ADVERTISEMENT

ಜೀವನ ನಿರ್ವಹಣೆಯ ಪರ್ಯಾಯ ಬೆಳೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 13:29 IST
Last Updated 27 ಮೇ 2018, 13:29 IST
ಶನಿವಾರಸಂತೆಯ ಸಂತೆಮಾರುಕಟ್ಟೆಯಲ್ಲಿ ಬಿರುಸಿನಿಂದ ನಡೆದ ಶುಂಠಿ ವ್ಯಾಪಾರ
ಶನಿವಾರಸಂತೆಯ ಸಂತೆಮಾರುಕಟ್ಟೆಯಲ್ಲಿ ಬಿರುಸಿನಿಂದ ನಡೆದ ಶುಂಠಿ ವ್ಯಾಪಾರ   

ಶನಿವಾರಸಂತೆ: ಪಟ್ಟಣದ ಸಂತೆಮಾರು ಕಟ್ಟೆಯಲ್ಲಿ ಶನಿವಾರ ಬೆಳಿಗ್ಗೆ ಶುಂಠಿ ವ್ಯಾಪಾರ ಬಿರುಸಿನಿಂದ ನಡೆಯಿತು. ರೈತರು ತಂದ ಮಾಲು ಕಡಿಮೆಯಾಗಿದ್ದು, ಉತ್ತಮ ದರ ದೊರೆಯಿತು.1 ಕೆ.ಜಿ.ಗೆ ₹40–42ರಂತೆ 60 ಕೆ.ಜಿ.ತುಂಬಿದ ಚೀಲಕ್ಕೆ ₹ 2,400–2,500 ದೊರೆತಾಗ ರೈತರ ಮುಖದಲ್ಲಿ ಸಂತಸ ಮೂಡಿತು.

ಬೆಳಿಗ್ಗೆ 10 ಗಂಟೆಗೆಲ್ಲ ವ್ಯಾಪಾರ ಮುಗಿದುಹೋಗಿತ್ತು. ವ್ಯಾಪಾರಿಗಳು ಖರೀದಿಸಿದ ಮಾರನ್, ರಿಗೋಡಿ, ನಾಟಿ 3 ವಿಧದ ಶುಂಠಿ ಮೈಸೂರು, ಬೆಂಗಳೂರು ಹಾಗೂ ತಮಿಳುನಾಡಿಗೆ ರವಾನೆಯಾಗುತ್ತದೆ.

ಈ ವರ್ಷ ರೈತರು ಶುಂಠಿಗೆ ಬಂಪರ್ ಬೆಲೆ ಪಡೆದರು. 2 ವಾರಗಳ ಹಿಂದೆ 60 ಕೆ.ಜಿ.ಶುಂಠಿ ತುಂಬಿದ ಚೀಲಕ್ಕೆ ₹4 ಸಾವಿರ ದರ ದೊರೆತು ರೈತರು ಹಿಗ್ಗಿದರು. ಶನಿವಾರಸಂತೆ ಹೋಬಳಿಯ ಬಹುತೇಕ ರೈತರು ಶುಂಠಿ ಬೆಳೆಯತ್ತ ಒಲವು ತೋರಿದರು. ಇದೀಗ ಶುಂಠಿ ವ್ಯಾಪಾರ ಮುಕ್ತಾಯ ಹಂತಕ್ಕೆ ಬಂದಿದೆ. ಹಳೆ ಶುಂಠಿ ಬೆಳೆಯ ಕೊಯ್ಲು ಮುಗಿಯುತ್ತಾ ಬಂದಿದೆ.

ADVERTISEMENT

ಎಲ್ಲೆಡೆ ಗದ್ದೆಗಳಲ್ಲಿ ಉಳುಮೆ ಮಾಡಿ, ಹೊಸದಾಗಿ ಶುಂಠಿ ಬೀಜ ಬಿತ್ತನೆ ವ್ಯವಸಾಯ ಆರಂಭವಾಗಿದೆ. ಸುರಿಯುತ್ತಿರುವ ಮಳೆಯು ಶುಂಠಿ ವ್ಯವಸಾಯಕ್ಕೆ ಪೂರಕವಾಗಿದೆ. ಜುಲೈಯಿಂದ ಮತ್ತೆ ಹೊಸ ಶುಂಠಿ ಮಾರುಕಟ್ಟೆಗೆ ಬರಲಿದೆ. ಶುಂಠಿ 3, 6 ಹಾಗೂ 8 ತಿಂಗಳ ಬೆಳೆ. ರೈತರು ಗದ್ದೆ ಮತ್ತು ದೀಣೆಯಲ್ಲಿ ಮಾರನ್, ರಿಗೋಡಿ ಹಾಗೂ ನಾಟಿ ಎಂಬ 3 ವಿಧದ ಶುಂಠಿ ಬೆಳೆಯುತ್ತಾರೆ. ದೀಣೆಯಲ್ಲಿ ಬೆಳೆವ ಶುಂಠಿಗೆ ಬೆಲೆ ಜಾಸ್ತಿ. ತೋಟದಲ್ಲೂ ಶುಂಠಿ ಬೆಳೆಯುತ್ತಾರಾದರೂ ಅದನ್ನು 2 ವರ್ಷಕ್ಕೊಮ್ಮೆ ಕೀಳುತ್ತಾರೆ. ಈ ವಿಭಾಗದ ರೈತರು ಜೀವನ ನಿರ್ವಹಣೆಗೆ ಕಂಡುಕೊಂಡ ಪರ್ಯಾಯ ಬೆಳೆಗಳಲ್ಲಿ ಶುಂಠಿಯೂ ಒಂದು ಬೆಳೆಯಾಗಿದೆ. ಜೋಳ, ಭತ್ತದ ಕೊಯ್ಲು ಮುಗಿದ ನಂತರ ಶುಂಠಿ ಬೆಳೆದು ಆದಾಯ ಗಳಿಸುತ್ತಾರೆ.

ಲಾಭ ತಂದ ಶುಂಠಿ

‘ಶುಂಠಿ ಬೆಲೆಯಲಾರಂಭಿಸಿದ ನಂತರ ಜೀವನಕ್ಕೆ ಆಧಾರ ದೊರೆತಿದೆ. ಕೊಳೆರೋಗ ಬಾರದಿದ್ದರೆ ಎಷ್ಟೇ ದರ ಸಿಕ್ಕಿದರೂ ರೈತರಿಗೆ ಶುಂಠಿ ಲಾಭದಾಯಕ ಬೆಳೆಯೇ ಆಗಿದೆ. ಸಂತೆಯಲ್ಲಿ ಬೆಳೆದದ್ದನ್ನು ಮಾರಾಟ ಮಾಡಿದೆ. ಈ ಬಾರಿ ಇದರಿಂದ ಲಾಭ ದೊರೆತು ಸಂತೋಷವಾಗಿದೆ. ಶುಂಠಿಯನ್ನು ಪರ್ಯಾಯ ಬೆಳೆಯಾಗಿ ಬೆಳೆದರೆ, ಕಷ್ಟಕಾಲದಲ್ಲಿ ರೈತರ ಕೈಹಿಡಿಯುತ್ತದೆ
– ಕೃಷ್ಣೇಗೌಡ, ಸಣ್ಣರೈತ, ಶಿರದನಹಳ್ಳಿ

–ಶ.ಗ.ನಯನತಾರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.