ADVERTISEMENT

ಕ್ರಿಸ್‌ಮಸ್; ಮನಸೂರೆಗೊಂಡ ನಕ್ಷತ್ರಗಳ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2016, 9:22 IST
Last Updated 26 ಡಿಸೆಂಬರ್ 2016, 9:22 IST

ಸುಂಟಿಕೊಪ್ಪ: ಕ್ರಿಸ್‌ಮಸ್  ಅಂಗವಾಗಿ  ವಿವಿಧ  ಗಾತ್ರದ ನಕ್ಷತ್ರಗಳನ್ನು ಇಲ್ಲಿನ ಸಂತ ಅಂತೋಣಿ ದೇವಾಲಯದ ಆವರಣದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು ಮನ ಸೆಳೆಯುತ್ತಿವೆ.

ಏಸುಕ್ರಿಸ್ತ ಡಿ.24 ರ ಮಧ್ಯ ರಾತ್ರಿ ವೇಳೆ  ಜನ್ಮ ತಾಳಿದ್ದು, ಈ ಸಂದರ್ಭದಲ್ಲಿ  ಆಕಾಶದಲ್ಲಿ ಬೆಳಕು ಹುಟ್ಟಿತು ಎಂಬ ನಂಬಿಕೆ ಇರುವ ಹಿನ್ನೆಲೆಯಲ್ಲಿ ಕ್ರೈಸ್ತರು ಇಂದಿಗೂ ಕ್ರಿಸ್‌ಮಸ್ ಆಚರಣೆಯ ಸಂದರ್ಭದಲ್ಲಿ ನಕ್ಷತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಬರುತ್ತಿದ್ದಾರೆ. 

ಇದೇ ಪ್ರಥಮ ಬಾರಿಗೆ  ಇಲ್ಲಿನ ಸಂತ ಅಂತೋಣಿ ದೇವಾಲಯದಲ್ಲಿ ಧರ್ಮಗುರು ಎಡ್ವರ್ಡ್  ವಿಲಿಯಂ ಸಲ್ಡಾನ ಅವರು ನಕ್ಷತ್ರಗಳ ಸ್ಪರ್ಧೆಯನ್ನು ಆಯೋಜಿಸಿದ್ದು, ಅದರಂತೆ ಅನೇಕರು ವಿವಿಧ ಮಾದರಿಯ ನಕ್ಷತ್ರವನ್ನು ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದ್ದರು.

17 ಅಡಿ ಎತ್ತರದ 2 ನಕ್ಷತ್ರಗಳು, 10 ಅಡಿ ಎತ್ತರದ ನಕ್ಷತ್ರ ಸೇರಿದಂತೆ  ವಿವಿಧ ಬಗೆಯ 14 ನಕ್ಷತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿರುವುದು ಕ್ರಿಸ್ ಮಸ್ ಹಬ್ಬದ ಸಡಗರಕ್ಕೆ ಇನ್ನಷ್ಟು ಮಹತ್ವ ನೀಡಿದಂತಾಗಿದೆ.

ಸಂಭ್ರಮದ ಕ್ರಿಸ್‌ಮಸ್:  ಇಲ್ಲಿನ ಸಂತ ಅಂತೋಣಿಯವರ ದೇವಾಲಯದಲ್ಲಿ ಶನಿವಾರ ರಾತ್ರಿ 11 ಗಂಟೆಯಿಂದ  ನೂರಾರು ಕ್ರೈಸ್ತರು ಸೇರಿ ಕ್ರಿಸ್ಮಸ್ ಗೀತೆ ಹಾಡಿ, ಬಲಿಪೂಜೆಯನ್ನು ನಡೆಸುವು ದರ ಮೂಲಕ  ಏಸು ಕ್ರಿಸ್ತನ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.

ಚರ್ಚ್ ಪಕ್ಕದಲ್ಲಿ  ಏಸು ಹುಟ್ಟಿದ ನೆನಪನ್ನು ಮೂಡಿಸುವ ಗೋದಲಿ ಯನ್ನು ಹುಲ್ಲು ಕುಟೀರದೊಳಗೆ ನಿರ್ಮಿ ಸಿದ್ದು, ರಾತ್ರಿ 12 ರ ವೇಳೆಗೆ ಧರ್ಮಗುರು  ವಿಲಿಯಂ ಎಡ್ವಾರ್ಡ್ ಸಲ್ಡಾನ ವಿಶೇಷ ಪೂಜೆ ನೆರವೇರಿಸಿದರು.

ನಂತರ ಸಿಡಿಮದ್ದನ್ನು ಸಿಡಿಸಿ ಸಂತಸಪಟ್ಟರು. ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಸಂತ ಅಂತೋಣಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ಸಾಮೂಹಿಕ ಪ್ರಾರ್ಥನೆ
ಶನಿವಾರಸಂತೆ: ಸಮೀಪದ ಗೋಪಾಲ ಪುರ ಗ್ರಾಮದ ಸಂತ ಅಂತೋಣಿ ಚರ್ಚ್ ನಲ್ಲಿ ಭಾನುವಾರ ಕ್ರೈಸ್ತ ಸಮುದಾ ಯದವರು ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮ–ಸಡಗರದಿಂದ ಆಚರಿಸಿದರು.

ಚರ್ಚ್ ನಲ್ಲಿ ಶನಿವಾರ ರಾತ್ರಿ 12 ಗಂಟೆಯ ಬಳಿಕ ಪಾಧರ್ ಡೇವಿಡ್ ಸಗಾಯ್ ರಾಜ್ ವಿಶೇಷ ಪೂಜೆ ಸಲ್ಲಿಸಿದರು. ನಂತರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಗೋಪಾಲಪುರ, ಶನಿವಾರಸಂತೆ, ಬೀಟಿಕಟ್ಟೆ, ಕೊಡ್ಲಿಪೇಟೆ, ಜಾಗೇನಹಳ್ಳಿ ಇತರ ಗ್ರಾಮಗಳ ಕ್ರೈಸ್ತ ಸಮುದಾಯದವರು ಪಾಲ್ಗೊಂಡಿದ್ದರು.

ಭಾನುವಾರವೂ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನಡೆಯಿತು. ಚರ್ಚ್ ಮುಂಭಾಗದಲ್ಲಿ ಏಸುಕ್ರಿಸ್ತನ ಜನನವನ್ನು ಸಾರುವ ಗೋದಲಿ ಆಕರ್ಷಕವಾಗಿದ್ದು ನೋಡುಗರನ್ನು ಆಕರ್ಷಿಸಿತು.

ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಕ್ರಿಸ್ತ ಸಮುದಾಯದವರು ಸಂಜೆ ನಡೆದ ಸಂಗೀತ ಹಾಗೂ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಪ್ರತಿ ಮನೆಗಳಲ್ಲೂ ಕೇಕ್, ಕರ್ಜಿಕಾಯಿ, ರೋಸ್ ಪಪ್, ಚಕ್ಕುಲಿ, ಕಲ್ ಕಲ್, ಅಂಟಿನುಂಡೆ ಇತ್ಯಾದಿ ತಿಂಡಿತಿನಿಸು ಗಳನ್ನು ಮಾಡಿದ್ದು ಬಂಧುಬಳಗ, ಸ್ನೇಹಿ ತರ ಮನೆಗೆಲ್ಲ ಹಂಚಿ ಸಂಭ್ರಮಿಸಿದರು.

ಕ್ರಿಸ್‌ಮಸ್‌ ಸಂದೇಶ
ವಿರಾಜಪೇಟೆ:  ಪ್ರತಿಯೊಂದು ಧರ್ಮ ದವರು ಪರಸ್ಪರ ಗೌರವ ನೀಡುವ ಮೂಲಕ ಹೊಂದಾಣಿಕೆಯಿಂದ ಸಮಾಜದಲ್ಲಿ ಮುನ್ನಡೆದರೆ ಮಾತ್ರ ಬದುಕಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಪಟ್ಟಣದ ಸಂತ ಅನ್ನಮ್ಮ ದೇವಾಲಯದ ಮುಖ್ಯ ಧರ್ಮಗುರು ರೆ.ಫಾ. ಮದಲೈ ಮುತ್ತು ಅವರು ಕ್ರಿಸ್‌ಮಸ್‌ ಸಂದೇಶದಲ್ಲಿ ಹೇಳಿದರು.

ಪಟ್ಟಣದ ಸಂತ ಅನ್ನಮ್ಮ ದೇವಾಲ ಯದ ಆವರಣದಲ್ಲಿ  ಕ್ರಿಸ್‌ಮಸ್ ಹಬ್ಬ ಪ್ರಯುಕ್ತ ಏಸುವಿನ ಜನನವನ್ನು ಸಾರುವ ಬಾಲ ಯೇಸುವಿನ ಮೂರ್ತಿಯನ್ನು ಮಧ್ಯರಾತ್ರಿ ಗೋದಲಿಯಲ್ಲಿ ಮಲಗಿಸಿದ ಬಳಿಕ ಅವರು ಹಬ್ಬದ ಸಂದೇಶವನ್ನು ನೀಡಿದರು.

ಹಬ್ಬದ ಪ್ರಯುಕ್ತ ಸಂತ ಅನ್ನಮ್ಮ ದೇವಾಲಯದಲ್ಲಿ ಕೆಲವು ದಿನಗಳಿಂದ ಪೂರ್ವಸಿದ್ಧತೆ ನಡೆಸಲಾಗಿತ್ತು. ಶನಿವಾರ ರಾತ್ರಿ ಸುಮಾರು 11 ಕ್ಕೆ ದೇವಾಲಯ ದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಆರಂಭಿಸಲಾಯಿತು. ರಾತ್ರಿ ಏಸುವಿನ ಜನನದ ಬಳಿಕ ದೇವಾಲಯದಲ್ಲಿ ದಿವ್ಯ ಬಲಿ ಪೂಜೆಯನ್ನು ನೆರವೇರಿ ಸಲಾಯಿತು. ಈ ಸಂದರ್ಭ ಶತಮಾನದ ಇತಿಹಾಸವಿರುವ ಸಂತ ಅನ್ನಮ್ಮ ದೇವಾಲಯದ ಮಾದರಿ ಸಾರ್ವಜನಿಕರ ಗಮನಸೆಳೆಯಿತು. ಈ ವೇಳೆ ದೇವಾಲಯದ ಧರ್ಮಗುರು ಗಳಾದ ರೆ.ಫಾ. ಟೆನ್ನಿ ಕುರಿಯನ್‌ ಹಾಗೂ ರೆ.ಫಾ. ಬಾಲರಾಜ್‌ ಸೇರಿದಂತೆ ನೂರಾರು ಜನರು ಹಾಜರಿದ್ದರು.

ವಿಜೃಂಭಣೆ
ನಾಪೋಕ್ಲು: ಮೇರಿಮಾತೆ ಚರ್ಚ್‌ನಲ್ಲಿ ಭಾನುವಾರ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತರು ವಿಜೃಂಭಣೆಯಿಂದ ಆಚರಿಸಿದರು. ಹಬ್ಬದ ಪ್ರಯುಕ್ತ ಚರ್ಚ್‌ನ ಆವರಣದಲ್ಲಿ ಏಸುವಿನ ಜನನವನ್ನು ಬಿಂಬಿಸುವ ಆಕರ್ಷಕ  ಗೋದಲಿ ನಿರ್ಮಿಸಲಾಗಿತ್ತು. ಬಾಲ ಏಸುವಿನ ಮೂರ್ತಿಯನ್ನು ಧರ್ಮಗುರು ಇಗ್ನೇಷಿಯಸ್ ಮರ್ಕರೇನಸ್ ಪೂಜಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ನಂತರ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ಸಮಾಜ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿ ಕೊಂಡರು. ಮೇರಿಮಾತೆ ಚರ್ಚ್‌ನ ಉಪಾಧ್ಯಕ್ಷೆ ಎಲ್ಸಮ್ಮ ,ಕಾರ್ಯದರ್ಶಿ ಎಂ.ಜೆ. ಜಾರ್ಜ್‌, ಖಜಾಂಚಿ ಎಂ. ಲೂವಿಸ್, ಕೆ.ಜೆ.ಜಾಯ್‌, ಎಂ.ಜೆ. ಜೋಸಿ ಸಿರಿಯಾಕ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.