ADVERTISEMENT

ಕೃಷಿ ಸಂಸ್ಕೃತಿ ಎತ್ತಿಹಿಡಿದ ಕವಿ ಕುವೆಂಪು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2016, 8:25 IST
Last Updated 30 ಡಿಸೆಂಬರ್ 2016, 8:25 IST

ಕುಶಾಲನಗರ: ದೇಶದ ಅನ್ನದಾತನನ್ನು ನೇಗಿಲಯೋಗಿ ಎಂದು ಕರೆಯುವ ಮೂಲಕ ರೈತರಲ್ಲಿ ಆತ್ಮವಿಶ್ವಾಸವನ್ನು ತುಂಬವು ಮೂಲಕ ಕೃಷಿ ಸಂಸ್ಕೃತಿಯನ್ನು ಎತ್ತಿಹಿಡಿದ ಶ್ರೇಷ್ಠ ಕವಿ ಕುವೆಂಪು ಎಂದು ಮೈಸೂರು ವಿಜಯನಗರ ಸರ್ಕಾರಿ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಪಿ.ಬೆಟ್ಟೇಗೌಡ ಹೇಳಿದರು.

ಸ್ಥಳೀಯ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಗುರುವಾರ ಇಲ್ಲಿನ ರೈತ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ಒಕ್ಕಲಿಗರ ಯುವ ವೇದಿಕೆ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಹಿತ್ಯವನ್ನು ವೈದಿಕರು ಶಾಸ್ತ್ರವಾಗಿ ಬಳಸಿಕೊಂಡರೆ ಕುವೆಂಪು ಅವರು ಶಾಸ್ತ್ರವನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಮೂಲಕ ಸಾಮಾಜಿಕ ಬದಲಾವಣೆ ಶ್ರಮಿಸಿದರು ಎಂದು ಬಣ್ಣಿಸಿದರು.

ರಾಷ್ಟ್ರಕವಿ ಕುವೆಂಪು ಅವರು ಜಾತಿ, ಧರ್ಮವನ್ನು ಮೀರಿದ ಮಹಾನ್ ವ್ಯಕ್ತಿ, ಇವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು  ಎಂದು ಸಲಹೆ ನೀಡಿದರು.

ಪ್ರತಿಭೆಗೆ ಜಾತಿ, ಧರ್ಮ ಮತ್ತು ಗಡಿರೇಖೆಗಳಿಲ್ಲ. ಅಕ್ಷರ ಯಾವೊಂದು ಸಮುದಾಯದ ಸೊತ್ತಲ್ಲ ಎಂಬುದನ್ನು ಸಾಬೀತುಪಡಿಸಿದವರು ಕುವೆಂಪು ಎಂದು ಹೇಳಿದರು.
ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ಮಾತನಾಡಿ ಒಕ್ಕಲಿಗ ಸಮುದಾಯದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.

ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘದ ಗೌರವ ಆಧ್ಯಕ್ಷ ಎಂ.ಕೆ.ದಿನೇಶ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ, ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎಸ್.ರಾಜೇಶ್,  ಸೋಮವಾರಪೇಟೆ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬಿ.ಜೆ.ದೀಪಕ್ ಇದ್ದರು.

ಮೆರವಣಿಗೆ:  ಕುವೆಂಪು ಅವರ ಸ್ತಬ್ಧಚಿತ್ರದೊಂದಿಗೆ ವಾದ್ಯಗೋಷ್ಠಿಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ವೀರಗಾಸೆ ಕುಣಿತ,  ಡೊಳ್ಳು ಕುಣಿತ, ಗೊಂಬೆ ಕುಣಿತ ಮೆರವಣಿಗೆಗೆ ಮೆರುಗು ನೀಡಿದವು.

ರೈತ ಭವನದಿಂದ ಆರಂಭಗೊಂಡ ಮೆರವಣಿಗೆ ಐಬಿ ರಸ್ತೆ ಮೂಲಕ ಗಣಪತಿ ದೇವಸ್ಥಾನ ಬಳಿಗೆ ಬಿ.ಎಂ ರಸ್ತೆಯಲ್ಲಿ ಸಾಗಿ ಕಾರ್ಯಕ್ರಮ ಆಯೋಜಿಸಿದ್ದ ರೈತ ಸಹಕಾರ ಭವನದ ಸಭಾಂಗಣದಲ್ಲಿ ಮುಕ್ತಾಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.