ADVERTISEMENT

ತೈಲ ಬೆಲೆ ಪರಿಷ್ಕರಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 6:26 IST
Last Updated 21 ಸೆಪ್ಟೆಂಬರ್ 2017, 6:26 IST

ಮಡಿಕೇರಿ: ಪ್ರತಿದಿನ ತೈಲ ಬೆಲೆ ಪರಿಷ್ಕರಣೆ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯ ವಾಣಿಜ್ಯ ವಾಹನ ಚಾಲಕರ ಸಂಘದ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ದುರ್ಗಾ ಪ್ರಸಾದ್ ಮಾತನಾಡಿ, ‘ಕೇಂದ್ರ ಸರ್ಕಾರಕ್ಕೆ ಒಂದು ಲೀಟರ್ ಪೆಟ್ರೋಲ್‌ಗೆ ತೆರಿಗೆ ರೂಪದಲ್ಲಿ ₹ 21 ದೊರಕುತ್ತಿದೆ. ಇದರೊಂದಿಗೆ ಆಮದು ಮತ್ತಿತರ ತೆರಿಗೆಯೂ ಕೇಂದ್ರ ಸರ್ಕಾರಕ್ಕೆ ಪಾವತಿಯಾಗು್ತತಿದೆ; ತೈಲ ತೆರಿಗೆಯಿಂದ ಕಳೆದ ಒಂದು ವರ್ಷದಲ್ಲಿ ಸರ್ಕಾರಕ್ಕೆ ಸುಮಾರು ₹ 1.45 ಲಕ್ಷ ಕೋಟಿಯಷ್ಟು ಆದಾಯ ಬಂದಿದೆ. ಆದರೂ, ಪೆಟ್ರೋಲ್ ದರ ಇಳಿಕೆಯಾಗುತ್ತಿಲ್ಲ’ ಎಂದು ಆಪಾದಿಸಿದರು.

‘2012ರಲ್ಲಿ ಕಚ್ಚಾತೈಲದ ಬೆಲೆ ಲೀಟರ್‌ಗೆ ₹ 23 ಇದ್ದಾಗ ಪೆಟ್ರೋಲ್ ಬೆಲೆ ₹68 ಮತ್ತು ಡೀಸೆಲ್ ಬೆಲೆ ₨ 46 ಇತ್ತು. 2017ರ ಸೆಪ್ಟೆಂಬರ್‌ನಲ್ಲಿ ಕಚ್ಚಾ ತೈಲದ ಬೆಲೆ ₹ 19ಕ್ಕೆ ಇಳಿದಿದ್ದರೂ ಪೆಟ್ರೋಲ್‌ಗೆ ₹ 70ರವರೆಗೆ ಏರಿಕೆ ಮಾಡಲಾಗಿದೆ. ಸರ್ಕಾರವೇ ಕೊಳ್ಳೆ ಹೊಡೆಯುತ್ತಿರುವುದರಿಂದ ತೈಲ ಕಂಪೆನಿಗಳೂ ಸಹ ಅದೇ ಹಾದಿ ಹಿಡಿದಿವೆ’ ಎಂದು ದೂರಿದರು.

ADVERTISEMENT

ತೈಲ ಬೆಲೆಯನ್ನು ತಮ್ಮಿಷ್ಟದಂತೆ ಹೆಚ್ಚಿಸಲು ತೈಲ ಕಂಪೆನಿಗಳಿಗಿರುವ ಸ್ವಾತಂತ್ರ್ಯವನ್ನು ಹಿಂಪಡೆಯಬೇಕು. ಕೇಂದ್ರ ಸರ್ಕಾರ ವಿಧಿಸುತ್ತಿರುವ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇದೇ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್‌ಕುಮಾರ್‌ಗೆ ಮನವಿ ಸಲ್ಲಿಸಲಾಯಿತು. ಸಿಐಟಿಯು ಖಜಾಂಚಿ ಸಾಬು, ರಾಜ್ಯ ವಾಣಿಜ್ಯ ವಾಹನ ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ರೆಹಮಾನ್, ಪ್ರಮುಖರಾದ ಸೈನುದ್ದೀನ್, ಹಂಸ, ಪುಟ್ಟಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.