ADVERTISEMENT

ಕಾಡಾನೆ ಹಾವಳಿ; ತಡೆಗೋಡೆ ನಿರ್ಮಾಣ

₹1.3 ಕೋಟಿ ವೆಚ್ಚದಲ್ಲಿ ನಿರ್ಮಾಣ; ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 6:39 IST
Last Updated 27 ಮಾರ್ಚ್ 2017, 6:39 IST
ಕಾಡಾನೆ ಹಾವಳಿ; ತಡೆಗೋಡೆ ನಿರ್ಮಾಣ
ಕಾಡಾನೆ ಹಾವಳಿ; ತಡೆಗೋಡೆ ನಿರ್ಮಾಣ   
ಗೋಣಿಕೊಪ್ಪಲು: ಕಾಡಾನೆ ಹಾವಳಿ ತಡೆಗಟ್ಟುವ ಉದ್ದೇಶದಿಂದ ₹1.3 ಕೋಟಿ ವೆಚ್ಚದಲ್ಲಿ ನಾಗರಹೊಳೆ ಅರಣ್ಯದಂಚಿನ ಕುಂಬಾರ ಕಟ್ಟೆ, ಆಡುಗುಂಡಿಲ್ಲಿ ನಿರ್ಮಾಣ ಮಾಡಿರುವ ರೈಲು ಹಳಿ ಕಂಬಿ ತಡೆಗೋಡೆಯನ್ನು  ಶಾಸಕ ಕೆ.ಜಿ.ಬೋಪಯ್ಯ ಭಾನುವಾರ ಉದ್ಘಾಟಿಸಿದರು.
 
ಬಳಿಕ ಮಾತನಾಡಿದ ಅವರು, ಕಾಡಾನೆ ಹಾವಳಿಯನ್ನು ತಡೆಗಟ್ಟುವ ಶಾಶ್ವತ ಪರಿಹಾರ ಯೋಜನೆಗೆ ಮೂರು ವರ್ಷಗಳ ಹಿಂದೆಯೇ ಚಾಲನೆ ನೀಡಲಾಗಿತ್ತು.  ಇದೀಗ 2ಕಿಮೀ ಉದ್ದ ನಿರ್ಮಾಣಗೊಂಡಿರುವ ರೈಲು ಹಳಿ ತಡೆಗೋಡೆ ನಿರ್ಮಾಣದಿಂದ  ದೇವ ನೂರು-1, ದೇವನೂರು-2,  ಮಲ್ಲೂರು, ಜಾಗಲೆ, ನೇವರೆ, ಕಾರ್ಮಾಡು  ಕೊಟ್ಟ ಗೇರಿ ಹಾಗೂ  ನಿಟ್ಟೂರು ಗ್ರಾಮದ ಜನತೆ ನಿಟ್ಟುಸಿರು ಬಿಡುವಂತಾಗಿದೆ ಎಂದರು.
 
ಈ ಯೋಜನೆ ಛತ್ತೀಸ್‌ಘಡದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಎಚ್.ಡಿ.ಕೋಟೆಯ ಅರಣ್ಯದಂಚಿನಲ್ಲಿ ಮೊದಲ ಬಾರಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಯಿತು. ಇದೀಗ ಕೊಡಗಿ ನಲ್ಲೂ ಪ್ರಥಮ ಬಾರಿಗೆ ಯೋಜನೆ ಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. 
 
ಜಿಲ್ಲೆಯ ವಿವಿಧ ಭಾಗದ  ಅರಣ್ಯದಂಚಿನಲ್ಲಿ 126 ಕಿಮೀ ಉದ್ದದ  ತಡೆಗೋಡೆ ನಿರ್ಮಿಸಲು ₹276 ಕೋಟಿ ವೆಚ್ಚದ  ಯೋಜನೆಗೆ  ಪ್ರಸ್ತಾವ ಸಲ್ಲಿಸಲಾ ಗಿತ್ತು. ಇದೀಗ ಕೇವಲ 8 ಕೋಟಿಯಷ್ಟೆ ಬಿಡುಗಡೆಯಾಗಿದೆ ಎಂದು ಹೇಳಿದರು. 
 
ಅರಣ್ಯ ಪ್ರದೇಶದಲ್ಲಿ ಇಲಾಖೆ ವತಿಯಿಂದ ನಿರ್ಮಿಸುತ್ತಿರುವ ಕೆರೆಗಳು ತೀರ ಅವೈಜ್ಞಾನಿಕವಾಗಿವೆ. ನೀರಿನ ಮೂಲವೇ ಇಲ್ಲದ ಕಡೆ ಕೆರೆ ನಿರ್ಮಿಸಲಾ ಗುತ್ತಿದೆ.  ಇದರ ಬದಲಿಗೆ  ಚೆಕ್‌ಡ್ಯಾಂ ನಿರ್ಮಿಸಿ ಅರಣ್ಯದಲ್ಲಿ ನೀರು ನಿಲ್ಲಿಸ ಬೇಕು. ಇದರಿಂದ ಭೂಮಿಯಲ್ಲಿ ತೇವಾಂಶ ಉಳಿಯುತ್ತದೆ. ಕೆರೆ ಮತ್ತು ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತದೆ ಎಂದು ನುಡಿದರು.
 
ಅರಣ್ಯದಂಚಿನ ಜನತೆಯನ್ನು  ಕಾಡುತ್ತಿರುವ ಕಸ್ತೂರಿ ರಂಗನ್ ವರದಿಯನ್ನು ಮರು ಪರಿಶೀಲಿಸಬೇಕು. ಖಾಸಗಿ ಜಾಗವನ್ನು ವರದಿಯಿಂದ ಕೈಬಿಡಬೇಕು ಎಂದು ಹೇಳಿದರು.  ಮಾ. 27ರ ಒಳಗೆ  ರಾಜ್ಯ ಸರ್ಕಾರ ತಕರಾರು ಸಲ್ಲಿಸಿ ಜನತೆಯ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
 
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅರುಣ್ ಭೀಮಯ್ಯ ಮಾತನಾಡಿದರು. ಜಿಲ್ಲಾ ಪಂಚಾಯಿತಿ  ಮಾಜಿ ಸದಸ್ಯ ಅರಮಣಮಾಡ ರಂಜನ್  ಚಂಗಪ್ಪ,  ಗೋಣಿಕೊಪ್ಪಲು ಎಪಿಎಂಸಿ ಸದಸ್ಯರಾದ ಮಾಚಂಗಡ ಸುಜಾ ಪೂಣಚ್ಚ, ಆದೇಂಗಡ ವಿನು ಚಂಗಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುನಿತಾ, ಬಾಳೆಲೆ ಗ್ರಾಮ ಪಂಚಾಯಿತಿ  ಅಧ್ಯಕ್ಷೆ ಕಾಂಡೇರ ಕುಸುಮಾ, ಉಪಾಧ್ಯಕ್ಷ ಕೊಕ್ಕೆಂಗಡ ರಂಜನ್,  ಹಿರಿಯರಾದ ಬಾದುಮಂಡ ಪೊನ್ನಪ್ಪ,  ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯ ಚಕ್ಕೇರ ಸೂರ್ಯ ಅಯ್ಯಪ್ಪ, ಬಿಜೆಪಿ ಮುಖಂಡ ರಾದ ಕೆ.ಬಿ. ಗಿರೀಶ್ ಗಣಪತಿ, ಚಿಮ್ಮಣ ಮಾಡ ಕೃಷ್ಣ ಗಣಪತಿ  ಹಾಜರಿದ್ದರು.
 
ಕಾಡಾನೆ ದಾಳಿ; ಬಾಲಕಿ ಮನೆಗೆ  ಭೇಟಿ
ಗೋಣಿಕೊಪ್ಪಲು: ಕಾಡಾನೆ ದಾಳಿಗೆ ಬಲಿಯಾದ ತಾರಿಕಟ್ಟೆಯ ಸೌಫಾನ ಅವರ ಮನೆಗೆ ಶಾಸಕ ಕೆ.ಜಿ.ಬೋಪಯ್ಯ ಭಾನುವಾರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.
 
ತಂಗಿಯ ಸಾವಿನಿಂದ ಆಘಾತಗೊಂಡಿರುವ ಶಾಕೀರನ ಯೋಗ ಕ್ಷೇಮವನ್ನು ವಿಚಾರಿಸಿದರು. ಕಾಡು ಬೆಳೆದು ಬಹಳ ಇಕ್ಕಟ್ಟಾಗಿರುವ ತಾರಿಕಟ್ಟೆ ನೆಲ್ಲಿಕಾಡು ರಸ್ತೆಯನ್ನು ಅಗಲಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
 
ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಅರುಣ್ ಭೀಮಯ್ಯ, ಮುಖಂಡರಾದ ಕೆ.ಬಿ.ಗಿರೀಶ್ ಗಣಪತಿ, ಚೆಪ್ಪುಡಿರ ಮಾಚಯ್ಯ, ವಿರಾಜಪೇಟೆ ಸಹಕಾರ ಫೆಡರೇಷನ್‌ ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ,  ದೇವರಪುರ ಗ್ರಾಮ ಪಂಚಾಯಿತಿ ಸದಸ್ಯ ಕಿರಣ್ ಕುಮಾರ್, ದಿನೇಶ್, ವಸಂತ್ ಕುಮಾರ್, ಪೊನ್ನಮ್ಮ, ವಾಸು, ತಿತಿಮತಿ ಗ್ರಾಮ ಪಂಚಾಯಿತಿ  ಸದಸ್ಯ ಅನೂಪ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.