ADVERTISEMENT

‘ತಿಂಗಳಾಂತ್ಯಕ್ಕೆ ರಸ್ತೆ ಕಾಮಗಾರಿ ಪೂರ್ಣ’

ಕೊಡಗು ವಿಶೇಷ ಪ್ಯಾಕೇಜ್‌ ಅಡಿಯಲ್ಲಿ ₹16.80 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 7:22 IST
Last Updated 17 ಮಾರ್ಚ್ 2018, 7:22 IST
ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯು ಶುಕ್ರವಾರ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ನಡೆಯಿತು
ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯು ಶುಕ್ರವಾರ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ನಡೆಯಿತು   

ಸೋಮವಾರಪೇಟೆ: ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಹಲವು ರಸ್ತೆ ಕಾಮಗಾರಿಗಳು ಕಳಪೆಯಾಗಿವೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.

ಕಳಪೆ ಕಾಮಗಾರಿ ಬಗ್ಗೆ ಕೆಲವು ಸ್ಥಳಗಳಲ್ಲಿ ತಡೆಯೊಡ್ಡಿ ಪ್ರತಿಭಟಿಸುತ್ತಿರುವ ಬಗ್ಗೆಯೂ ಇಲಾಖೆ ಎಂಜಿನಿಯರ್‌ ಅವರನ್ನು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರು ಸಭೆಯಲ್ಲಿ ಪ್ರಶ್ನಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸ್ಥಳೀಯ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ADVERTISEMENT

ಸದಸ್ಯ ಬಿ.ಬಿ.ಸತೀಶ್‌, ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ಗುಣಮಟ್ಟದ ಬಗ್ಗೆ ಅವರಿಗೆ ಮಾತನಾಡಲು ತಿಳಿವಳಿಕೆ ಇರುವುದಿಲ್ಲ. ಅದನ್ನು ಅಧಿಕಾರಿಗಳು ತಿಳಿಸಬೇಕಿದೆ. ಕೆಲವು ರಸ್ತೆಗಳು ಬಿಟ್ಟರೆ, ಉಳಿದ ಕಾಮಗಾರಿಯ ಗುಣಮಟ್ಟದ ಬಗ್ಗೆ ಯಾವುದೇ ತಕರಾರು ಇಲ್ಲ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಗೆ ಎಸ್‌ಸಿಪಿ ಯೋಜನೆ ಅಡಿ ₹ 2.96 ಕೋಟಿ, ಟಿಎಸ್‌ಪಿ ಯೋಜನೆಯಡಿ ₹ 1.5 ಕೋಟಿ ಅನುದಾನ ಬಿಡುಗಡೆಯಾಗಿದೆ. ಕೊಡಗು ವಿಶೇಷ ಪ್ಯಾಕೇಜ್‌ ಅಡಿಯಲ್ಲಿ ₹ 16.80 ಕೋಟಿ ಹಣ ಬಂದಿದೆ. ಈಗಾಗಲೇ 23 ಕಾಮಗಾರಿಗಳು ಮಾರ್ಚ್‌ ಅಂತ್ಯಕ್ಕೆ ಕೊನೆಗೊಳ್ಳಲಿವೆ ಎಂದು ಇಲಾಖೆಯ ಎಂಜಿನಿಯರ್‌ ವೆಂಕಟೇಶ್ ನಾಯಕ್ ಸಭೆಗೆ ಮಾಹಿತಿ ನೀಡಿದರು.

ಹಾಡಿ ನಿವಾಸಿಗಳಿಗೆ ಟೋಪಿ: ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯಿಂದ ದಿಡ್ಡಳ್ಳಿ, ಗಿರಿಜನ ಹಾಡಿಯ ನಿವಾಸಿಗಳಿಗೆ ಉಲ್ಲನ್ ಟೋಪಿಗಳನ್ನು ಓಸ್ವಾಲ್ ಸಂಸ್ಥೆಯಿಂದ ನೀಡಲಾಗಿದೆ ಎಂಬ ದಾಖಲೆಯಿದೆ. ಆದರೆ ಅಲ್ಲಿ ಯಾವುದೇ ಸೌಲಭ್ಯಗಳನ್ನು ವಿತರಿಸದೇ ಸರ್ಕಾರಕ್ಕೆ ಮತ್ತು ಹಾಡಿ ನಿವಾಸಿಗಳಿಗೆ ವಂಚಿಸಲಾಗಿದೆ ಎಂದು ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಆರೋಪಿಸಿದರು.

ಸೋಮವಾರಪೇಟೆ ಮತ್ತು ಬೆಸೂರು ಹೋಮಿಯೋಪತಿ ಆಸ್ಪತ್ರೆಯ ದುರಸ್ತಿ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಮುಂದಿನ ದಿನಗಳಲ್ಲಿ ಪಂಚಕರ್ಮ ಚಿಕಿತ್ಸೆಗೆ ಚಾಲನೆ ನೀಡಲಾಗುವುದೆಂದು ಆಯುಷ್ ಇಲಾಖೆಯ ವೈದ್ಯೆ ಸ್ಮಿತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.