ADVERTISEMENT

ನಾಪೋಕ್ಲುವಿನಲ್ಲಿ ಬೇಲ್‌ನಮ್ಮೆ ಇಂದು

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 10:31 IST
Last Updated 22 ಜುಲೈ 2017, 10:31 IST

ನಾಪೋಕ್ಲು: ಪಟ್ಟಣದ ಹೊರವಲಯ ದಲ್ಲಿ ಜುಲೈ 22ರಂದು ನಡೆಯಲಿರುವ ಬೇಲ್‌ನಮ್ಮೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ. ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಎರಡನೆಯ ಬಾರಿಗೆ ಬೇಲ್‌ನಮ್ಮೆ ನಾಪೋಕ್ಲುವಿನಲ್ಲಿ ಆಯೋಜಿಸಲಾಗಿದೆ. ಮಳೆಗಾಲದಲ್ಲಿ ಜಿಲ್ಲೆಯಲ್ಲಿ, ಭತ್ತದ ಗದ್ದೆಯಲ್ಲಿ ಜರುಗುವ ಈ ಹಬ್ಬ ಕೆಸರು ಗದ್ದೆ ಕ್ರೀಡಾಕೂಟಗಳಿಗಿಂತ ಭಿನ್ನ. ಇಲ್ಲಿ ಬರಿ ಆಟೋಟಗಳು ಮಾತ್ರವಲ್ಲದೆ ಭತ್ತದ ಗದ್ದೆಯಲ್ಲಿ ಕೃಷಿ ಪಾಠಗಳೂ  ನಡೆಯುತ್ತವೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಬೇಲ್‌ನಮ್ಮೆಯನ್ನು ಕೆಲವು ವರ್ಷಗಳಿಂದ ಆಯೋಜಿಸುತ್ತಾ ಬಂದಿದೆ.   ಕೃಷಿ ಪ್ರಧಾನವಾದ ದೇಶದಲ್ಲಿ ಭತ್ತದ ಕೃಷಿಗೆ ಪ್ರೋತ್ಸಾಹದ ಕೊರತೆ ಇದ್ದು,  ಜಿಲ್ಲೆಯ ರೈತರು ಅದರಿಂದ ವಿಮುಖರಾಗಿದ್ದಾರೆ. ಭತ್ತವನ್ನು ಕಡೆಗಣಿಸದೆ ಕೃಷಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಉತ್ತಮವಾಗುತ್ತದೆ. ಹಾಗೂ ನಾಡಿನ ಪ್ರಗತಿಯಾಗುತ್ತದೆ ಎಂಬ ಉದ್ದೇಶ ದಿಂದ  ಉತ್ಸವ ಆಯೋಜಿಸುತ್ತಿದೆ.

ನಾಪೋಕ್ಲು ಕೊಡವಸಮಾಜ, ಕ್ರೀಡಾ ಸಾಂಸ್ಕೃತಿಕ ಮತ್ತು ಮನೋರಂಜನಾ ಕೂಟವೂ ಬೇಲ್‌ನಮ್ಮೆಗೆ ಸಾಥ್ ನೀಡುತ್ತಿದೆ. ‘ಇತ್ತೀಚಿನ ದಿನಗಳಲ್ಲಿ ಯುವಜನಾಂಗದಲ್ಲಿ ಕೃಷಿ ಬಗ್ಗೆ ಆಸಕ್ತಿ ಕುಂಠಿತಗೊಂಡಿರುವುದರಿಂದ, ಕೃಷಿ ಚಟುವಟಿಕೆಗಳ ಬಗ್ಗೆ ಮಕ್ಕಳು ಅರಿವು ಹೊಂದುವಂತಾಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಬೆಲ್‌ನಮ್ಮೆ ನಡೆಸಲಾಗುತ್ತಿದೆ’ ಎಂದು ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ  ಎಸ್‌. ತಮ್ಮಯ್ಯ ಹೇಳಿದರು.

ADVERTISEMENT

ಬೇಲ್‌ ನಮ್ಮೆ 2017 ಕಾರ್ಯಕ್ರಮ ವನ್ನು ಬೆಳಿಗ್ಗೆ 9.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಉದ್ಘಾಟಿಸಲಿದ್ದಾರೆ. ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ಎಸ್‌.ತಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಕೆ.ಜಿ. ಬೋಪಯ್ಯ ವಿಧಾನಪರಿಷತ್‌ ಸದಸ್ಯೆ ಶಾಂತೇಯಂಡ ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌, ನಾಪೋಕ್ಲು ಕೊಡವ ಸಮಾಜ ಕ್ರೀಡಾ ಸಾಂಸ್ಕೃತಿಕ ಮತ್ತು ಮನರಂಜನಾ ಕೂಟದ ಅಧ್ಯಕ್ಷ ಪಾಂಡಂಡ ಜೋಯಪ್ಪ ಮತ್ತಿತರರು ಪಾಲ್ಗೊಳ್ಳುವರು.

‘ ಆಧುನಿಕತೆಲ್‌ ಕ್‌ಣ್‌ಂಜ ನೆಲ್ಲ್‌ ಕೃಷಿ’ ಎಂಬ ವಿಷಯದ ಕುರಿತು ಅಮ್ಮಣಿಚಂಡ ಪ್ರವೀಣ್‌ ಚೆಂಗಪ್ಪ ವಿಚಾರ ಮಂಡನೆ ಮಾಡಲಿದ್ದಾರೆ.  ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್‌ ಸದಸ್ಯ ಮಂಡೇಪಂಡ ಸುನಿಲ್‌ ಸುಬ್ರಮಣಿ, ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್‌, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕಂಡ ಶಶಿ ಸುಬ್ರಮಣಿ ಹಾಗೂ ನಾಪೋಕ್ಲು ಗ್ರಾಮಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬತಿಮ್ಮಯ್ಯ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.