ADVERTISEMENT

ಜಾತಿ, ಮತ ಬಿಡಿ; ಕನ್ನಡಕ್ಕಾಗಿ ಹೋರಾಡಿ

ಕರ್ನಾಟಕ ಏಕೀಕರಣದ 60ನೇ ವರ್ಷಾಚರಣೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 9:06 IST
Last Updated 2 ಮಾರ್ಚ್ 2017, 9:06 IST

ಸೋಮವಾರಪೇಟೆ: ರಾಜ್ಯದ ಕನ್ನಡ ನಾಡು, ನುಡಿ ರಕ್ಷಣೆಯ ವಿಚಾರ ಬಂದಾಗ ನಾವು ಜಾತಿ, ಮತ  ಭೇದ ಮರೆತು ಹೋರಾಟ ನಡೆಸಿ ನಮ್ಮ ತನವನ್ನು ಉಳಿಸಿಕೊಳ್ಳಬೇಕಿದೆ ಎಂದು ಜಲಾಲೀಯ ಮಸೀದಿಯ ಧರ್ಮಗುರು ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಹೇಳಿದರು. 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ವತಿಯಿಂದ ಇಲ್ಲಿನ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಬುಧವಾರ ನಡೆದ ಕರ್ನಾಟಕ ಏಕೀಕರಣದ 60ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ  ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯ ಉದ್ದೇಶದಿಂದ  ಹೆಚ್ಚಿನ ಕಾರ್ಯಕ್ರಮಗಳನ್ನು  ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ  ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ, ಪೋಷಕರ ಹಾಗೂ ಶಿಕ್ಷಕರ ಸಹಕಾರ ಅತಿ ಮುಖ್ಯ ಎಂದರು. 

ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಳೆದು ಬಂದ ಬಗ್ಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರಾದ ಎಸ್.ಸಿ. ರಾಜಶೇಖರ್ ಮಾತನಾಡಿದರು.

ಏಕೀಕರಣದ ನಂತರ ಕೊಡಗು ಜಿಲ್ಲೆಯ ಚಿತ್ರಣದ ಕುರಿತು  ಶನಿವಾರಸಂತೆ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ  ಎಂ.ಎನ್. ಹರೀಶ್ ಉಪನ್ಯಾಸ ನೀಡಿದರು. ಇದೇ ಸಂದರ್ಭ ಹಿರಿಯ  ಸದಸ್ಯರಾದ ಎಸ್.ಪಿ. ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್‌ನ ಖಜಾಂಚಿ ಎಸ್.ಎ. ಮುರಳೀಧರ್, ನಿರ್ದೇಶಕರಾದ ಕವನ್ ಕಾರ್ಯಪ್ಪ, ಕುವೆಂಪು ವಿದ್ಯಾಸಂಸ್ಥೆಯ  ಮುಖ್ಯ ಶಿಕ್ಷಕಿ ಮಿಲ್‌ಟ್ರೆಡ್ ಗೊನ್ಸಾಲ್ವೇಸ್‌,  ಬಿ.ಟಿ. ಚೆನ್ನಯ್ಯ ಗೌರಮ್ಮ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ  ಕೆ. ಬಾಲಕೃಷ್ಣ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.