ADVERTISEMENT

ಜಲ ಸಂರಕ್ಷಣೆಗೆ ಕೆರೆಗಳ ಕೊಡುಗೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 10:27 IST
Last Updated 22 ಮಾರ್ಚ್ 2017, 10:27 IST

ನಾಪೋಕ್ಲು: ಈಗ ಎಲ್ಲೆಲ್ಲೂ ನೀರಿಗೆ ತತ್ವಾರ. ಕುಡಿಯುವ ನೀರಿಗೂ ಕೊರತೆ ಅಂದಮೇಲೆ ಕೃಷಿಗೆ ಇನ್ನೆಲ್ಲಿ? ಲೆಕ್ಕಾಚಾರವಿಲ್ಲದೆ ಬಳಸಿಕೊಂಡ ನೀರಿನಿಂದ ಜಲಮೂಲಗಳೆಲ್ಲ ಬತ್ತುತ್ತಿವೆ.

ಹಿಂದೆ ಹಿರಿಯರು ಕೆರೆಗಳ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿದ್ದರು. ‘ಊರಿಗೊಂದು ಕೆರೆಯಾದರೆ ಬಾವಿಗೆಲ್ಲ ನೀರೇ ನೀರು...’ ಎಂಬ ಗಾದೆ ಮಾತು ಪ್ರಚಲಿತದಲ್ಲಿತ್ತು.

ಊರೂರಲ್ಲಿ ತೋಡು, ಬಾವಿ, ಕೆರೆಗಳನ್ನು ನಿರ್ಮಿಸಿದ್ದರು. ಒಂದು ಕೆರೆ ತುಂಬಿದರೆ ಸುತ್ತಲಿನ ಅದೆಷ್ಟೋ ಬಾವಿಗಳಿಗೆ ಜೀವಸೆಲೆ ಒದಗಿಸುತ್ತದೆ. ಹಲವು ಜಮೀನುಗಳಲ್ಲಿ ಜಲ ಸಂವರ್ಧನೆಗೊಳ್ಳುತ್ತದೆ. ಹಾಗಾಗಿಯೇ ಗ್ರಾಮಗಳಲ್ಲಿ ನಿರ್ಮಾಣಗೊಂಡ ದೇವಾಲಯಗಳ ಬಳಿ ಕೆರೆಗಳಿರುವುದನ್ನು ಕಾಣಬಹುದು.

ನಾಪೋಕ್ಲುವಿನಲ್ಲಿ ಹಲವಾರು ವರ್ಷಗಳ ಇತಿಹಾಸವಿರುವ ದೇವಾಲಯಗಳ ಬಳಿ ಆಕರ್ಷಕ ಕೆರೆಗಳಿವೆ. ಸಮೀಪದ ಹಳೆತಾಲೂಕಿನ ನಾಡು ಭಗವತಿ ದೇವಾಲಯ, ಬೇತು ಗ್ರಾಮದ ಮಕ್ಕಿಶಾಸ್ತಾವು ದೇವಾಲಯಗಳ ಬಳಿ ಇರುವ ಕೆರೆಗಳಲ್ಲಿ ಜಲಸಂರಕ್ಷಣೆಯ ಮಹತ್ವದ ಪಾಠಗಳಿವೆ.

ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಕೆರೆಗಳಿಂದಾಗಿ ಹತ್ತಿರದಲ್ಲಿ ಜನವಾಸ್ತವ್ಯ ಕಲ್ಪಿಸಿಕೊಂಡವರು ನೀರಿನ ವಿಷಯದಲ್ಲಿ ನೋವು ಕಂಡಿಲ್ಲ. ಈ ಕೆರೆಗಳಿಂದ ಭೂ ಒಡಲಲ್ಲಿ ನೀರು ಸಂಗ್ರಹಗೊಳ್ಳುತ್ತಿರುವುದರಿಂದ ಮಳೆ ಕೊರತೆಯ ಬೇಸಿಗೆಗಳಲ್ಲೂ ಸುತ್ತಲಿನ ಬಾವಿಗಳು ಬತ್ತದೇ ಸದಾ ನೀರು ತುಂಬಿಕೊಂಡಿರುತ್ತವೆ.

ದೇವಾಲಯಗಳ ಬಳಿ ಇರುವ ಕೆರೆಗಳನ್ನು ಹೊರತುಪಡಿಸಿ ಗ್ರಾಮಸ್ಥರ ನಿರ್ಲಕ್ಷ್ಯದಿಂದ ಊರುಗಳಲ್ಲಿ ಇದ್ದ ಹಳೆಯ ಸಾರ್ವಜನಿಕ ಹೂಳು ತುಂಬಿ ಮುಚ್ಚಿಹೋಗಿವೆ.

ಇತ್ತೀಚೆಗೆ ಆಹಾರ ಬೆಳೆಗಳನ್ನು ಮೂಲೆಗೆ ಸರಿಸಿ ವಾಣಿಜ್ಯ ಬೆಳೆಗಳತ್ತ ರೈತರ ಮನಸ್ಸು ತಿರುಗಿದಾಗಲೇ ರೈತರ ಸ್ವಂತ ಜಮೀನಿನ ಕೆರೆಗಳಿಗೆ ಮಹತ್ವ ಬಂದಿರುವುದನ್ನು ಕಾಣಬಹುದು. ಕಾಫಿಯ ಕೃಷಿಗೆ ಅನಿವಾರ್ಯವೆನಿಸಿದ ಹೂವು ಮಳೆಗಾಗಿ ಬಹುತೇಕ ಬೆಳೆಗಾರರು ತಮ್ಮ ಜಮೀನಿನಲ್ಲಿನ ಕೆರೆಗಳನ್ನು ಅವಲಂಬಿಸಿದ್ದಾರೆ.

ಆದರೆ, ನೀರಾವರಿ ವಿಧಾನಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದ ಮೋಟಾರು ಪಂಪ್‌ ಹಾಗೂ ನೀರಿನ ಬಾಷ್ಪೀಕರಣಕ್ಕೆ ಇಂಬು ನೀಡಿದ ಸ್ಪಿಂಕ್ಲರ್‌ಗಳ ಬಳಕೆಯಿಂದ ಸಾಂಪ್ರದಾಯಿಕ ಜಲಮೂಲಗಳು ಬತ್ತುತ್ತಿವೆ.

ಕೆರೆ ನೀರನ್ನು ಬಳಸಿಕೊಳ್ಳುವಲ್ಲಿ ಬೆಳೆಗಾರರಿಗಿರುವ ಧಾವಂತ ಮಳೆನೀರಿನ ಸಂರಕ್ಷಣೆಯಲ್ಲಿಲ್ಲ. ಹಿರಿಯರು ಕೆರೆಗಳ ಸಂರಕ್ಷಣೆಗೆ ನೀಡಿದ ಮಹತ್ವವನ್ನು ಯುವಜನರಿಗೆ ತಿಳಿಯಪಡಿಸುವ ಕೆಲಸವಾಗಬೇಕಿದೆ. ಕೆರೆ ಕಾಯಕಲ್ಪದ ಪಾಠವನ್ನು ಬೋಧಿಸಬೇಕಾದುದು ವಿಶ್ವ ಜಲದಿನದ ಈ ಸಂದರ್ಭದಲ್ಲಿ ಅತ್ಯಂತ ಅಗತ್ಯವಾದುದಾಗಿದೆ.
-ಸುರೇಶ್‌ ಸಿ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT