ADVERTISEMENT

ಧಾರಾಕಾರ ಮಳೆ; ಆಸ್ತಿಪಾಸ್ತಿ ಹಾನಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 10:18 IST
Last Updated 23 ಏಪ್ರಿಲ್ 2018, 10:18 IST
ಶನಿವಾರಸಂತೆ ಹೋಬಳಿಯಾದ್ಯಂತ ಭಾನುವಾರ ಮಧ್ಯಾಹ್ನ ಗುಡುಗು–ಮಿಂಚು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು
ಶನಿವಾರಸಂತೆ ಹೋಬಳಿಯಾದ್ಯಂತ ಭಾನುವಾರ ಮಧ್ಯಾಹ್ನ ಗುಡುಗು–ಮಿಂಚು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು   

ಶನಿವಾರಸಂತೆ: ಹೋಬಳಿಯಾದ್ಯಂತ ಭಾನುವಾರ ಮಧ್ಯಾಹ್ನ 2–45ರಿಂದ 4 ರವರೆಗೆ ಗುಡುಗು–ಮಿಂಚು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು.ರಸ್ತೆಗಳು, ಚರಂಡಿಯಲ್ಲಿ ನೀರು ತುಂಬಿ ಹರಿಯಿತು. ಒಂದು ಇಂಚು ಮಳೆಯಾಗಿದೆ.

ಭಾರಿ ಬಿರುಗಾಳಿಗೆ ಅಲ್ಲಲ್ಲಿ ಹಾನಿಗಳಾಗಿವೆ. ಪಟ್ಟಣದ ಕಾನ್ವೆಂಟ್ ರಸ್ತೆಯಲ್ಲಿರುವ ಸುಶೀಲಾ ಹೋಂ ಇಂಡಸ್ಟ್ರೀಸ್ ಕಟ್ಟಡದ ₹ 20 ಸಾವಿರ ಮೌಲ್ಯದ 24 ಶೀಟುಗಳು ಗಾಳಿಗೆ ಹಾರಿ ನೆಲಕಚ್ಚಿ ಚೂರಾಗಿವೆ. ₹ 10 ಸಾವಿರ ಮೌಲ್ಯದ 3 ಸಾವಿರ ಅಡಿಕೆ ಹಾಳೆ, ₹ 10 ಸಾವಿರ ಮೌಲ್ಯದ 4 ಸಾವಿರ ತಟ್ಟೆಗಳು ಹಾರಿ ಹೋಗಿ ನಷ್ಟವಾಗಿವೆ.‌ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಮಳೆ ಶುರುವಾಗಿ, ಬಿರುಗಾಳಿ ಬೀಸಲಾರಂಭಿಸುತ್ತಿದ್ದಂತೆ ಭಯ ಭೀತರಾದ ಮಾಲೀಕರಾದ ಸುಶೀಲಾ, ಪುತ್ರ ಶಮಂತ್, ಐವರು ಮಹಿಳಾ ಕಾರ್ಮಿಕರೊಂದಿಗೆ ಹೊರಗೆ ಓಡಿ ಬಂದಿದ್ದು ಅಪಾಯದಿಂದ ಪಾರಾಗಿರುವುದಾಗಿ ಸುಶೀಲಾ ತಿಳಿಸಿದ್ದಾರೆ.

ADVERTISEMENT

ಮಳೆ–ಗಾಳಿ ರಭಸಕ್ಕೆ ಸೇಕ್ರೆಡ್ ಹಾರ್ಟ್ ಕಾನ್ವೆಂಟ್ ಆವರಣದ 15 ಅಡಿ ತಡೆಗೋಡೆ ಕುಸಿದು ಬಿದ್ದಿದೆ.

ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಸಿಎಂ ಹಾಸ್ಟೆಲ್ ಬಳಿ ಮೋರಿಗಳಿಲ್ಲದ ಕಾರಣ ಹರಿದು ಬಂದ ಮಳೆ ನೀರು ರಸ್ತೆಯಲ್ಲೇ ಹಳ್ಳವಾಗಿ ನಿಂತು ದನಕರುಗಳಿಗೆ, ಪಾದಚಾರಿಗಳಿಗೆ ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ರಭಸವಾಗಿ ಬಂದ ಮಳೆ ಸಂಜೆ ನಾಲ್ಕು ಗಂಟೆಯ ನಂತರ  ಕಡಿಮೆಯಾಗಿ ಸಣ್ಣಗೆ ಜಿನುಗತೊಡಗಿತು.ಗುಡುಗಿನ ಆರ್ಭಟ ಮುಂದುವರಿದಿತ್ತು. ಸಮೀಪದ ಕೊಡ್ಲಿಪೇಟೆ ಹೋಬಳಿಯಲ್ಲೂ ಗುಡುಗು–ಮಿಂಚು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.