ADVERTISEMENT

ತ್ಯಾಜ್ಯ ಸುಡುವಾಗ ಅರಣ್ಯಕ್ಕೆ ಬೆಂಕಿ; ತಪ್ಪಿದ ಹೆಚ್ಚಿನ ಅನಾಹುತ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:17 IST
Last Updated 28 ಡಿಸೆಂಬರ್ 2016, 5:17 IST

ಗೋಣಿಕೊಪ್ಪಲು: ಬೇಸಿಗೆ ಕಾಳ್ಗಿಚ್ಚಿನಿಂದ ಅರಣ್ಯ ರಕ್ಷಿಸುವ ಸಲುವಾಗಿ ಹೆದ್ದಾರಿ ಅಂಚಿನ ಅರಣ್ಯದ  ಕಸಕಡ್ಡಿಗಳನ್ನು ಸುಟ್ಟು ತೆರವುಗೊಳಿಸುವಾಗ, ಬೆಂಕಿ ಅರಣ್ಯಕ್ಕೆ ಹಬ್ಬಿದ ಘಟನೆ ಆನೇಚೌಕೂರು ಬಳಿಯ ಮಾವಕಲ್‌ ಅರಣ್ಯದಲ್ಲಿ ಮಂಗಳವಾರ ಜರುಗಿದೆ.

ಹುಣಸೂರು ಗೋಣಿಕೊಪ್ಪಲು ನಡುವಿನ ಹೆದ್ದಾರಿ ಬದಿಯಲ್ಲಿ ಅರಣ್ಯದ ಗಿಡಗಂಟಿ ಳನ್ನು ಸುಟ್ಟು ತೆರವುಗೊಳಿಸಲು ಅರಣ್ಯ ಇಲಾಖೆ ಸಿಬ್ಬಂದಿ ತೊಡಗಿದ್ದರು.
ಈ ಸಂದರ್ಭ ಬೀಸಿದ ಗಾಳಿಗೆ ಬೆಂಕಿ ಕಿಡಿ ಪಕ್ಕದಲ್ಲಿಯೇ ಇದ್ದ ಒಣಗಿದ ಬಿದಿರಿಗೆ ವ್ಯಾಪಿಸಿದೆ.  ದಿಕ್ಕು ತೋಚದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಬೆಂಕಿ ಬಿರುಸು ಪಡೆದಾಗ ಸಿಬ್ಬಂದಿ ಕೈಚೆಲ್ಲಿದರು. ಈ ಸಂದರ್ಭದಲ್ಲಿ ಬೆಂಕಿ ನಂದಿಸಲು ಗೋಣಿಕೊಪ್ಪಲಿನ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು,  ಸ್ಥಳಕ್ಕೆ ಧಾವಿಸಿದ ಪಿರಿಯಾಪಟ್ಟಣದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸಿದರು.

ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಟ್ಟರು. ಈ ವೇಳೆಗೆ ಸುಮಾರು ಐದಾರು ಎಕರೆ ಭೂಮಿ ಅರಣ್ಯ ಬೆಂಕಿಗೆ ಸುಟ್ಟು ಭಸ್ಮವಾಗಿತ್ತು.
ವನ್ಯ ಜೀವಿ ವಿಭಾಗದ ಸಿಬ್ಬಂದಿ ಸಾಕಾನೆ ಶಿಬಿರದ ಮಾವುತರು ಹಾಗೂ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.