ADVERTISEMENT

ಕೊಡಗರಹಳ್ಳಿ ಚಾಮುಂಡೇಶ್ವರಿ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 9:11 IST
Last Updated 17 ಏಪ್ರಿಲ್ 2014, 9:11 IST

ಕುಶಾಲನಗರ: ಸಮೀಪದ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ  ಚಾಮುಂಡೇಶ್ವರಿ ದೇವಾಲಯದ 37ನೇ ವಾರ್ಷಿಕೋತ್ಸವ ಬುಧವಾರ ಕೊನೆಗೊಂಡಿತು.

ದೇವಾಲಯದ ಪ್ರಧಾನ ಅರ್ಚಕರಾದ ನಾರಾಯಣ್‌ ಪೂಜಾರ್ ಅವರ ನೇತೃತ್ವದಲ್ಲಿ  ಪೂಜಾ ವಿಧಿಗಳು ನಡೆದವು. ಬುಧವಾರ ಬೆಳಿಗ್ಗೆ 5 ಗಂಟೆಗೆ ಅಜ್ಜಪ್ಪ ಕೋಲ ಜರುಗಿತು. 6ಕ್ಕೆ ವಿಷ್ಣು ಮೂರ್ತಿ ಕೋಲ ನಡೆಯಿತು. ವಿಷ್ಣುಮೂರ್ತಿ ಕೋಲಕ್ಕಾಗಿ ದೇವಾಲಯದ ಆವರಣದಲ್ಲಿ ಹಾಕಲಾಗಿದ್ದ ಆಳೆತ್ತರದ ನಿಗಿನಿಗಿ ಸುಡುತ್ತಿದ್ದ ಕೆಂಡದ ರಾಶಿಯ ಕಾವು ತಾಳಲಾರದೆ ಭಕ್ತ ಸಮೂಹ ಕೆಂಡದ ರಾಶಿಯಿಂದ ದೂರದಲ್ಲೇ ನಿಂತಿತ್ತು. ಆದರೆ, ವಿಷ್ಣು ಮೂರ್ತಿ ಕೋಲವು ಕೆಂಡದ ರಾಶಿ ಮೇಲೆ ಬಿದ್ದು ಅಗ್ನಿ ಪ್ರವೇಶ ಮಾಡಿದ ದೃಶ್ಯ ಭಕ್ತ ಸಮೂಹವನ್ನು ನಿಬ್ಬೆರಗಾಗಿಸಿತು.

11ಕ್ಕೆ ಸರಿಯಾಗಿ ರಕ್ತೇಶ್ವರಿ ಮತ್ತು ಚಾಮುಂಡೇಶ್ವರಿ ಕೋಲಗಳನ್ನು ಪೂಜಿಸಲಾಯಿತು. ರಕ್ತೇಶ್ವರಿ ಮತ್ತು ಚಾಮುಂಡೇಶ್ವರಿ ಕೋಲಗಳನ್ನು ತೊಟ್ಟಿದ್ದ ನಾಪೋಕ್ಲು ಗ್ರಾಮದ ಭೀಮಯ್ಯ ಮತ್ತು ತಮ್ಮಯ್ಯ ಅವರ ಮೇಲೆ ಎರಡು ದೇವತೆಗಳನ್ನು ಬರಮಾಡಿಕೊಳ್ಳಲಾಯಿತು. ಬಳಿಕ ದೇವಾಲಯದ ಸುತ್ತು ಪ್ರದಕ್ಷಿಣೆ ಹಾಕಿದ ಕೋಲಗಳು ಕೆಂಡದ ರಾಶಿಗೂ ಪ್ರದಕ್ಷಿಣೆ ಹಾಕಿದವು.  ಚಾಮುಂಡೇಶ್ವರಿ ಮತ್ತು ರಕ್ತೇಶ್ವರಿ ದೇವತೆಗಳಿಗೆ ಮಹಾಮಂಗಳಾರತಿ ನೆರವೇರಿತು.

ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಭಕ್ತರು ಹರಕೆಗಳನ್ನು ತೀರಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಮೋಳೇರ ಅಪ್ಪಯ್ಯ ಮತ್ತು ದೇವಾಲಯ ಸಮಿತಿ ಪ್ರಮುಖರು ಹಾಜರಿದ್ದು ವಾರ್ಷಿಕೋತ್ಸವದ ಯಶಸ್ಸಿಗೆ ಶ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.