ADVERTISEMENT

ದೇವಟ್ ಪರಂಬು ಸ್ಮಾರಕಕ್ಕೆ ವಿರೋಧ

ಜಿಲ್ಲಾ ಒಕ್ಕಲಿಗರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 6:53 IST
Last Updated 25 ಜೂನ್ 2016, 6:53 IST

ಮಡಿಕೇರಿ: ‘ದೇವಟ್ ಪರಂಬು ಪ್ರದೇಶವನ್ನು ನೆಪವಾಗಿರಿಸಿಕೊಂಡು ಯುದ್ಧ ಸ್ಮಾರಕದ ಹೆಸರಿನಡಿ ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವುದನ್ನು ತಪ್ಪಿಸಬೇಕು ಹಾಗೂ ಸ್ಮಾರಕ ನಿರ್ಮಾಣಕ್ಕೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿ ಜಿಲ್ಲಾ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಂ. ಚಂಗಪ್ಪ ಮಾತನಾಡಿ, ಭೂತಕಾಲದ ಘಟನೆಯನ್ನು ವರ್ತಮಾನದಲ್ಲಿ ನೆನಪಿಸಿಕೊಳ್ಳುತ್ತಾ ಜನಾಂಗೀಯ ಅವಹೇಳನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಭಾಗಮಂಡಲ ಹೋಬಳಿಯ ಸಣ್ಣಪುಲಿಕೋಟು ಗ್ರಾಮದ ಕರಿಯಂಗೋಟು ಎನ್ನುವ ಮೀಸಲು ಅರಣ್ಯ ಪ್ರದೇಶವನ್ನು ಸಿಎನ್‌ಸಿ ಸಂಘಟನೆಯು ಅಕ್ರಮ ಪ್ರವೇಶ ಮಾಡಿ ಕಲ್ಲುಗಳನ್ನು ನೆಟ್ಟು ಅದನ್ನು ಕೊಡವ ಜನಾಂಗೀಯ ಸ್ಮಾರಕ ಎಂದು ಪ್ರತಿಬಿಂಬಿಸುತ್ತಿದ್ದಾರೆ ಎಂದು ದೂರಿದರು.

ಸಿಎನ್‌ಸಿ ಸಂಘಟನೆ ಕೇವಲ ಕೊಡವ ಜನಾಂಗ ಮಾತ್ರ ಟಿಪ್ಪುವಿನಿಂದ ಸಂತ್ರಸ್ತರಾಗಿದ್ದಾರೆ ಎಂದು ಪ್ರತಿಬಿಂಬಿ ಸುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಎರಡು ವರ್ಷಗಳ ಹಿಂದೆ ಭಾಗಮಂಡಲ ಹೋಬಳಿ ದೋಣಿಕಾಡು ಎಂಬ ಪ್ರದೇಶದಲ್ಲಿ ಕಲ್ಲನ್ನು ನೆಟ್ಟು 1785 ಡಿಸೆಂಬರ್‌ 13ಎಂದು ನಮೂದಿಸಿ ಆ ಜಾಗವೇ ದೇವಟ್‌ ಪರಂಬು ಎಂದು ಪ್ರತಿಪಾದಿಸಲಾಗಿತ್ತು.

ಈಗ ಆ ಜಾಗವನ್ನು ಬಿಟ್ಟು ಮೀಸಲು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿ ಹೊಸದಾಗಿ ಕಲ್ಲುಗಳನ್ನು ನೆಟ್ಟು ದೇವಟ್‌ ಪರಂಬು ಎಂದು ಬಿಂಬಿಸಲಾಗುತ್ತಿದೆ ಎಂದರು.

ಒಕ್ಕಲಿಗರ ಸಂಘದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಎ.ಆರ್. ಮುತ್ತಣ್ಣ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಕೆ.ಪಿ. ನಾಗರಾಜು, ಮಡಿಕೇರಿ ಅಧ್ಯಕ್ಷ ಗೋಪಿನಾಥ್‌, ಕಾರ್ಯಾಧ್ಯಕ್ಷ ವಿ.ಪಿ. ಸುರೇಶ್, ಪದಾಧಿಕಾರಿಗಳಾದ ಕೆ.ಪಿ. ಚಂದ್ರಕಲಾ, ವಿ.ಪಿ. ಶಶಿಧರ್‌, ಎಸ್‌.ಪಿ. ಭರತ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.