ADVERTISEMENT

ನಾಪೋಕ್ಲು: ವಿಜೃಂಭಿಸಿದ ಹುತ್ತರಿ ಕೋಲಾಟ

ಸಾಂಪ್ರದಾಯಿಕ ಹಬ್ಬದ ಮಹತ್ವ ಸಾರಿದ ಹಲವು ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 11:36 IST
Last Updated 7 ಡಿಸೆಂಬರ್ 2017, 11:36 IST
ನಾಪೋಕ್ಲು ಸಮೀಪದ ಮೂರ್ನಾಡಿನ ಪಾಂಡಾಣೆ ನಾಡ್ ಮಂದ್ ಮೈದಾನದಲ್ಲಿ ಬುಧವಾರ ಸುಗ್ಗಿ ಹಬ್ಬವಾದ ಹುತ್ತರಿ ಕೋಲಾಟದ ಅಂಗವಾಗಿ ಆರು ಗ್ರಾಮಗಳ ಜನರು ಕೋಲಾಟವಾಡಿದರು
ನಾಪೋಕ್ಲು ಸಮೀಪದ ಮೂರ್ನಾಡಿನ ಪಾಂಡಾಣೆ ನಾಡ್ ಮಂದ್ ಮೈದಾನದಲ್ಲಿ ಬುಧವಾರ ಸುಗ್ಗಿ ಹಬ್ಬವಾದ ಹುತ್ತರಿ ಕೋಲಾಟದ ಅಂಗವಾಗಿ ಆರು ಗ್ರಾಮಗಳ ಜನರು ಕೋಲಾಟವಾಡಿದರು   

ನಾಪೋಕ್ಲು: ಇಗ್ಗುತ್ತಪ್ಪ ದೇವಡ ಪುತ್ತರಿ ನಮ್ಮೆ .... ಪೊಯಿಲೇ ಪೊಯಿಲೇ, ಮಕ್ಕಿದೇವಡ ಕೋಲ್‌ಕಳಿಂಜ ... ಪೊಯಿಲೇ ಪೊಯಿಲೆ ಬಿದ್ದಾಟಂಡ ವಾಡಲ್‌ ಕೋಲ್‌ ಕಳಿಂಜ ಪೊಯಿಲೆ ಪೊಯಿಲೆ...

ಇದು ಸಮೀಪದ ಬಿದ್ದಾಟಂಡ ವಾಡೆಯಲ್ಲಿ ಬುಧವಾರ ಮಧ್ಯಾಹ್ನ ಜರುಗಿದ ಸಂಭ್ರಮದ ಹುತ್ತರಿ ಕೋಲಾಟದಲ್ಲಿ ಕೇಳಿ ಬಂದ ಕೋಲಾಟಗಾರರ ಹರ್ಷೊದ್ಗಾರಗಳಿವು.

ಕೊಡಗಿನ ಪ್ರಸಿದ್ಧ ಸಾಂಪ್ರದಾಯಿಕ ಹುತ್ತರಿ ಕೋಲಾಟಗಳಲ್ಲಿ ಒಂದಾದ ಮಕ್ಕಿಶಾಸ್ತಾವು ನಾಡ್‌ಮಂದ್‌ ಕೋಲ್‌ ಬಿದ್ದಾಟಂಡ ವಾಡೆಯಲ್ಲಿ ನೂರಂಬಾಡ ತಕ್ಕಮುಖ್ಯಸ್ಥರು ಮತ್ತು ಊರಿನವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ನೆರವೇರಿತು.

ADVERTISEMENT

ನಾಪೋಕ್ಲು ನಾಡಿಗೆ ಸಂಬಂಧಿಸಿದ ಬೇತು, ಕೊಳಕೇರಿ ಮತ್ತು ನಾಪೋಕ್ಲು ಗ್ರಾಮಗಳ ತಕ್ಕಮುಖ್ಯಸ್ಥರು ಒಟ್ಟಾಗಿ ಸೇರಿ ಕೋಲಾಟವನ್ನು ಆಚರಿಸಿ ಸಾಂಪ್ರದಾಯಿಕ ಹಬ್ಬದ ಮಹತ್ವ ಸಾರಿದರು. ನಾಪೋಕ್ಲು ವ್ಯಾಪ್ತಿಯ ಮಂದಿ ಅಧಿಕ ಸಂಖ್ಯೆಯಲ್ಲಿ ಹುತ್ತರಿ ಕೋಲಾಟ ಸಡಗರದಲ್ಲಿ ಪಾಲ್ಗೊಂಡಿದ್ದರು.

ದುಡಿಕೊಟ್ಟ್‌ ವಾದ್ಯಕ್ಕೆ ತಕ್ಕಂತೆ ಕೋಲಾಟಗಾರರು ವಾಡೆಯ ಸುತ್ತಲೂ ನರ್ತಿಸುತ್ತಾ ಪೊಯಿಲೇ ಪೊಯಿಲೇ ಹರ್ಷೋದ್ಗಾರಗಳೊಂದಿಗೆ ಹುತ್ತರಿ ಕೋಲಾಟದಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದಿಂದ ವಿವಿಧ ಕುಟುಂಬಗಳ ಮುಖ್ಯಸ್ಥರು ಕೋಲು ಪಟ್ಟು ಹಾಗೂ ಬೆಳ್ಳಿಯ ಕಡತಲೆಯನ್ನು ಸಾಂಪ್ರದಾಯಿಕ ಕಾಪಾಳ ನೃತ್ಯ ಕೊಂಬು, ವಾಲಗ ದುಡಿಕೊಟ್ಟ್‌ ಪಾಟ್‌ನೊಂದಿಗೆ ಬೆಳಿಗ್ಗೆ ಹೊರಡುವುದರ ಮೂಲಕ ಹುತ್ತರಿ ಕೋಲಾಟಕ್ಕೆ ಚಾಲನೆ ದೊರೆಯಿತು. ಮಧ್ಯಾಹ್ನ ಕುರುಂಬರಾಟ್‌ ಎಂಬ ತಾಣದಿಂದ ಬೇತು ಗ್ರಾಮಸ್ಥರು ಮೆರವಣಿಗೆಯಲ್ಲಿ ಬರುತ್ತಿದ್ದಂತೆ ಮಂದ್‌ನಲ್ಲಿ ಬಿದ್ದಾಟಂಡ ಹಿರಿಯರು ಸಾಂಪ್ರದಾಯಿಕ ಉಡುಪು ಧರಿಸಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಬರಮಾಡಿಕೊಂಡರು.

ನೂರಂಬಾಡ ನಾಡಿಗೆ ಸಂಬಂಧಿಸಿದಂತೆ ಬೇತು ಗ್ರಾಮದ ಮಕ್ಕಿಶಾಸ್ತಾವು ದೇವಾಲಯದಿಂದ ಹುತ್ತರಿ ಕೋಲಾಟಕ್ಕೆ ಚಾಲನೆ ನೀಡಿದಂತೆ ಅತ್ತ ನಾಪೋಕ್ಲುನಾಡಿನ ಭಗವತಿ ದೇವಾಲಯ ಹಾಗೂ ಮೂಟೇರಿ ಉಮಾಮಹೇಶ್ವರಿ ದೇವಾಲಯದಿಂದಲೂ ಸಾಂಪ್ರದಾಯಿಕ ಹುತ್ತರಿ ಕೋಲಾಟಕ್ಕೆ ಚಾಲನೆ ನೀಡಲಾಯಿತು.

ನಂತರ ಬಿದ್ದಾಟಂಡ ಕುಟುಂಬಸ್ಥರ ಗುರುಪೊನ್ನಪ್ಪ ಅವರ ಕೈಮಡ ಸ್ಥಳದ ಬಳಿ ವಿಶಾಲಮರದಡಿ ಹುತ್ತರಿ ಕೋಲಾಟವನ್ನು ವಿವಿಧ ಹಂತಗಳಲ್ಲಿ ಅಬಾಲವೃದ್ಧರಾದಿಯಾಗಿ ಮಂದ್‌ಗೆ ಪ್ರದಕ್ಷಿಣೆ ಬರುತ್ತಾ ಲಯಬದ್ಧವಾಗಿ ಕೋಲು ಹೊಡೆಯುತ್ತಾ ಸಂಭ್ರಮಿಸಿದರು.

ಮೈಯೆಲ್ಲಾ ಕಪ್ಪುಬಣ್ಣ ಬಳಿದು ಸೊಂಟಕ್ಕೆ ಗಂಟೆ ಕಟ್ಟಿಕೊಂಡು ನರ್ತಿಸುವ ಕಾಪಾಳರು ವೀಕ್ಷಕರ ಗಮನ ಸೆಳೆದರು. ಮೂರು ಗ್ರಾಮಗಳ ಮಂದಿಯ ವಿವಿಧ ಹಂತದ ಕೋಲಾಟ ಪ್ರದರ್ಶನದ ಬಳಿಕ ಕಪ್ಪೆಯಾಟ್‌, ಪರೆಯಕಳಿ ಮುಂತಾದ ಸಾಂಪ್ರದಾಯಿಕ ಆಚರಣೆಗಳು ಜರುಗಿದವು.

***

ಮೂರ್ನಾಡಿನಲ್ಲೂ ಸಂಭ್ರಮ

ನಾಪೋಕ್ಲು : ಸುಗ್ಗಿ ಹಬ್ಬವಾದ ಹುತ್ತರಿ ಕೋಲಾಟ ಸಮೀಪದ ಮೂರ್ನಾಡಿನ ಪಾಂಡಾಣೆ ನಾಡ್ ಮಂದ್ ಮೈದಾನದಲ್ಲಿ ಬುಧವಾರ ಸಡಗರ ಸಂಭ್ರಮದಿಂದ ನಡೆಯಿತು.

ಸಂಪ್ರದಾಯದಂತೆ ಆರು ಗ್ರಾಮಗಳ ಗ್ರಾಮಸ್ಥರು ಊರತಕ್ಕ್, ನಾಡತಕ್ಕ್ ಮುಖ್ಯಸ್ಥರೊಂದಿಗೆ ಸಂಪ್ರಾದಾಯಿಕ ಉಡುಪಿನಲ್ಲಿ ಕೊಡಗಿನ ಓಲಗ ಹಾಗೂ ಕಾಪಾಳ ವೇಷಧಾರಿಗಳೊಂದಿಗೆ ಅಪರಾಹ್ನ 2 ಗಂಟೆ ಬಳಿಕ ನಾಡ್‌ಮಂದ್‌ಗೆ ಆಗಮಿಸಿದರು.

ಐಕೊಳ, ಬಾಡಗ, ಕಾಂತೂರು, ಕೋಡಂಬೂರು, ಮುತ್ತಾರುಮುಡಿ ಹಾಗೂ ಕಿಗ್ಗಾಲು ಗ್ರಾಮಸ್ಥರು ಒಟ್ಟು ಸೇರಿ ಕೋಲು ಹೊಡೆದು ಸಂಭ್ರಮಿಸಿದರು.ವಿವಿಧ ಗ್ರಾಮಗಳಿಂದ ಮಂದ್‌ಗೆ ಬಂದ ಕಾಪಾಳ ವೇಷಧಾರಿಗಳು ಪ್ರೇಕ್ಷಕರ ಗಮನ ಸೆಳೆದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.