ADVERTISEMENT

ಜಾನುವಾರು ಆಹಾರ ಭದ್ರತೆಗೆ ‘ಮೇವು ಬ್ಯಾಂಕ್‌’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:41 IST
Last Updated 14 ಮಾರ್ಚ್ 2017, 6:41 IST

ಮಡಿಕೇರಿ: ಜನರಿಗೆ ಆಹಾರ ಭದ್ರತೆ ಹೇಗಿದೆಯೋ ಅದೇ ಮಾದರಿಯಲ್ಲಿ ಜಾನುವಾರುಗಳಿಗೂ ಮೇವಿನ ಭದ್ರತೆ ಒದಗಿಸಲು ರಾಜ್ಯದ ಎಲ್ಲಾ ತಾಲ್ಲೂಕು ಗಳಲ್ಲಿ ‘ಮೇವು ಬ್ಯಾಂಕ್’ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಶು ಸಂಗೋಪನಾ ಹಾಗೂ ರೇಷ್ಮೆ ಸಚಿವ ಎ.ಮಂಜು ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ಸಂಬಂಧ ನಡೆದ ರಾಜ್ಯ ಮಟ್ಟದ ವಿಡಿಯೊ ಸಂವಾದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಪೂರೈಕೆ ಮಾಡಲು ಪ್ರತಿ ತಾಲ್ಲೂಕಿನಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಈಗಾಗಲೇ ತಲಾ ₹ 20 ಲಕ್ಷ ಬಿಡುಗಡೆ ಮಾಡಲಾಗಿದೆ. ಜಾನುವಾರುಗಳಿಗೆ ನೀರು ಮತ್ತು ಮೇವು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ ಎಂದು ಭರವಸೆ ನೀಡಿದರು.

ADVERTISEMENT

ಹಾಲು ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಹಾಲು ದರ ಹೆಚ್ಚಳ ಸಂಬಂಧಿಸಿದಂತೆ ಚರ್ಚೆಗಳು ನಡೆಯು ತ್ತಿವೆ. ಈ ಸಂಬಂಧ ಈಗಾಗಲೇ ಒಂದು ಸಭೆ ನಡೆದಿದ್ದು, ಮತ್ತೊಂದು ಸಭೆಯನ್ನು ಸದ್ಯದಲ್ಲೇ ಆಹ್ವಾನಿಸಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮೊದಲು ಪಶುಪಾಲನಾ ಇಲಾಖೆಯ ಪ್ರಗತಿ ಪರಿಶೀಲನೆ ವಿಡಿಯೊ ಸಂವಾದದಲ್ಲಿ ಇಲಾಖೆಯ ಕಾರ್ಯಕ್ರಮ ಗಳಾದ ಪಶುಭಾಗ್ಯ ಯೋಜನೆ ಅನು ಷ್ಠಾನ, ವಿಶೇಷ ಅಭಿವೃದ್ಧಿ ಯೋಜನೆ, ಹೈನುಗಾರಿಕೆ, ಅಮೃತ ಯೋಜನೆ, ಕುರಿ ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆ, ಸಂಬಂಧ ಪ್ರಗತಿ ಪರಿಶೀಲನೆ ನಡೆಸಿದರು.  

ಕೆಲವು ಜಿಲ್ಲೆಗಳಲ್ಲಿ ಪ್ರಗತಿ ಸಾಧಿಸ ದಿರುವುದಕ್ಕೆ ಸಚಿವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಈಗಾಗಲೇ ಬೇಸಿಗೆ ಶುರುವಾಗಿರುವುದರಿಂದ ಎಲ್ಲಾ ತಾಲ್ಲೂಕುಗಳಲ್ಲಿ ಮೇವು ಸಂಗ್ರಹಣೆ ಮಾಡಿ ಕೊಂಡಿರಬೇಕು. ಎಲ್ಲಾ ಕಡೆಗಳಲ್ಲಿ ಸರ್ಕಾರದ ನಿರ್ದೇಶನದಂತೆ ಜಾನುವಾರುಗಳಿಗೆ ಮೇವು ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಮೇವು ಕೊರತೆ ಇದೆ ಎಂಬ ದೂರುಗಳು ಕೇಳಿ ಬರಬಾರದು ಎಂದು ಎ.ಮಂಜು ಸೂಚಿಸಿದರು.

ರೈತರು ಬದುಕಲು ಹೈನುಗಾರಿಕೆ ಉಪಯುಕ್ತವಾಗಿದೆ. ಆ ನಿಟ್ಟಿನಲ್ಲಿ ರೈತರಿಗೆ ಅನುಕೂಲ ಮಾಡಬೇಕು. ಅಧಿಕಾರಿಗಳು ಜಾನುವಾರುಗಳ ರಕ್ಷಣೆ ಮಾಡುವುದು ಮತ್ತು ಪೋಷಣೆ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸಚಿವರು ಸ್ಪಷ್ಟ ನಿರ್ದೇಶನ ನೀಡಿದರು. 

ಮಾರ್ಚ್ ಅಂತ್ಯದೊಳಗೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಸೇರಿದಂತೆ ಇತರೆ ಎಲ್ಲಾ ಯೋಜನೆಗಳನ್ನು ಮಾರ್ಚ್ ಅಂತ್ಯ ದೊಳಗೆ ಪೂರ್ಣಗೊಳಿಸಿ ಪ್ರಗತಿ ಸಾಧಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

**

ಸರ್ಕಾರ ರೈತರ ಸಂಕಷ್ಟ ನಿವಾರಣೆಗೆ ಸದಾ ಬದ್ಧವಾಗಿದೆ. ಆ ನಿಟ್ಟಿನಲ್ಲಿ ಮುಂದಿನ ಸಭೆಯಲ್ಲಿ ಹಾಲು ದರ ನಿರ್ಧರಿಸಲಾಗುವುದು ಎ.ಮಂಜು
-ಪಶು ಸಂಗೋಪನಾ ಹಾಗೂ ರೇಷ್ಮೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.