ADVERTISEMENT

ನಗರದ ರಾಜಾಸೀಟ್‌ ರಸ್ತೆಗೆ ಮೆರುಗು

₹8 ಲಕ್ಷ ವೆಚ್ಚದಲ್ಲಿ ಕಾಮಗಾರಿ, ಕೊನೆಗೂ ಫುಟ್‌ಪಾತ್‌ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 10:08 IST
Last Updated 6 ಮಾರ್ಚ್ 2017, 10:08 IST
ಮಡಿಕೇರಿ: ನಗರದ ರಾಜಾಸೀಟ್‌ಗೆ ತೆರಳುವ ರಸ್ತೆಗೆ ನಗರಸಭೆ ವತಿಯಿಂದ ಇಂಟರ್‌ಲಾಕ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ಈ ರಸ್ತೆಗೆ ಹೊಸ ಮೆರುಗು ಬಂದಿದೆ. 
 
ಬಹುತೇಕ ಪ್ರವಾಸಿಗರಿಂದ ತುಂಬಿ ರುವ ರಸ್ತೆಯಲ್ಲಿ ಫುಟ್‌ಪಾತ್‌ ಇಲ್ಲದೇ ಸಮಸ್ಯೆ ಉಂಟಾಗುತ್ತಿತ್ತು. ಇದೀಗ ಫುಟ್‌ಪಾತ್‌ ನಿರ್ಮಾಣದಿಂದ ಸಮಸ್ಯೆಗೆ ಮುಕ್ತಿ ಸಿಗಲಿದೆ. ಇನ್ನೆರಡು ದಿನಗಳಲ್ಲಿ ಕಾಮಗಾರಿಯೂ ಪೂರ್ಣಗೊಳ್ಳಲಿದೆ. ವಾಹನ ನಿಲುಗಡೆ ಹಾಗೂ ಪಾದಚಾ ರಿಗಳ ಸಂಚರಿಸಲು ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.‌
 
ಮೊದಲನೇ ಹಂತವಾಗಿ ಗಾಂಧಿ ಮೈದಾನದಿಂದ ರಾಜಾಸೀಟ್‌ವರೆಗೆ  275 ಮೀಟರ್ ಉದ್ದ ಹಾಗೂ 2 ಮೀಟರ್ ಅಗಲದ ಇಂಟರ್‌ಲಾಕ್ ಅಳವಡಿಸಲಾಗುತ್ತಿದೆ. ರಾಜ್ಯ ಹಣಕಾಸು ಮುಕ್ತ ನಿಧಿಯಿಂದ ₹8 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ನಗರಸಭೆ ಸಹಾಯಕ ಎಂಜಿನಿಯರ್‌ ಕೆ.ಅರುಣ್ ‘ಪ್ರಜಾವಾಣಿ’ಗೆ ತಿಳಿಸಿದರು.
 
ಎರಡನೇ ಹಂತದಲ್ಲಿ ಸ್ಟೀವರ್ಟ್‌ ಹಿಲ್‌ ರಸ್ತೆಗೆ ₹10 ಲಕ್ಷ ವೆಚ್ಚದಲ್ಲಿ ಇಂಟರ್‌ಲಾಕ್ ಅಳವಡಿಸಲಾಗುವುದು. ಇದರ ಜತೆಗೆ ಸೋಲಾರ್ ಬೀದಿದೀಪ ಅಳವಡಿಸುವ ಚಿಂತನೆಯೂ ಇದೆ ಎಂದು ಮಾಹಿತಿ ನೀಡಿದರು.
 
ಒಂದು ಕಡೆ ಫುಟ್‌ಪಾತ್‌ ಅಭಿವೃದ್ಧಿ ಮಾಡಲಾಗುತ್ತಿದ್ದರೆ, ಮತ್ತೊಂದು ಕಡೆ ನಗರದ ವಿವಿಧ ಬಡಾವಣೆ ರಸ್ತೆಗಳನ್ನೆಲ್ಲಾ ಒಳಚರಂಡಿ ಕಾಮಗಾರಿಗೆ ಅಗೆದು ಹಾಕಲಾಗುತ್ತಿದೆ. ಯುಜಿಡಿ ಕಾಮಗಾರಿ ಪೂರ್ಣಗೊಳಿಸಿದ ಬಳಿಕವಷ್ಟೇ ಫುಟ್‌ಪಾತ್‌ ಕಾಮಗಾರಿ ಕೈಗೆತ್ತಿಕೊಳ್ಳಬೇಕಿತ್ತು. ಒಂದುವೇಳೆ ರಾಜಾಸೀಟ್‌ ಮಾರ್ಗವನ್ನೂ ಏನಾದರೂ ಅಗೆದು ಹಾಕಿದರೆ ರಸ್ತೆ– ಫುಟ್‌ಪಾತ್‌ ಎರಡು ಹಾಳಾಗಲಿವೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
 
ಸುಂದರ ನಗರ ಒಳ ಚರಂಡಿ ಕಾಮಗಾರಿಯಿಂದ ದೂಳುಮಯವಾಗಿ ಪರಿವರ್ತನೆಗೊಂಡಿದೆ. ನಗರದ ಫೆನ್‌ಷನ್ ಲೈನ್‌ರಸ್ತೆಗಳು, ಟೌನ್‌ಹಾಲ್ ಹಿಂಬದಿಯ ರಸ್ತೆಗಳೂ ಒಳಚರಂಡಿ ಕಾಮಗಾರಿಯಿಂದ ಹಾಳಾಗಿವೆ. 
 
ನಗರಸಭೆ ಹಿಂಬದಿಯ ರಸ್ತೆಯು ಒಂದು ತಿಂಗಳು ಕಳೆದರೂ ದುರಸ್ತಿಗೊಂಡಿಲ್ಲ. ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗು ತ್ತಿಲ್ಲ. ರಸ್ತೆಗೆ ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ ಅವರ ಹೆಸರು ಇಡಲಾಗಿದೆ. ರಸ್ತೆ ಮಾತ್ರ ವಾಹನ ಸಂಚಾರಕ್ಕೂ ಯೋಗ್ಯವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ.
 
ರಾಜಾಸೀಟ್‌ ಮಾರ್ಗ ಫುಟ್‌ಪಾತ್‌ನೊಂದಿಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ತಿರುವಿನಲ್ಲಿ ರಸ್ತೆ ಗುಂಡಿಮಯವಾಗಿದೆ. ಬಂದ ಪ್ರವಾಸಿಗರು ಹಿಡಿಶಾಪ ಹಾಕುತ್ತಿದ್ದಾರೆ. ಗುಂಡಿಮುಚ್ಚು ಕಾರ್ಯವನ್ನಾದರೂ ಮಾಡಬೇಕು. 
ಇನ್ನು ಗಾಂಧಿ ಮಂಟಪ ಅಭಿವೃದ್ಧಿ ಪಡಿಸುವ ಕಾಮಗಾರಿ ನೆನಗುದಿಗೆ ಬಿದ್ದಿದೆ. ಗಾಂಧಿ ಮಂಟಪವನ್ನು ಅಭಿವೃದ್ಧಿ ಪಡಿಸಿದರೆ ಈ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರಿಗೆ ಸುಂದರ ಅನುಭವ ಆಗಲಿದೆ. 
ಬಿ. ವಿಕಾಸ್‌ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.