ADVERTISEMENT

ನಿಯಂತ್ರಣಕ್ಕೆ ಬಾರದ ಕಾಮಾಲೆ

ನಾಪೋಕ್ಲು ಸುತ್ತ ಕಲುಷಿತ ನೀರು ಸೇವನೆ; ಟೈಫಾಯಿಡ್‌ ಜ್ವರದ ಆತಂಕದಲ್ಲಿ ಜನತೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 10:10 IST
Last Updated 28 ಫೆಬ್ರುವರಿ 2017, 10:10 IST

ನಾಪೋಕ್ಲು: ಪಟ್ಟಣದ ಸುತ್ತಮುತ್ತ ಕಾಮಾಲೆ ರೋಗ ಹೆಚ್ಚುತ್ತಿದ್ದು ವಿದ್ಯಾರ್ಥಿಗಳು ಸೇರಿದಂತೆ ಹಲವರು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ.

ಕಲುಷಿತ ನೀರು ಸೇವನೆ ಇದಕ್ಕೆ ಕಾರಣ ಎನ್ನಲಾಗಿದೆ. ಕಾಮಾಲೆ ಜತೆಗೆ ಟೈಫಾಯಿಡ್ ಕೂಡ ಜನರನ್ನು ಬಾಧಿಸುತ್ತಿದೆ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.

ಹೋಬಳಿ ವ್ಯಾಪ್ತಿಯಲ್ಲಿ ಕಾಮಾಲೆ ನಿಯಂತ್ರಣಕ್ಕಾಗಿ ಆರೊಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಜತೆಗೆ ಕಲುಷಿತ ನೀರು, ರಸ್ತೆ ಬದಿ ತಿನಿಸು ಮಾರಾಟ ತಡೆಯಬೇಕಿದೆ.

ADVERTISEMENT

ತ್ಯಾಜ್ಯ ಸೇರ್ಪಡೆಯೊಂದಿಗೆ ಕಲುಷಿತ ನೀರನ್ನೇ ಪಟ್ಟಣಕ್ಕೆ ಪೂರೈಕೆ ಆಗುತ್ತಿದೆ ಇದೂ ಅನಾರೋಗ್ಯ ಸಮಸ್ಯೆ ಹೆಚ್ಚಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶುದ್ದೀಕರಣ ಘಟಕವಿಲ್ಲದೆ ಕಾವೇರಿ ಹೊಳೆಯಿಂದ ಪಂಪ್ ಮೂಲಕ ಟ್ಯಾಂಕ್‌ಗೆ ನೀರನ್ನು ಹರಿಸಲಾಗುತ್ತದೆ. ಅಲ್ಲಿಂದ ನೇರವಾಗಿ ಪಟ್ಟಣದ ಜನತೆಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿನ ಶುದ್ದೀಕರಣ ಘಟಕ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೋಬಳಿ ವ್ಯಾಪ್ತಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಜನ ಸಾಲುಗಟ್ಟಿ ನಿಂತಿರುವುದು ಸಾಮಾನ್ಯ ದೃಶ್ಯವಾಗಿದೆ.
‘ಚಿಕಿತ್ಸೆಗೆ ಬರುವ ರೋಗಿಗಳಲ್ಲಿ ಎರಡರಿಂದ ಮೂರು ಮಂದಿಯಲ್ಲಿ ಕಾಮಾಲೆ ಪತ್ತೆಯಾಗುತ್ತಿದೆ’ ಎಂದು ಇಲ್ಲಿನ ವೈದ್ಯಾಧಿಕಾರಿ ಉಮಾಭಾರತಿ ಹೇಳಿದರು.

ಕಾಮಾಲೆ ರೋಗ ಚಿಕಿತ್ಸೆಗಾಗಿ ಕೆಲವರೂ ನಾಟಿ ಮದ್ದಿಗೆ ಮೊರೆಹೋಗುತ್ತಿದ್ದಾರೆ.

ನಾಟಿ ಚಿಕಿತ್ಸೆ ನೀಡುತ್ತಿರುವ ಮುತ್ತುರಾಣಿ ಅಚ್ಚಪ್ಪ, ‘ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಔಷಧಿ ನೀಡಲು ಅಗತ್ಯ ಸಸ್ಯ ಔಷಧಿಗಳು ಸಿಗುತ್ತಿಲ್ಲ’ ಎಂದುಹೇಳಿದರು.

ಇತ್ತ ಕಾಮಾಲೆ ನಿಯಂತ್ರಿಸಲು ಕ್ರಮಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮನ್ಸೂರ್ ಆಲಿ ಒತ್ತಾಯಿಸಿದ್ದಾರೆ.

* ಶಾಲೆಯ ಸುಮಾರು 40 ವಿದ್ಯಾರ್ಥಿಗಳಿಗೆ ಕಾಮಾಲೆ ಕಾಣಿಸಿಕೊಂಡಿದೆ.  4 ಮಂದಿ ಟೈಫಾಯಿಡ್‌ನಿಂದ ಬಳಲುತ್ತಿದ್ದಾರೆ.  ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿಲ್ಲ

-ಬಿದ್ದಾಟಂಡ ಮಮತಾಚಿಣ್ಣಪ್ಪ
ಮುಖ್ಯ ಶಿಕ್ಷಕಿ, ಸೇಕ್ರೇಡ್ ಹಾರ್ಟ್‌ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.