ADVERTISEMENT

ದಲಿತರು, ಮುಸ್ಲಿಮರು ಒಂದಾಗುವ ಕಾಲ

ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾದಿಂದ ‘ರಾಜಕೀಯ ಜಾಗೃತಿ ಸಮಾವೇಶ’

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 6:39 IST
Last Updated 3 ಮಾರ್ಚ್ 2017, 6:39 IST

ಮಡಿಕೇರಿ: ‘ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದಲಿತರು, ಮುಸ್ಲಿಮರು ಹಾಗೂ ಕ್ರಿಶ್ಚಿಯನ್‌ ಸಮುದಾಯದ ಜನರನ್ನು ಪ್ರಾಣಿ – ಪಕ್ಷಿಗಳಂತೆ ಕಾಣುತ್ತಿದ್ದು, ಇವರೆಲ್ಲಾ ಒಂದಾಗು ಅನಿವಾರ್ಯತೆ ಇದೆ’ ಎಂದು ಬಹುಜನ್‌ ಸೋಶಿಯಲ್‌ ಫೌಂಡೇಶನ್‌ ರಾಜ್ಯ ಘಟಕದ ಅಧ್ಯಕ್ಷ ಬಿ.ಗೋಪಾಲ್‌ ಮನವಿ ಮಾಡಿದರು.

ನಗರದ ಟೌನ್‌ಹಾಲ್‌ನಲ್ಲಿ ಗುರುವಾರ ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾ ಆಯೋಜಿಸಿದ್ದ ‘ರಾಜಕೀಯ ಜಾಗೃತಿ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಧಾನಿ ಮೋದಿ ದ್ವಿಮುಖ ವ್ಯಕ್ತಿತ್ವವುಳ್ಳವರು. ಪ್ರಮಾಣ ವಚನ ಸ್ವೀಕರಿಸಿದಾಗ ಅಂಬೇಡ್ಕರ್‌ ಬರೆದ ಸಂವಿಧಾನದಿಂದ ಟೀ ಮಾರಾಟ ನಡೆಸುತ್ತಿದ್ದ ನಾನು ಪ್ರಧಾನಿ ಆಗಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದರು. ಅದೇ ವಿದೇಶ ಪ್ರವಾಸದಲ್ಲಿದ್ದಾಗ ಸಂವಿಧಾನದ ಗ್ರಂಥದ ಬದಲು ಭಗವದ್ಗೀತೆ ಕೊಟ್ಟರು. ಭಗವದ್ಗೀತೆಯಲ್ಲಿ ಚಾತುವರ್ಣ ಪದ್ಧತಿಯಿದೆ. ಆ ಮೂಲಕ ದ್ವಿಮುಖ ವ್ಯಕ್ತಿತ್ವ ಪ್ರದರ್ಶಿಸಿದ್ದರು’ ಎಂದು ದೂರಿದರು.

‘ಮುಸ್ಲಿಂ, ಕ್ರೈಸ್ತರು ಹಾಗೂ ದಲಿತರು ಒಂದಾಗಿ ಒಗ್ಗಟ್ಟು ಪ್ರದರ್ಶಿಸಿದರೆ ಸಾಕು. ಆರ್‌ಎಸ್‌ಎಸ್‌ ಮುಖಂಡರಿಗೆ ಹೃದಯಾಘಾತವಾಗಲಿದೆ. ರಾಜ್ಯದಲ್ಲಿ 1.8 ಕೋಟಿ ಪರಿಶಿಷ್ಟ ಜಾತಿ, 42 ಲಕ್ಷ ಪರಿಶಿಷ್ಟ ಪಂಗಡ, 75 ಲಕ್ಷ ಮುಸ್ಲಿಂ ಸಮುದಾಯವಿದೆ. ಬರೀ 58 ಲಕ್ಷವಿರುವ ಲಿಂಗಾಯಿತರು 25 ವರ್ಷ ಕಾಲ, 45 ಲಕ್ಷ ಜನಸಂಖ್ಯೆಯಿರುವ ಒಕ್ಕಲಿಗರು 18 ವರ್ಷ ಈ ರಾಜ್ಯವನ್ನು ಆಡಳಿತ ನಡೆಸಿದ್ದಾರೆ. ಆದರೆ, ಮುಸ್ಲಿಂ, ದಲಿತರ ನಡುವೆ ಒಗ್ಗಟ್ಟಿನ ಕೊರತೆಯಿಂದ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ; ನಾವೆಲ್ಲಾ ಒಂದಾಗಿ ಆಡಳಿತ ಹಿಡಿದರೆ ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬಹುದು’ ಎಂದು ಪ್ರತಿಪಾದಿಸಿದರು.

‘ಪರಿಶಿಷ್ಟ ಜಾತಿ 60 ಲಕ್ಷ ಜನರು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಇವರೆಲ್ಲ ಒಟ್ಟಾದರೆ ನಮಗೆ ಉಳಿಗಾಲವಿಲ್ಲ ಎಂಬ ಆತಂಕ ಕೆಲವು ಸಮುದಾಯಕ್ಕೆ ಕಾಡಲು ಆರಂಭಿಸಿದೆ. ಇದೇ ಕಾರಣಕ್ಕೆ ಕೆಲವರು ಅಂಬೇಡ್ಕರ್‌ ಬರೆದ ಸಂವಿಧಾನವನ್ನು ತಿಪ್ಪೆಗೆ ಎಸೆಯಿರಿ ಎಂದು ಹೇಳಿಕೆ ನೀಡಿದ್ದರು. ಮೀಸಲಾತಿ ಕಿತ್ತು ಹಾಕುವ ಹುನ್ನಾರ ಸಹ ನಡೆಯುತ್ತಿದೆ.

ಇತ್ತೀಚೆಗೆ ಸುಪ್ರಿಂ ಕೋರ್ಟ್‌ನ ಆರ್‌ಎಸ್‌ಎಸ್‌ ಮನಸ್ಥಿತಿಯ ನ್ಯಾಯಮೂರ್ತಿ ಒಬ್ಬರು ಮೀಸಲಾತಿ ಮೂಲಕ ಕೆಲಸ ಪಡೆದವರಿಗೆ ಬಡ್ತಿ ನೀಡಬಾರದೆಂದು ಹೇಳಿದ್ದಾರೆ. ಈ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಹೇಳಲು ನ್ಯಾಯಾಮೂರ್ತಿಗಳೇನು ವರದಿ ತರಿಸಿಕೊಂಡಿದ್ದಾರೆಯೇ’ ಎಂದು ಪ್ರಶ್ನಿಸಿದರು.

ಅಂಬೇಡ್ಕರ್‌ ರಚಿತ ಸಂವಿಧಾನ 20 ವರ್ಷಗಳ ಯಥಾಸ್ಥಿತಿ ಜಾರಿಗೊಂಡಿದ್ದರೆ ದಲಿತರು, ಮುಸ್ಲಿಮರು ಹಾಗೂ ಹಿಂದುಳಿದ ವರ್ಗದ ಜನರು ಉದ್ಧಾರ ಆಗುತ್ತಿದ್ದರು. ಜತೆಗೆ, ಈ ಅಸ್ಪೃಶ್ಯತೆಯೂ ಇರುತ್ತಿರಲಿಲ್ಲ. ಊಟಕ್ಕೆ ಮತ್ತೊಬ್ಬರ ಕೇಳುವ ಸ್ಥಿತಿಯಿದೆ.

ಹಿಂದುಳಿದವರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿವೆ. ಮನೆಯಲ್ಲಿ ಮಾಂಸ ಇಟ್ಟುಕೊಂಡಿದ್ದರೂ ದಾಳಿ ನಡೆಸಿ ತಪಾಸಣೆ ನಡೆಸುವ ಕಾಲವಿದೆ. ಮತ್ತೊಬ್ಬರನ್ನು ಕೇಳಿ ಆಹಾರ ಬಳಸುವ ಸ್ಥಿತಿಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷೆ ಡಾ.ಬಿ.ಟಿ. ಲಲಿತಾನಾಯಕ್‌ ಮಾತನಾಡಿ, ‘ರಾಷ್ಟ್ರದ ಪರಿಸ್ಥಿತಿ ಅಲ್ಲೋಲ– ಕಲ್ಲೋಲ ಆಗುವಂತಿದೆ. ಸ್ವಾತಂತ್ರ್ಯ ಭಾರತದಲ್ಲಿ ಭ್ರಷ್ಟಾಚಾರ, ಜಾತೀಯತೆ ಮುಕ್ತ ಮಾಡಿ ಏಕರರೂಪ ರಾಷ್ಟ್ರ ಮಾಡಬೇಕು ಎನ್ನುವ ಕನಸು ಕಾಣಲಾಗಿತ್ತು. ಆದರೆ, ಆ ಕನಸು ಇದುವರೆಗೂ ಈಡೇರಿಲ್ಲ. ಕೇಂದ್ರ ರಾಜ್ಯ ಸರ್ಕಾರಗಳು ಈ ಪ್ರಯತ್ನದಿಂದ ಬಹುದೂರ ಉಳಿದಿವೆ. ಬಡವರು ಬಡಸ್ಥನದಲ್ಲಿ ಉಳಿದರೆ, ಸಿರಿವಂತರು ಮತ್ತಷ್ಟು ಸ್ಥಿತಿವಂತರೇ ಆಗುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಆಳುವ ಪಕ್ಷಕ್ಕೆ ಬಡವರ ಬಗ್ಗೆ ಕನಿಕರ, ಕಾಳಜಿ ಇಲ್ಲ. ಅಸಮಾನತೆ ಹೆಚ್ಚಾಗಿದೆ. ಅಸಮಾನತೆಯಿಂದ ದ್ವೇಷ, ಜಿದ್ದು ಬೆಳೆಯುತ್ತಿದೆ’ ಎಂದು ವಿಷಾದಿಸಿದರು.
ಜನರ ದುಡ್ಡು ಲೂಟಿ ಮಾಡಿ ಹೈಕಮಾಂಡ್‌ಗೆ ಎರಡೂ ಪಕ್ಷಗಳೂ ಕಪ್ಪ ಕಾಣಿಕೆ ನೀಡಿವೆ. ರಾಜ್ಯದಲ್ಲಿ ಬರಗಾಲವಿದ್ದರೂ ಜನರ ಬವಣೆ ನೀಗಿಸಬೇಕೆನ್ನುವ ಉದ್ದೇಶ ಯಾರಿಗೂ ಇಲ್ಲ ಎಂದು ದೂರಿದರು.

ವಕೀಲ ಕೆ.ಎಂ.ಕುಂಞ ಅಬ್ದುಲ್ಲ, ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಕ್ಬರಲಿ ಉಡುಪಿ, ಪಿ.ಎಂ.ಖಾಸಿಂ, ತಾಹೀರ್‌ ಹುಸೇನ್‌, ಪಾಲಚಂಡ ಗಣಪತಿ, ಪಿ.ಎ. ಹನೀಫ್‌, ತಾಹೀರ್‌ ಅಲಿ, ಎಂ.ಎಚ್‌. ಮಹಮ್ಮದ್‌ ಮುಸ್ತಫ್‌, ಪ್ರೊ.ಸಿದ್ದರಾಮಯ್ಯ, ಕೆ.ಟಿ.ಬಶೀರ್‌, ಕೆ.ಎಂ. ಮೊಹಮ್ಮದ್‌ ಹಾಜರಿದ್ದರು.

ADVERTISEMENT

*
ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನ 20 ವರ್ಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಜಾರಿಗೊಂಡಿದ್ದರೆ ರಾಷ್ಟ್ರದಲ್ಲಿ ಅಸ್ಪೃಶ್ಯತೆಯೇ ಇರುತ್ತಿರಲಿಲ್ಲ.
–ಬಿ.ಗೋಪಾಲ್‌,
ಅಧ್ಯಕ್ಷ, ಬಹುಜನ್‌ ಸೋಶಿಯಲ್‌ ಫೌಂಡೇಶನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.