ADVERTISEMENT

ಜಿಎಸ್‌ಟಿ: ಜನಸಾಮಾನ್ಯರಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 8:57 IST
Last Updated 6 ಜುಲೈ 2017, 8:57 IST

ಮಡಿಕೇರಿ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ರಮೇಶ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಗರಾಭಿವೃದ್ಧಿ ಇಲಾಖೆಯಿಂದ ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಎಂಜಿನಿಯರ್‌ ಹಾಗೂ ಲೆಕ್ಕ ಅಧಿಕಾರಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

‘ದಿನ ಬಳಕೆ ಪದಾರ್ಥಗಳು ತೆರಿಗೆ ವಿನಾಯಿತಿ ಪಡೆಯಲಿವೆ. ಬಡ ಮತ್ತು ಸಾಮಾನ್ಯ ನಾಗರಿಕರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಸಾಕಷ್ಟು ಲಾಭಗಳು ದೊರೆಯಲಿವೆ. ಸಣ್ಣ ವ್ಯಾಪಾರಿಗಳು ಹಂತ ಹಂತವಾಗಿ ಅನುಕೂವಾಗಲಿದೆ’ ಎಂದು ಹೇಳಿದರು.

‘ನೋಂದಣಿ, ಕರ ಪಾವತಿ, ರಿಟರ್ನ್ ಸಲ್ಲಿಕೆ ಮತ್ತು ತೆರಿಗೆಗಳ ಮರು ಸಂದಾ ಯಕ್ಕೆ ಸಾಮಾನ್ಯ ಪ್ರಕ್ರಿಯೆಗಳು ನಡೆಯಲಿವೆ. ಸಂಘಟಿತ ಸಾಮಾನ್ಯ ಮಾರುಕಟ್ಟೆ ಸೃಷ್ಟಿಯಾಗಲಿದೆ. ಉತ್ಪಾದನಾ ಕೇಂದ್ರ ಜಾಲ ವಿಸ್ತರಿಸಲಿದೆ. ಹೂಡಿಕೆಗಳು ಮತ್ತು ರಫ್ತು ಪ್ರಮಾಣ ವೃದ್ಧಿಯಾಗಲಿದೆ’ ಎಂದು ರಮೇಶ್ ತಿಳಿಸಿದರು.

ADVERTISEMENT

‘ವಿಭಿನ್ನ ತೆರಿಗೆಗಳು ಕಡಿತಗೊಂಡು ವ್ಯವಸ್ಥೆ ಸರಳೀಕರಣವಾಗಲಿದೆ. ಎಲ್ಲಾ ರೀತಿಯಲ್ಲೂ ಜಿಎಸ್‌ಟಿ ವ್ಯವಸ್ಥೆ ಅನುಕೂಲವಾಗಲಿದೆ. ಸರಕು ಮತ್ತು ಸೇವೆಗಳ ಚಲನವಲನಗಳು ಸ್ವಾತಂತ್ರ್ಯಗೊಳ್ಳಲಿದ್ದು, ಸ್ಪರ್ಧಾತ್ಮಕ ಹೆಚ್ಚಳ ಉಂಟಾಗುವುದರಿಂದ ಗ್ರಾಹಕರಿಗೆ ಲಾಭವಾಗಲಿದೆ. ದೇಶದಾದ್ಯಂತ ಇರುವ ಉತ್ಪಾದಕರು ಮತ್ತು ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ವಿವರಿಸಿದರು.

‘ಜಿಎಸ್‌ಟಿ ಜಾರಿಯಾಗುವುದರಿಂದ ವಸ್ತುಗಳ ಬೆಲೆ ಕಡಿಮೆಯಾಗುವುದರ ಜೊತೆಗೆ ರಫ್ತಿಗೂ ಸಹಕಾರಿ ಆಗಲಿದೆ. ಅಂತರ ರಾಜ್ಯ ಮತ್ತು ಅಂತರರಾಷ್ಟ್ರೀಯ ವಹಿವಾಟು ಬೆಳವಣಿಗೆಗೆ ಜಿಎಸ್‌ಟಿ ಬಹು ಉಪಯುಕ್ತವಾಗಲಿದೆ. ಯಾವುದೇ ಅಡೆತಡೆ ಇಲ್ಲದೆ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.

ವಾಣಿಜ್ಯ ತೆರಿಗೆ ಇಲಾಖೆಯ ಮತ್ತೊಬ್ಬ ಅಧಿಕಾರಿ ಪ್ರಧಾನ್ ಮಾತನಾಡಿ, ಪಾರದರ್ಶಕತೆಯಿಂದ ತೆರಿಗೆ ಸಂಗ್ರಹಣೆ ವೃದ್ಧಿಯಾಗಲಿದೆ. ತೆರಿಗೆ ಹೆಚ್ಚಳದಿಂದ ವಸ್ತುಗಳ ಬೆಲೆ ಇಳಿಮುಖವಾಗಲಿದೆ ಎಂದು ಮಾಹಿತಿ ನೀಡಿದರು. 

ಈ ಹಿಂದೆ ರಾಜ್ಯದಲ್ಲಿ ವ್ಯಾಟ್ ಪದ್ಧತಿ ಇತ್ತು; ಈಗ ಜಿಎಸ್‌ಟಿ ಆಗಿದೆ. ಇನ್ನು ಮುಂದೆ ಜಿಎಸ್‌ಟಿ ಹೊಸ ಪದ್ಧತಿಯಂತೆ ಕಾರ್ಯನಿರ್ವಹಣೆ ಮಾಡಬೇಕಿದೆ ಎಂದು ಮಾಹಿತಿ ನೀಡಿದರು. ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಪಾವತಿ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಸ್ಪಷ್ಟತೆ ಇರಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕ ಮಹಮ್ಮದ್ ಮುನೀರ್ ಹೇಳಿದರು. ನಗರಸಭೆಯ ಎಇಇ ಸ್ವಾಮಿ, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಎಂಜಿನಿಯರ್‌ಗಳಾದ ಶಿವಕುಮಾರ್, ಹೇಮಕುಮಾರ್, ಲೆಕ್ಕಾಧಿಕಾರಿಗಳಾದ ತಾಹಿರ್, ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.