ADVERTISEMENT

ಕೊಂಗಣ; ಯೋಜನೆ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 6:13 IST
Last Updated 31 ಡಿಸೆಂಬರ್ 2016, 6:13 IST

ಗೋಣಿಕೊಪ್ಪಲು: ಹುಣಸೂರು ತಾಲ್ಲೂಕಿಗೆ ನೀರು ಒದಗಿಸಲು ಕೊಂಗಣ ನದಿಗೆ ಆಣೆಕಟ್ಟೆ ನಿರ್ಮಿಸುವ ಯೋಜನೆ ವಿರೋಧಿಸಿ ಹೋರಾಟ ಮುಂದುವರಿಸಲು ಹುದಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸಭೆಯಲ್ಲಿ ನಿರ್ಧರಿಸಲಾಯಿತು.

ಹಿರಿಯರಾದ ಚೆಕ್ಕೇರ ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿ. ಶೆಟ್ಟಿಗೇರಿ, ಕುಂದ, ಈಚೂರು, ಕೊಂಗಣ, ಹುದಿಕೇರಿ ಹಾಗೂ ಬಲ್ಯಮಂಡೂರು ಗ್ರಾಮಸ್ಥರು ಜತೆಗೂಡಿ ಒಮ್ಮತದ ನಿರ್ಣಯ ತೆಗೆದುಕೊಂಡರು.

ಕೊಡಗಿನ ಜನತೆ ಹಾಗೂ ಜನಪ್ರತಿನಿಧಿಗಳನ್ನು ಕಡೆಗಣಿಸಿ ಯೋಜನೆ ಜಾರಿಗೆ ಮುಂದಾಗಿರುವುದನ್ನು ಖಂಡಿಸಲಾಯಿತು. ಇಲ್ಲಿ ನೀರಿಗೆ ಹಾಹಾಕಾರ ಆರಂಭವಾಗಿದೆ. ಈ ಸ್ಥಿತಿಯಲ್ಲಿ ಬೇರೆ ಜಿಲ್ಲೆಗೆ ನೀರು ಹರಿಸುವ ಅವಶ್ಯಕತೆ ಇಲ್ಲ. ಇಂತಹ ಯೋಜನೆಯನ್ನು ವಿರೋಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಭಾಗದ 16ಗ್ರಾಮ ಪಂಚಾಯಿತಿಗಳು ವಿಶೇಷ ಗ್ರಾಮ ಸಭೆ ಮೂಲಕ ಯೋಜನೆ ರದ್ದುಪಡಿಸಲು ಒತ್ತಾಯಿಸಿ ಸರ್ಕಾರಕ್ಕೆ ನಿರ್ಣಯ ಕಳುಹಿಸುವಂತೆ  ನಿರ್ಧರಿಸಲಾಯಿತು.
ಶಾಸಕ ಕೆ.ಜಿ.ಬೋಪಯ್ಯ, ‘ನಾನು ಸಭಾಧ್ಯಕ್ಷನಾಗಿದ್ದಾಗ ಯೋಜನೆಗೆ ವಿರೋಧಿಸಿದ್ದೆ. ಅಂದಿನ ಜಲಸಂಪನ್ಮೂಲ ಸಚಿವ ಬಸವರಾಜು ಬೊಮ್ಮಾಯಿ ಕೂಡಾ ವಿರೋಧಿಸಿದ್ದರು. ಅದನ್ನು ಮತ್ತೆ ಜಾರಿಗೆ ಸರ್ಕಾರ ಮುಂದಾಗಿದೆ ಎಂದು ದೂರಿದರು.

ವಿಧಾನ ಪರಿಷತ್ ಮಾಜಿ ಸದಸ್ಯ  ಅರುಣ್ ಮಾಚಯ್ಯ, ‘ಕೊಂಗಣ ನದಿ ತಿರುವು ಮೂಲಕ ಆಣೆಕಟ್ಟೆ ನಿರ್ಮಾಣಕ್ಕೆ ಮುಂದಾದರೆ, ಬಹುತೇಕ ಗ್ರಾಮಗಳು ಹಿನ್ನೀರಿನಿಂದ ಮುಳುಗಡೆಯಾಗಲಿವೆ. ಇಲ್ಲಿನ ನೀರನ್ನು ಕೃಷಿ ಮತ್ತು ಕುಡಿಯುವ ನೀರು ಯೋಜನೆಗೆ ಸ್ಥಳೀಯವಾಗಿ ಬಳಸುವ ಅವಶ್ಯಕತೆ ಇದೆ’ ಎಂದರು.

ಅರಣ್ಯ ನಿಗಮ ಮಂಡಳಿ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ‘ಯೋಜನೆ ಜಾರಿಯಾಗದಂತೆ ಹೋರಾಟ ನಡೆಸಲು ಬೆಂಬಲ ಸೂಚಿಸುವುದಾಗಿ ಘೋಷಿಸಿದರು.
ಜನಪರವಲ್ಲದ ಯೋಜನೆ ತಾರ್ಕಿಕ ಅಂತ್ಯ ಕಾಣುವವರೆಗೆ ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಘೋಷಿಸಿದರು. ಹೈಕೊರ್ಟ್ ವಕೀಲ ಪಾಂಡಂಡ ಮೇದಪ್ಪ, ಆಣೆಕಟ್ಟೆ ನಿರ್ಮಾಣ ಎಂಬುದು ಪ್ರಕೃತಿಗೆ ವಿರುದ್ಧವಾಗಿದೆ. ಜೀವ ಸಂಕುಲಗಳಿಗೆ ತೊಂದರೆ ಆಗುವುದನ್ನು ಗಮನಿಸಿ ಯೋಜನೆ ವಿರೋಧಿಸಬೇಕು ಎಂದರು.

ಜೆಪಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ ಟಿ ಪ್ರದೀಪ್ ಯೋಜನೆಯನ್ನು ವಿರೋಧಿಸಿ ಮಾತನಾಡಿದರು.
ರೈತ ಸಂಘ ಜಿಲ್ಲಾಧ್ಯಕ್ಷ ಮನು ಸೋಮಯ್ಯ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಅರುಣ್ ಭೀಮಯ್ಯ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮನೆಯಪಂಡ ಬೆಳ್ಯಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.