ADVERTISEMENT

ಜ್ಞಾನಾರ್ಜನೆಗೆ ಮಾತೃಭಾಷೆಯೇ ‘ಸಂಜೀವಿನಿ’

ಅದಿತ್ಯ ಕೆ.ಎ.
Published 11 ಜನವರಿ 2017, 9:52 IST
Last Updated 11 ಜನವರಿ 2017, 9:52 IST
ಕುಶಾಲನಗರದ ರೈತ ಸಹಕಾರ ಭವನದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭವನ್ನು  ಸಚಿವ ಎಂ.ಆರ್.ಸೀತರಾಂ ಉದ್ಘಾಟಿಸಿದರು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಇದ್ದಾರೆ
ಕುಶಾಲನಗರದ ರೈತ ಸಹಕಾರ ಭವನದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭವನ್ನು ಸಚಿವ ಎಂ.ಆರ್.ಸೀತರಾಂ ಉದ್ಘಾಟಿಸಿದರು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಇದ್ದಾರೆ   

ಎದುರ್ಕುಳ ಶಂಕರನಾರಾಯಣ ಭಟ್‌ ವೇದಿಕೆ (ಕುಶಾಲನಗರ): ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆಯಿದ್ದರೂ ಕನ್ನಡದ ಕಂಪಿಗೇನು ಕೊರತೆ ಆಗಲಿಲ್ಲ. ಇಡೀ ದಿವಸ ಅಲ್ಲಿ ಸಂಭ್ರಮದ ವಾತಾವರಣ, ಎಲ್ಲರಲ್ಲೂ ಕನ್ನಡದ ತೇರು ಎಳೆಯಬೇಕೆಂಬ ಅದಮ್ಯ ಉತ್ಸಾಹ. ‘ವಾಣಿಜ್ಯ ನಗರಿ’, ‘ಕೊಡಗಿನ ಹೆಬ್ಬಾಗಿಲು’ ಖ್ಯಾತಿಯ ಕುಶಾಲನಗರವು ಕೊಡಗು ಜಿಲ್ಲೆಯ 11ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಗಳವಾರ ಸಾಕ್ಷಿಯಾಯಿತು.

ತಾಲ್ಲೂಕು ಕೇಂದ್ರದ ಕನಸು ಕಾಣುತ್ತಿರುವ ಕುಶಾಲನಗರದಲ್ಲಿ 23 ವರ್ಷಗಳ ಬಳಿಕ ನಡೆದ ಕನ್ನಡ ಜಾತ್ರೆಯನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು. ಹಿರಿಯ ಸಾಹಿತಿ ಎಸ್‌.ಸಿ. ರಾಜಶೇಖರ್‌ ಸರ್ವಾಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದ ಮೊದಲ ದಿವಸ ಹೊಸ ಕನಸು, ಹೊಸ ಆಶಯ ಬಿತ್ತಿತು.

ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಮೂರು ಕಿ.ಮೀ. ಮೆರವಣಿಗೆಯಲ್ಲಿ ಸಾಗಿಬಂದ ಬಳಿಕ ಪ್ರಧಾನ ಭಾಷಣ ಮಾಡಿದ ರಾಜಶೇಖರ್‌, ‘ಕನ್ನಡ, ಕರ್ನಾಟಕವು ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದು, ಇವುಗಳನ್ನು ಬಗೆಹರಿಸಲು ಸಮರ್ಥ ನಾಯಕರ ಅಗತ್ಯವಿದೆ’ ಎಂದು ಸೂಚ್ಯವಾಗಿ ಹೇಳಿದರು.

‘ಅನಾದಿ ಕಾಲದಲ್ಲಿ ಮಾಡಿಕೊಂಡಿರುವ ಕಾವೇರಿ ಒಪ್ಪಂದ ಇನ್ನೂ ಬಿಡದೆ ಕಾಡುತ್ತಿದೆ. ಪ್ರತಿ ವರ್ಷವೂ ಹಗೆಯ ಹೊಗೆಗೆ ಕಾರಣವಾಗುತ್ತಿದೆ’ ಎಂದು ರಾಜಶೇಖರ್‌ ವಿಷಾದಿಸಿದರು.

‘ಕಾಸರಗೋಡು ಕರ್ನಾಟಕಕ್ಕೆ ಸೇರಿಲ್ಲ. ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (ನೀಟ್‌) ಕನ್ನಡ ಭಾಷೆಗೆ ಮಾನ್ಯತೆ ಸಿಕ್ಕಿಲ್ಲ. ಕೇಂದ್ರ ನಾಯಕರ ಎದುರು ತಲೆಯಾಡಿಸಿ ಬರುವ ನಾಯ ಕರು ರಾಜ್ಯಕ್ಕೆ ಬೇಕಿಲ್ಲ. ಸಮಸ್ಯೆಗಳನ್ನು ಚಾಕಚಕತ್ಯೆಯಿಂದ ಬಗೆಹರಿಸುವ ಮಾನಸಿಕ, ದೈಹಿಕ ಸಮರ್ಥ ನಾಯಕರು ರಾಜ್ಯಕ್ಕೆ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ಶಿಕ್ಷಣ ಮಾಧ್ಯಮ ರಾಜ್ಯದಲ್ಲಿ ಜ್ವಲಂತ ಸಮಸ್ಯೆಯಾಗಿದೆ. ಜ್ಞಾನಾರ್ಜನೆಗೆ ಮಾತೃ ಭಾಷೆಯೇ ಹೆಬ್ಬಾಗಿಲು, ಸಂಜೀವಿನಿ. ಮಗು ವಿಗೆ ತಾಯಿಯ ಭಾಷೆಬೇಕು. ಮಾತೃಭಾಷೆ ಬದುಕಿನ ಉಪಕರಣ. ಮಾತೃಭಾಷೆಯಿಂದ ಮಾತ್ರ ಸಂತೋಷ, ಆನಂದ ಪಡೆಯಲು ಸಾಧ್ಯ’ ಎಂದು ವಿಶ್ಲೇಷಿಸಿದರು.

‘ಹಿಂದೆ ಕನ್ನಡಿಗರು ಕಾವ್ಯ ಓದದೇ ಕಾವ್ಯ ರಚನೆಯ ಸಾಮರ್ಥ್ಯ ಹೊಂದಿದ್ದರು. ಕನ್ನಡ ನಾಡಿನ ವೈಭವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕನ್ನಡ ಮಾತೃ ಭಾಷೆಯಲ್ಲದಿದ್ದರೂ ಕೆಲವು ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕವಿ ಬೇಂದ್ರೆ, ಕೆ.ಎಸ್‌. ನಿಸಾರ್‌ ಅಹಮ್ಮದ್‌ ಸೇರಿದಂತೆ ಹಲವು ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದವರು. ಕನ್ನಡದ ಶಕ್ತಿ, ಭಕ್ತಿ ಇವರನ್ನು ಕನ್ನಡಕ್ಕೆ ಮಣಿಯಂತೆ ಮಾಡಿತು’ ಎಂದು ಭಾಷೆಯ ಬಗ್ಗೆ ಹೆಮ್ಮೆಯ ಮಾತನ್ನಾಡಿದರು.

ಉದ್ಯೋಗ ದೊರೆಯಲಿ: ‘ಶಾಲಾ– ಕಾಲೇಜುಗಳಲ್ಲಿ ಕನ್ನಡ ಬೋಧಕರ ಕೊರತೆ ಕಾಡುತ್ತಲೇ ಇದೆ. ಕನ್ನಡ ಮಕ್ಕಳು ತಬ್ಬಲಿ ಆಗದಿರಲಿ. ಭಾಷೆಯ ಅಭಿಮಾನದಿಂದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ನಿರುದ್ಯೋಗದ ಭೂತ ಕಾಡುತ್ತಿದೆ. ಕನ್ನಡಿಗರಿಗೆ ಉದ್ಯೋಗ ಸಿಗಬೇಕು’ ಎಂದು ಪ್ರಧಾನ ಭಾಷಣದಲ್ಲಿ ಆಗ್ರಹಿಸಿದರು.

‘ಕನ್ನಡವೇ ಮೊದಲು’: ಸರ್ಕಾರ ಕನ್ನಡದಲ್ಲೇ ಆಡಳಿತಕ್ಕೆ ಒತ್ತು ನೀಡುತ್ತಿದೆ. ಬೇರೆಡೆ ಇರದ ಕೂಗು ರಾಜ್ಯದಲ್ಲಿದೆ. ವಿಧಾನಸೌಧದಲ್ಲಿ ಎಲ್ಲ ಪತ್ರ ವ್ಯವಹಾರಗಳೂ ಕನ್ನಡ ಭಾಷೆಯಲ್ಲಿ ನಡೆದರೆ ಮಾತ್ರ ಭಾಷೆಗೆ ಉಳಿವು. ರಾಜ್ಯದಲ್ಲಿ ಕನ್ನಡವೇ ಮೊದಲಾಗಬೇಕು’ ಎಂದು ಮನವಿ ಮಾಡಿದರು.

ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಮಹಾಬಲೇ ಶ್ವರ್‌ ಭಟ್‌ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ಕನ್ನಡದ ಜಾಗೃತಿಗೊಳಿಸಿ ಭಾಷೆಯನ್ನು ಶಕ್ತಗೊಳಿಸುವ ಕೆಲಸ ಆಗಬೇಕಿದೆ. ರಾಜಕೀಯ ಕ್ಷೇತ್ರ ಹೊರತು ಪಡಿಸಿ, ಸಾಹಿತ್ಯ ಕ್ಷೇತ್ರ ಇಲ್ಲ ಎನ್ನುವಂತಾಗಿದೆ. ಆದರೆ, ವೈಯಕ್ತಿಕ ನೆಲೆಗಟ್ಟಿನಲ್ಲಿ ತಮ್ಮನ್ನು ತಾವು ವಿಸ್ತರಿಸಿಕೊಳ್ಳಲು ಸಾಧ್ಯವಿದೆ’ ಎಂದರು.

ಪ್ರಕೃತಿಯಂತೆ ಭಾಷೆಯ ಸ್ಥಿತ್ಯಂತರಗಳು ಬದಲಾವಣೆ ಆಗುತ್ತಿವೆ. ರಾಷ್ಟ್ರ ಸಮೃದ್ಧವಾಗಬೇಕು; ಅದರೊಂದಿಗೆ ನಮ್ಮ ಸಂಸ್ಕೃತಿಯೂ ಸಮೃದ್ಧವಾಗಲಿದೆ ಎಂದು ಹೇಳಿದರು.
ವಿರಾಜಪೇಟೆ ತಾಲ್ಲೂಕಿನ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ರಾದ ವೀಣಾ ಅಚ್ಚಯ್ಯ, ಸುನಿಲ್‌ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್‌, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್‌. ಲೋಕೇಶ್‌ ಸಾಗರ್‌, ಪ.ಪಂ.ಅಧ್ಯಕ್ಷ ಎಂ.ಎಂ. ಚರಣ್‌, ರೇಷ್ಮೆ ಮಾರುಕಟ್ಟೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್‌, ಎಚ್‌.ಆರ್‌. ಶ್ರೀನಿವಾಸ್‌, ಕೆ.ಆರ್‌. ಮಂಜುಳಾ, ಲತೀಫ್‌, ಕೆ.ಪಿ. ಚಂದ್ರಕಲಾ, ಕುಡೇಕಲ್‌ ಸಂತೋಷ್‌, ಸುನಿಲ್‌, ಪದ್ಮಿನಿ ಪೊನ್ನಪ್ಪ ಹಾಜರಿದ್ದರು.

ಜಿಲ್ಲಾಡಳಿತದ ವಿರುದ್ಧ ಶಾಸಕ ಅಸಮಾಧಾನ
ಕುಶಾಲನಗರ: ಜಿಲ್ಲಾಡಳಿತ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸಹಕಾರ ನೀಡಲಿಲ್ಲ. ಯಾವ ಅಧಿಕಾರಿಯೂ ಇತ್ತ ತಿರುಗಿ ನೋಡಲಿಲ್ಲ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಅಸಮಾಧಾನ ವ್ಯಕ್ತಪಡಿಸಿದರು.

ಕ್ಷೇತ್ರದ ಶಾಸಕರು ಬಿಜೆಪಿಯವರು ಎಂಬ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಅಧಿಕಾರಿಗಳಿಗೆ ದಬಾಯಿಸಿದ್ದಾರೆಂದು ಭಾವಿಸಿದ್ದೆ. ಆದರೆ, ಅಭಿವೃದ್ಧಿ, ಕನ್ನಡ ವಿಚಾರದಲ್ಲಿ ಸಚಿವರು ಸಹಕಾರ ನೀಡುತ್ತಿದ್ದಾರೆ. ಆದರೆ, ಜಿಲ್ಲಾಮಟ್ಟದ ಒಬ್ಬ ಅಧಿಕಾರಿಯೂ ಸಹಕಾರ ನೀಡಲಿಲ್ಲ ಎಂದು ದೂರಿದರು.

ಕುಶಾಲನಗರ ಖುಷಿಯ ನಗರಿ. ಸಾಕಷ್ಟು ನಿವೃತ್ತರು ಈ ನಗರವನ್ನು ವಿಶ್ರಾಂತಿ ಜೀವನಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ನಗರದಲ್ಲಿ ಕನ್ನಡ ಜಾತ್ರೆಗೆ ಸಾಕಷ್ಟು ಸಂಘ– ಸಂಸ್ಥೆಗಳು ನೆರವು ನೀಡಿವೆ. ಜಾತ್ಯತೀತ, ಪಕ್ಷಾತೀತ, ರಾಜಕೀಯ ರಹಿತವಾಗಿ ಈ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ, ‘ಕನ್ನಡ ಸಾಹಿತ್ಯ ಪರಿಷತ್‌ ಹತ್ತು– ಹಲವು ಕಾರ್ಯಕ್ರಮಗಳ ಮೂಲಕ ಕನ್ನಡ ಅಭ್ಯುದಯಕ್ಕೆ ಶ್ರಮಿಸುತ್ತಿದೆ. ಕೊಡಗು ಜಿಲ್ಲೆ ಸಾಹಿತ್ಯ ಕ್ಷೇತ್ರಕ್ಕೂ ಸಾಕಷ್ಟು ಕೊಡಗು ನೀಡಿದೆ. ಕೊಡಗಿನ ಪ್ರಕೃತಿಯನ್ನು ಇಡೀ ನಾಡಿಗೆ ಸಾಹಿತ್ಯದ ಮೂಲಕ ತಲುಪಿಸಿದ್ದಾರೆ’ ಎಂದು ಶ್ಲಾಘಿಸಿದರು. ಇದೇ ವೇಳೆ ವೈಯಕ್ತಿವಾಗಿ ₹50 ಸಾವಿರ ದೇಣಿಗೆ ನೀಡಿದರು.

‘ಕಾಲ್ಪನಿಕ ಪಾತ್ರಕ್ಕೆ ಸೀಮಿತವಾದ  ಸ್ತ್ರೀ’
ಕುಶಾಲನಗರ: ಇಂದಿನ ಸಮಾಜದಲ್ಲಿ ಸ್ತ್ರೀಯರಿಗೆ ಕಾಲ್ಪನಿಕ ಪಾತ್ರಗಳಲ್ಲಷ್ಟೇ ಮಹತ್ವದ ಸ್ಥಾನ ನೀಡಲಾಗಿದೆ ಎಂದು ಸೋಮವಾರಪೇಟೆ ಸ.ಪ.ಪೂ. ಕಾಲೇಜು ಪ್ರಭಾರ ಪ್ರಾಂಶುಪಾಲರಾದ ತಿಲೋತ್ತಮೆ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ರೈತ ಸಹಕಾರ ಭವನದ ಆವರಣದಲ್ಲಿ  ಸಮ್ಮೇಳನ ಅಂಗವಾಗಿ ನಡೆದ ಮಹಿಳಾ ಗೋಷ್ಠಿಯಲ್ಲಿ ಸಾಹಿತ್ಯ ಮತ್ತು ಲಿಂಗ ತಾರತಮ್ಯ ಎನ್ನುವ ವಿಷಯದ ಕುರಿತು ಅವರು ಮಾತನಾಡಿದರು.

ಲಿಂಗ ಸಮಾನತೆ ಬಗ್ಗೆ ಈ ತನಕ ಯಾವುದೇ ಸಾಹಿತ್ಯವೂ ಬೆಳಕು ಚೆಲ್ಲಿಲ್ಲ. ಜನಪದ ಸಾಹಿತ್ಯದಲ್ಲಂತೂ ಹೆಣ್ಣಿನ ಸ್ಥಿತಿ ಅಯೋಮಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಶತಮಾನಗಳ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್‌ಗೆ ಇಲ್ಲಿಯವರೆಗೆ ಒಬ್ಬ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಜಾಗೃತಿ ಸಮಿತಿ ಸದಸ್ಯೆ ರೇವತಿ ಪೂವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ಎನ್ನುವ ವಿಷಯದಲ್ಲಿ ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಕಾವೇರಿ ಪ್ರಕಾಶ್ ಪ್ರಬಂಧ ಮಂಡಿಸಿದರು. ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕಿ ಬಿ.ಬಿ. ಸಾವಿತ್ರಿ, ಸಾಹಿತಿ ಸಹನಾ ಕಾಂತಬೈಲು, ನಿವೃತ್ತ ಪ್ರಾಂಶುಪಾಲ ದಾಮೋದರ್, ಬಾಲಕೃಷ್ಣ ರೈ ವೇದಿಕೆಯಲ್ಲಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT