ADVERTISEMENT

‘ಪರಿಸರ ಸೂಕ್ಷ್ಮ ವಲಯ’ ಘೋಷಿಸಿ

ಕೂರ್ಗ್‌ ವೈಲ್ಡ್‌ಲೈಫ್‌ ಸೊಸೈಟಿ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 9:33 IST
Last Updated 16 ಫೆಬ್ರುವರಿ 2017, 9:33 IST
ಮಡಿಕೇರಿ: ‘ಇಡೀ ಕೊಡಗು ಜಿಲ್ಲೆಯನ್ನೇ ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಬೇಕು’ ಎಂದು ಕೂರ್ಗ್‌ ವೈಲ್ಡ್‌ಲೈಫ್‌ ಸೊಸೈಟಿಯ ಅಧ್ಯಕ್ಷರೂ ಆದ, ನಿವೃತ್ತ ಕರ್ನಲ್‌ ಸಿ.ಪಿ. ಮುತ್ತಣ್ಣ ಆಗ್ರಹಿಸಿದರು.
 
ನಗರದ ಸೊಸೈಟಿಯ ಕಚೇರಿಯಲ್ಲಿ ಪರಿಸರ ಸಂರಕ್ಷಣೆ ಕುರಿತು ಬುಧವಾರ ವಿವಿಧ ಸಂಘ– ಸಂಸ್ಥೆಗಳ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾವೇರಿ ದಕ್ಷಿಣ ಭಾರತ ಜೀವನದಿ. ಕಾವೇರಿ ಅಂದಾಜು 8 ಕೋಟಿ ಜನರಿಗೆ ನೀರು ಉಣಿಸುತ್ತಾಳೆ. 600ಕ್ಕೂ ಹೆಚ್ಚು ಬೃಹತ್‌ ಕಾರ್ಖಾನೆಗಳಿಗೆ ಈ ನದಿಯ ನೀರೆ ಆಧಾರ.
 
ಆದರೆ, ಕೊಡಗು ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಪರಿಸರದ ಮೇಲಿನ ದಬ್ಬಾಳಿಕೆಯಿಂದ ದಿನದಿಂದ ದಿನಕ್ಕೆ ಕಾವೇರಿ ಬರಿದಾಗುತ್ತಿದ್ದಾಳೆ. ಇದನ್ನು ತಪ್ಪಿಸಲು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿ, ಪರಿಸರ ಉಳಿಸಲು ಬಿಗಿ ಕ್ರಮ ಕೈಗೊಳ್ಳುವುದು ಅಗತ್ಯ’ ಎಂದು ಪ್ರತಿಪಾದಿಸಿದರು.
 
ಕೆಆರ್‌ಎಸ್‌ಗೆ ಕೊಡಗು ಜಿಲ್ಲೆಯಿಂದ ಶೇ 70ರಷ್ಟು ನೀರು ಹರಿದು ಹೋಗುತ್ತಿದೆ. ನದಿಯ ಅಕ್ಕಪಕ್ಕ ಬೀಳುವ ಮಳೆಯ ನೀರು ಶೇ 32, ಕಾಫಿ ತೋಟದಲ್ಲಿ ಬೀಳುವ ಮಳೆ ನೀರು ಶೇ 28, ಗದ್ದೆಗಳ ಮೂಲಕ ನದಿ ಸೇರುವ ನೀರು ಶೇ 12 ರಷ್ಟು ಕೆಆರ್‌ ಎಸ್‌ಗೆ ಸೇರುತ್ತಿದೆ. ಆದ್ದರಿಂದ, ಕೊಡಗು ಜಿಲ್ಲೆಯ ಪರಿಸರವನ್ನು ರಕ್ಷಣೆ ಮಾಡು ವುದು ಅಗತ್ಯ ಎಂದು ಪುನರುಚ್ಚರಿಸಿದರು.
 
ಜಿಲ್ಲೆಯಲ್ಲಿ ನಗರೀಕರಣಕ್ಕೆ ಭೂ ಪರಿವರ್ತನೆ ಮಾಡಲಾಗುತ್ತಿದೆ. 10 ವರ್ಷದ ಅವಧಿಯಲ್ಲಿ 2,800 ಎಕರೆ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಜಿಲ್ಲೆಯಲ್ಲಿ ಪರಿವರ್ತನೆ ಮಾಡಲಾಗಿದೆ. ಹೊಸ ಬಡಾವಣೆ ನಿರ್ಮಾಣ, ರೆಸಾರ್ಟ್‌, ಹೋಂಸ್ಟೇ, ರೈಲ್ವೆ ಹೊಸ ಮಾರ್ಗ ನಿರ್ಮಾಣ, ಮರಳು ದಂಧೆಗೆ ಕಡಿವಾಣ ಹಾಕಬೇಕು. ಕೇರಳಕ್ಕೆ ವಿದ್ಯುತ್‌ ಮಾರ್ಗಕ್ಕಾಗಿ ಕೊಡಗಿನಲ್ಲಿ 54 ಸಾವಿರ ಮರಗಳನ್ನು ಹನನ ಮಾಡಲಾಯಿತು. 8 ಸಾವಿರ ಅರಣ್ಯದಲ್ಲಿ, 46 ಸಾವಿರ ಕಾಫಿ ತೋಟದಲ್ಲಿ ಮರಗಳನ್ನು ಕಡಿದು ಹಾಕಲಾಯಿತು ಎಂದು ನೋವು ತೋಡಿಕೊಂಡರು.
 
ಜಿಲ್ಲೆಯಲ್ಲಿ 5.50 ಲಕ್ಷ ಜನಸಂಖ್ಯೆಯಿದೆ. ಆದರೆ, ಪ್ರತಿವರ್ಷ 13 ಲಕ್ಷ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಿರುವುದು ದುರಂತ. ಹೊಸ ರೆಸಾರ್ಟ್‌ ಸ್ಥಾಪನೆಗೆ ಅವಕಾಶ ನೀಡಬಾರದು. ಮಿನಿ ವಿಮಾನ ನಿಲ್ದಾಣ, ಕ್ರಿಕೆಟ್‌ ಸ್ಟೇಡಿಯಂ ಸ್ಥಾಪಿಸಲು ಉದ್ದೇಶಿಸಲಾಗಿದ್ದು ಇದಕ್ಕೆ ನಮ್ಮ ವಿರೋಧವಿದೆ ಎಂದು ಎಚ್ಚರಿಸಿದರು.
 
ಕಾವೇರಿ ಜಲಾನಯನದ ಪ್ರಮುಖ ಜಿಲ್ಲೆ ಕೊಡಗು. ಇದನ್ನು ಸಾಯಿಸುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಇದೀಗ ಕೊಂಗಣ ನದಿ ತಿರುವು ಯೋಜನೆಯ ಕೂಗು ಕೇಳಿಬರುತ್ತಿದ್ದು, ನದಿ ನೀರನ್ನು ಹುಣಸೂರಿಗೆ ತೆಗೆದುಕೊಂಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
 
ರೈಲ್ವೆ ಮಾರ್ಗಕ್ಕೆ ವಿರೋಧ: ಮೈಸೂರು– ಕುಶಾಲನಗರ ರೈಲ್ವೆ ಸಂಪರ್ಕ ಕಾರ್ಯಗತವಾದರೆ ಕೊಡಗು ಜಿಲ್ಲೆಗೆ ಉಳಿಗಾಲ ಇಲ್ಲ. ಇದೀಗ ವಾಹನಗಳಲ್ಲಿ ಬರುತ್ತಿರುವ ಬಾಂಗ್ಲಾ ಅಕ್ರಮ ವಲಸಿಗರು, ಇನ್ನು ಮುಂದೆ ರೈಲಿನಲ್ಲಿ ಬರಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
 
ನಿವೃತ್ತ ಏರ್‌ಮಾರ್ಷಲ್‌ ನಂದ ಕಾರ್ಯಪ್ಪ ಮಾತನಾಡಿ, ‘ಮುಂದಿನ ಪೀಳಿಗೆಗೆ ನೀರು, ಪರಿಸರ ಹಾಗೂ ಭೂಮಿ ಉಳಿಸುವುದು ಅಗತ್ಯ. ಕೇರಳ ರಾಜ್ಯದಲ್ಲಿ ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆ ಮಾಡುತ್ತಿಲ್ಲ. ಆದರೆ, ಕೊಡಗಿನಲ್ಲಿ ಅವ್ಯಾಹತವಾಗಿ ಭೂಪರಿವರ್ತನೆ ನಡೆಯುತ್ತಿದೆ. ಕಾಡು ನಾಶದಿಂದ ಮಾನವ– ಪ್ರಾಣಿಗಳ ಸಂಘರ್ಷ ನಿರಂತರವಾಗಿದೆ. ಹುಲಿಗಳು ಮನುಷ್ಯರ ವಾಸದ ಸ್ಥಳಕ್ಕೇ ಬರುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
 
ಪತ್ರಿಕಾಗೋಷ್ಠಿಯಲ್ಲಿ ಅರುಣ್‌ ಚೆಂಗಪ್ಪ, ಜಯಕುಮಾರ್‌, ಗಣೇಶ್‌ ಐಯ್ಯಣ್ಣ ಹಾಜರಿದ್ದರು.
 
ದೊರೆಸ್ವಾಮಿ ಕ್ಷಮೆಯಾಚಿಸಲಿ: ಆಗ್ರಹ
 
ಮಡಿಕೇರಿ: ‘ದಿಡ್ಡಳ್ಳಿಯ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದ ಪ್ರಕರಣದಲ್ಲಿ ಕೆಲವು ಹೋರಾಟಗಾರರು ಹಾದಿ ತಪ್ಪಿಸುತ್ತಿದ್ದು, ಅವರಿಗೆ ಬೆಂಬಲ ಸೂಚಿಸಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿಗೆ ಧಿಕ್ಕಾರ; ಅವರು ಕೊಡಗು ಜಿಲ್ಲೆಯ ಜನರ ಕ್ಷಮೆಯಾಚಿಸಬೇಕು’ ಎಂದು ಬಸವಣ್ಣ ದೇವರ ಬನ ಟ್ರಸ್ಟ್‌ ಅಧ್ಯಕ್ಷ ಡಾ.ಬಿ.ಸಿ.ನಂಜಪ್ಪ ಆಗ್ರಹಿಸಿದರು.
 
‘ದಿಡ್ಡಳ್ಳಿ ರಕ್ಷಿತಾರಣ್ಯ ಎಂದು ಗೊತ್ತಿದ್ದೂ ಅದೇ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಬೇಕೆನ್ನುವ ಹೋರಾಟದಲ್ಲಿ ಅವರು ಪಾಲ್ಗೊಂಡಿರುವುದು ದುರದೃಷ್ಟಕರ. ಸ್ವಾತಂತ್ರ್ಯ ಹೋರಾಟಗಾರರು ಎನ್ನುವ ಕಾರಣಕ್ಕೆ ಅವರ ಮೇಲೆ ಗೌರವವಿತ್ತು. ಆದರೆ, ಇಂತಹ ಕೀಳುಮಟ್ಟಕ್ಕೆ ದೊರೆಸ್ವಾಮಿ ಇಳಿಯಬಾರದಿತ್ತು.
 
ಅತಿಕ್ರಮಗಳಿಗೆ ಬೆಂಬಲ ಸೂಚಿಸಿರುವುದು ವ್ಯಕ್ತಿತ್ವಕ್ಕೆ ಶೋಭೆ ತರುವ ವಿಚಾರವಲ್ಲ. ಕೊಡಗಿನಲ್ಲೂ ಸಾಕಷ್ಟು ಮಂದಿ ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ಅವರಿಗೆ ವಾಸ್ತವ ಗೊತ್ತಿದ್ದ ಕಾರಣ ಈ ಹೋರಾಟಕ್ಕೆ ಬೆಂಬಲ ಸೂಚಿಸಲಿಲ್ಲ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲಾಡಳಿತ ನಿರಾಶ್ರಿತರಿಗೆ ಮೂರು ಸ್ಥಳಗಳಲ್ಲಿ ಜಾಗ ಗುರುತಿಸಿ ನಿವೇಶನ ಹಂಚಿಕೆ ಮಾಡಿದ್ದರೂ ಅಲ್ಲಿಗೆ ತೆರಳದ ಅವಿವೇಕಿಗಳಿಗೆ ಬೆಂಬಲ ನೀಡಿರುವುದು ದುರಂತ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.