ADVERTISEMENT

ದಸರಾ ಉತ್ಸವಕ್ಕೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 6:39 IST
Last Updated 20 ಸೆಪ್ಟೆಂಬರ್ 2017, 6:39 IST
ಗೋಣಿಕೊಪ್ಪಲು ದಸರಾ ಉತ್ಸವಕ್ಕೆ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ವೇದಿಕೆ
ಗೋಣಿಕೊಪ್ಪಲು ದಸರಾ ಉತ್ಸವಕ್ಕೆ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ವೇದಿಕೆ   

ಗೋಣಿಕೊಪ್ಪಲು: ಇಲ್ಲಿನ ಕಾವೇರಿ ದಸರಾ ಉತ್ಸವಕ್ಕೆ ಸಭಾಂಗಣ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಆಗಾಗ್ಗೆ ಸುರಿಯುತ್ತಿರುವ ಮಳೆಯ ನಡುವೆ ಪುತ್ತೂರಿನ ಆರ್ಕೆ ಭಟ್ ತಂಡದವರು ಅಂದಾಜು ₹ 8 ಲಕ್ಷ ವೆಚ್ಚದಲ್ಲಿ ವೇದಿಕೆ ನಿರ್ಮಿಸುತ್ತಿದ್ದಾರೆ.

ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಭಾಂಗಣ 160x90 ವಿಸ್ತೀರ್ಣ ಹೊಂದಿದೆ. ಮೈದಾನದಲ್ಲಿ ಕೆಸರು ತುಂಬಿದ್ದು ಕೆಲಸ ಕಾರ್ಯಗಳಿಗೆ ಅಡಚಣೆಯಾಗಿದೆ. ಮಳೆಯ ನಡುವೆಯೂ 20 ಜನ ಕಾರ್ಮಿಕರು ಕೆಲಸ ಮುಂದುವರಿಸಿದ್ದಾರೆ. ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮ 22ರಿಂದ ಆರಂಭಗೊಳುತ್ತಿದ್ದು ಈ ವೇಳೆಗೆ ಕೆಲಸ ಪೂರ್ಣಗೊಳ್ಳಲಿದೆ ಎಂದು ವೇದಿಕೆ ಸಮಿತಿ ಸಂಚಾಲಕ ಕೆ.ಆರ್.ಬಾಲಕೃಷ್ಣ ರೈ ಹೇಳಿದರು.

ಸಭಾಂಗಣದಲ್ಲಿ 1500 ಜನರು ಕುಳಿತುಕೊಳ್ಳಬಹುದು. ಗಾಳಿ ಮಳೆಯನ್ನು ತಡೆದುಕೊಳ್ಳುವ ಸುಭದ್ರ ಸಭಾಂಗಣವನ್ನು ನಿರ್ಮಿಸಲಾಗುತ್ತಿದೆ. ಸಭಾಂಗಣದ ಬಲಬದಿಯಲ್ಲಿ 30 ಅಡಿ ಸುತ್ತಳತೆಯ ಚಾಮುಂಡೇಶ್ವರಿ ದೇವಿ ಪೂಜಾ ಮಂಟಪವನ್ನು ಪ್ರತ್ಯೇಕವಾಗಿನಿರ್ಮಿಸಲಾಗುವುದು. ಮೈದಾನದಲ್ಲಿ ತುಂಬಿರುವ ಕೆಸರನ್ನು ಮರಳು ಹಾಕಿ ತೆಗೆಯಲಾಗುವುದು. ಮೈದಾನದ ಸುತ್ತ ಸಣ್ಣ ಪ್ರಮಾಣದ ಚರಂಡಿ ನಿರ್ಮಿಸಿ ಹರಿದು ಬರುವ ಮಳೆ ನೀರನ್ನು ತಡೆಯಲಾಗುವುದು ಎಂದರು.

ADVERTISEMENT

ಉತ್ಸವಕ್ಕೆ ತಗಲುವ ವೆಚ್ಚಕ್ಕೆ ₹ 25ಲಕ್ಷ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಹಣ ಬಿಡುಗಡೆ ಮಾಡಲಿದ್ದಾರೆ ಎಂದು ದಸರಾ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಬಿ.ಎನ್.ಪ್ರಕಾಶ್ ತಿಳಿಸಿದರು.

39 ವರ್ಷಗಳ ಹಿಂದೆ ಪದ್ಮನಾಭ ಕಾಮತ್, ದೇವಯ್ಯ, ಬಿ.ಡಿ.ಮುಕುಂದ, ರಾಮಾಚಾರ್, ಪ್ರಭಾಕರ್ ಶೇಟ್ ಅವರಿಂದ ಆರಂಭಗೊಂಡ ದಸರಾ ಇಂದು ಸರ್ಕಾರದ ಅನುದಾನ ಪಡೆದು ವಿಜೃಂಭಣೆಯಿಂದ ನಡೆಯುತ್ತಿದೆ. ಕಾವೇರಿ ದಸರಾ ಸಮಿತಿ ಎಂಬ ವೇದಿಕೆಯಲ್ಲಿ ದಸರಾ ಉತ್ಸವವನ್ನು ಜನೋತ್ಸವವಾಗಿ ಆಚರಿಸಲಾಗುತ್ತಿದೆ.

ಸೆ. 21ರಂದು ಬೆಳಿಗ್ಗೆ 8ಗಂಟೆಗೆ ಚಾಮುಂಡೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪನೆ ಮಾಡಿ ಬಳಿಕ ಭಜನಾ ಕಾರ್ಯ ಜರುಗಲಿದೆ. 22ರಿಂದ 30ರ ವರೆಗೆ ಪ್ರತಿ ದಿನ ಸಂಜೆ 6ರಿಂದ 11ರಾತ್ರಿ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

ನಾಡಹಬ್ಬ ದಸರಾ ಸಮಿತಿಯವರು ನಡೆಸಿಕೊಂಡು ಬರುತ್ತಿದ್ದಾರೆ. ವಿಜಯದಶಮಿಯಂದು ಸ್ತಬ್ಧಚಿತ್ರ ಮೆರವಣಿಗೆ ಜನತೆಯನ್ನು ಆಕರ್ಷಿಸಲಿದೆ. ಬಳಿಕ ರಾತ್ರಿ ನಡೆಯುವ ದಶಮಂಟಪಗಳ ಶೋಭಾಯಾತ್ರೆ ಜನಮನಸೂರೆಗೊಳ್ಳಲಿದೆ. ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಕಾರ್ಯಾಧ್ಯಕ್ಷ ಬಿ.ಎನ್.ಪ್ರಕಾಶ್,ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಕಾರ್ಯದರ್ಶಿ ಪ್ರಭಾವತಿ ತಂಡದವರು ಶ್ರಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.