ADVERTISEMENT

ದಸರಾದಲ್ಲೂ ರಾಜಕೀಯ: ವಿಷಾದ

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ವಕ್ತಾರ ಭರತ್‌ ಕುಮಾರ್ ಬೇಸರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 8:50 IST
Last Updated 25 ಜುಲೈ 2017, 8:50 IST

ಮಡಿಕೇರಿ: ‘ಮಡಿಕೇರಿ ದಸರಾ ಜನೋತ್ಸವ’ದಲ್ಲಿ ರಾಜಕೀಯವನ್ನು ಬದಿಗಿರಿಸಿ ಸಾರ್ವಜನಿಕರ ಅಭಿಪ್ರಾಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಭರತ್ ಕುಮಾರ್ ಕೋರಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ‘ರಾಜಕೀಯ ಪಕ್ಷಗಳು ದಸರಾ ಆಚರಣೆಯಲ್ಲಿ ತಮ್ಮ ಪಕ್ಷದ ಹಿಡಿತವೇ ಮೇಲಾಗಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಜನೋತ್ಸ ವದ ತಯಾರಿಯಲ್ಲೇ ಅಡ್ಡಿ ಉಂಟು ಮಾಡುತ್ತಿವೆ. ಇದು ಶಕ್ತಿದೇವತೆಗಳ ಉತ್ಸವವಾಗಿದ್ದರೂ ರಾಜಕೀಯ ಸೇರ್ಪಡೆಗೊಳ್ಳುತ್ತಿರುವುದು ವಿಷಾದ ನೀಯ. ಜನರ ಉತ್ಸವ ಆಗಬೇಕು, ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘ಕಳೆದ ವರ್ಷ ದಸರಾ ಆಚರಣೆಗೂ 20 ದಿವಸ ಮೊದಲು ಸಭೆ ಕರೆಯಲಾಗಿತ್ತು. ಆದರೆ, ಈ ಬಾರಿ ಎರಡು ತಿಂಗಳಿಗೂ ಮೊದಲೇ ಸಭೆ ಕರೆದು ಸಾರ್ವಜನಿಕರು ಅಭಿಪ್ರಾಯ ಮಂಡಿಸಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಜಿಲ್ಲಾಡಳಿತಕ್ಕೆ ಮನವಿ: ‘ದಸರಾ ಸಭೆಯಲ್ಲಿ ಸಾರ್ವಜನಿಕರು, ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಮುಕ್ತವಾಗಿ ಚರ್ಚೆ ನಡೆಸಲು ಅವಕಾಶ ಒದಗಿಸಬೇಕು. ಹಿಂದಿನ ವರ್ಷದ ಪದಾಧಿಕಾರಿಗಳಿಗೆ ಮಾತ್ರ ಆಹ್ವಾನ ನೀಡುತ್ತಿರುವ ಧೋರಣೆ ಸರಿಯಲ್ಲ. ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಬೇಕು’ ಎಂದು ಕೋರಿದರು.

‘ಪ್ರತಿ ವರ್ಷ ದಸರಾಕ್ಕೆ ಸರ್ಕಾರದ ಬಳಿ ಕಡಿಮೆ ಮೊತ್ತದ ಅನುದಾನಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಈ ಬಾರಿ ₹10 ಕೋಟಿಗೆ ಮನವಿ ಸಲ್ಲಿಸಬೇಕು. ಉಳಿದ ಹಣದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬೇಕು’ ಎಂದು ಕೋರಿದರು. 

‘ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ದಸರಾವನ್ನು ವ್ಯವಸ್ಥಿತವಾಗಿ ನಡೆಸಲು ಸಾಧ್ಯವಾಗದಿದ್ದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರ ಮಾಡಲಿ’ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ನ ಚೆಯ್ಯಂಡಾಣೆ ಘಟಕದ ಅಧ್ಯಕ್ಷ ಪ್ರತಾಪ್, ಪಕ್ಷದ ಪ್ರಮುಖರಾದ ಚೆರಿಯಮನೆ ಮಾದಪ್ಪ, ಮಹಮ್ಮದ್ ಅಬ್ರಾರ್, ಮಹಿಳಾ ಘಟಕದ ಉಪಾಧ್ಯಕ್ಷೆ ರಾಧಾ ಹಾಜರಿದ್ದರು.

*
ಕಾವೇರಿ ಕಲಾಕ್ಷೇತ್ರದಲ್ಲಿ ಈಚೆಗೆ ನಡೆದ ಬೈಲಾ ತಿದ್ದುಪಡಿ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಸಭೆಗೆ ಅವಮಾನ ಆಗುವಂತೆ ಹೊರ ನಡೆದಿದ್ದಾರೆ.  ಇಂಥ ವರ್ತನೆ ಸರಿಯಲ್ಲ.
–ಭರತ್‌ ಕುಮಾರ್‌,
ವಕ್ತಾರ, ಜೆಡಿಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.