ADVERTISEMENT

ಕೂಲಿ ಕೆಲಸ ಮಾಡಿ ಪ್ರತಿಭಟನೆ

ಕಾಫಿ ಬೆಳೆಗಾರರ ಸಮಸ್ಯೆ ಈಡೇರಿಸಲು ಪ್ರಜಾರಂಗದ ಪದಾಧಿಕಾರಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 11:06 IST
Last Updated 2 ಜನವರಿ 2017, 11:06 IST

ಸೋಮವಾರಪೇಟೆ:  ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕೊಡಗು ಪ್ರಜಾರಂಗದ ಪದಾಧಿಕಾರಿಗಳು ಹೊಸವರ್ಷದ ದಿನ ವಾದ ಭಾನುವಾರ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುವ ಮೂಲಕ ಪ್ರತಿಭಟಿಸಿದರು.

ಪ್ರಜಾರಂಗದ ಜಿಲ್ಲಾ ಘಟಕದ ಅಧ್ಯಕ್ಷ ಕಾಟ್ನಮನೆ ವಿಠಲ್‌ಗೌಡರ ನೇತೃತ್ವದಲ್ಲಿ ಕುಸುಬೂರು ಗ್ರಾಮದ ಓಂಪ್ರಸಾದ್ ಅವರ ಕಾಫಿ ತೋಟದಲ್ಲಿ ಕಾಫಿ ಹಣ್ಣು ಕೊಯ್ಲು ಮಾಡುವ ಮೂಲಕ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಅಕಾಲಿಕ ಮಳೆ, ಕಾರ್ಮಿಕರ ಕೊರತೆ ಸೇರಿದಂತೆ ಇನ್ನಿತರ ಕಾರಣಗಳಿಂದ ಕಾಫಿ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಬೆಳೆಗಾರರು ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಗೊಬ್ಬರ ಸೇರಿದಂತೆ ಇನ್ನಿತರ ಪರಿಕರ ಗಳ ಬೆಲೆ ಹೆಚ್ಚಳದಿಂದ ತೋಟದಲ್ಲಿ 50 ಕೆ.ಜಿ. ತೂಕದ ಅರೇಬಿಕಾ ಕಾಫಿ  ಉತ್ಪಾದಿಸಲು ₹ 7 ಸಾವಿರ ವೆಚ್ಚ ತಗುಲುತ್ತಿದೆ. ಕಾಫಿ ತೋಟಗಳನ್ನು ನಿರ್ವಹಣೆ ಮಾಡಲು ಬೆಳೆಗಾರರಿಗೆ ಸಾಧ್ಯವಾಗುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಫಿ ಬೆಳೆಗಾರರು ಬೆಳೆ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ 50 ಕೆ.ಜಿ. ತೂಕದ ಚೆರಿ ಕಾಫಿಗೆ ₹ 2 ಸಾವಿರ ಬೆಂಬಲ ಬೆಲೆಯನ್ನು ನಿಗದಿಗೊಳಿಸಬೇಕು.  ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸಿಬೇಕಾದರೆ ಬೆಳೆಗಾರ ಅಥಾವ ಕಾರ್ಮಿಕರು ಮೃತಪಟ್ಟರೆ ₹ 10 ಲಕ್ಷ ಪರಿಹಾರ ವಿತರಿಸಬೇಕು. ರಾಸಾ ಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಖರೀದಿಗೆ ಶೇ 50 ಸಬ್ಸಿಡಿ ಕೊಡಬೇಕು. ತೋಟ ನಿರ್ವಹಣೆಯ ಪರಿಕರಗಳನ್ನು ಕಾಫಿ ಮಂಡಳಿ ಉಚಿತವಾಗಿ ನೀಡ ಬೇಕು ಎಂದು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನಾ ಸಂದರ್ಭ ಪ್ರಜಾ ರಂಗದ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಪೂವಯ್ಯ, ಕಾರ್ಯದರ್ಶಿ ಕೆ.ಜಿ.ಆನಂದ, ಸಂಚಾಲಕ ಬಿ.ಎಸ್. ಸುರೇಶ್, ಪದಾಧಿಕಾರಿಗಳಾದ ಕೆ.ಎಸ್.ಪ್ರಭು, ಸಿ.ಆರ್.ವೆಂಕಟೇಶ್, ಕೆ.ಸಿ.ಪ್ರಕಾಶ್, ಮೇದಪ್ಪ. ವೆಂಕಟೇಶ್, ಪುಪ್ಪಯ್ಯ, ನಂದಿಗುಂದ ದಯಾನಂದ, ದೇವರಾಜ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.