರಂಗನ್ ವರದಿಯಲ್ಲಿ ಕಾಡಿನ ಅಸುಪಾಸಿನ ಜನರನ್ನು ಒಕ್ಕಲೆಬ್ಬಿಸುವ ಯಾವುದೇ ಪ್ರಸ್ತಾಪವಿಲ್ಲ. ಇದರ ಹೊರತಾಗಿ ಈ ಮಸೂದೆಯಲ್ಲಿರುವ ಪ್ರಸ್ತಾಪ ಕುರಿತ ಆಕ್ಷೇಪಣೆ ಪರಿಶೀಲಿಸಿ, ಮಾರ್ಪಾಡು ಮಾಡಲು ಕೇಂದ್ರಕ್ಕೆ ಬೇಡಿಕೆ ಸಲ್ಲಿಸಬಹುದು.

ADVERTISEMENT

ಇಂತಹ ಅವಕಾಶ ಇರುವಾಗ ಇಡೀ ವನ್ಯ ಪರಿಸರ ಸೂಕ್ಷ್ಮ ಪ್ರದೇಶ ಎಂಬ ಘೋಷಣೆ ಕರಡು ವಿರೋಧಿಸುವುದು ತಪ್ಪಲ್ಲವೇ ಎಂದು ಮುಖಂಡರು ಪ್ರಶ್ನಿಸಿದರು.
ಅನುಮತಿಸಿದ ಚಟುವಟಿಕೆಗಳು, ಉತ್ತೇಜಿನ ಚಟುವಟಿಕೆಗಳು, ನಿರ್ಮಾಣ, ಅಂತರ್ಜಲ ಸಂಗ್ರಹ ಸೇರಿದಂತೆ ವಾಣಿಜ್ಯ ನೀರು ಸರಬರಾಜು, ನಿಷೇಧಿತ ಚಟುವಟಿಕೆಗಳು ಬಗ್ಗೆ ಕರಪತ್ರದಲ್ಲಿ ಮಾಹಿತಿ ನೀಡಲಾಗಿದೆ.

ಜನರನ್ನು ಕಾಡುವ ಪ್ರಶ್ನೆಗಳಿಗೆ ಕರಪತ್ರದಲ್ಲಿ ಉತ್ತರ ನೀಡಲಾಗಿದೆ. ನಾಲ್ಕು ಪುಟದ ಕರಪತ್ರವನ್ನು ಜಿಲ್ಲೆಯಾದ್ಯಂತ ಹಂಚಲು ಸಂಘಟನೆ ಪ್ರಮುಖರು ನಿರ್ಧರಿಸಿದ್ದಾರೆ.
ಜಿಲ್ಲೆಯ ಅಸ್ತಿತ್ವ, ಮೂಲ ಸಂಸ್ಕೃತಿಗೆ ಮಾರಕವಾದ ಭತ್ತದ ಗದ್ದೆಗಳ ಪರಿವರ್ತನೆ, ಅಣೆಕಟ್ಟು, ನದಿ ತಿರುವು ನಿರ್ಮಾಣ, ಜಲವಿದ್ಯುತ್ ಯೋಜನೆ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮಾರ್ಗ ನಿರ್ಮಾಣವನ್ನು ಪೂರ್ಣವಾಗಿ   ಕೈಬಿಟ್ಟರೆ ಸಾಮಾನ್ಯ ರೈತನ ದೈನಂದಿನ ಬದುಕಿಗೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಬಸವನ ದೇವರ ಬನ ಸಂರಕ್ಷಣಾ ಸಮಿತಿಯ ಡಾ.ಬಿ.ಸಿ. ನಂಜಪ್ಪ, ಸಿ.ಪಿ. ಮುತ್ತಣ್ಣ, ಸತ್ಯಶೋಧನಾ ಸಮಿತಿಯ ಚುಮ್ಮಿ ಪೂವಯ್ಯ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಎಂ.ಎನ್. ಚಂದ್ರಮೋಹನ್, ಕೊಡಗು ವನ್ಯಜೀವಿ ಸಂರಕ್ಷಣಾ ಸಮಿತಿಯ ಚೆಪ್ಪುಡೀರ ಶರಿ ಸುಬ್ಬಯ್ಯ, ಕಾವೇರಿ ನದಿ ಸಂರಕ್ಷಣಾ ಸಂಘದ ಪಿ.ಎಸ್. ಅಪ್ಪಯ್ಯ, ಕನ್ನಿ ಕಾವೇರಿ ಟ್ರಸ್ಟ್‌ನ ಸಿ.ಎಂ. ಮುತ್ತಣ್ಣ, ಅಮ್ಮತ್ತಿ ರೈತ ಸಂಘದ ಕೆ.ಯು. ಗಣಪತಿ, ಪಿ.ಬಿ. ಚಂಗಪ್ಪ, ಕೆ.ಪಿ. ಮುದ್ದಯ್ಯ ಕರಪತ್ರ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.