ADVERTISEMENT

ಪುನರ್ವಸತಿ ಹೊಣೆ ಕಾಗೋಡು ಹೆಗಲಿಗೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 5:52 IST
Last Updated 12 ಏಪ್ರಿಲ್ 2017, 5:52 IST
ಪುನರ್ವಸತಿ ಹೊಣೆ ಕಾಗೋಡು ಹೆಗಲಿಗೆ
ಪುನರ್ವಸತಿ ಹೊಣೆ ಕಾಗೋಡು ಹೆಗಲಿಗೆ   

ಬೆಂಗಳೂರು:  ಕೊಡಗು ಜಿಲ್ಲೆ ದಿಡ್ಡಳ್ಳಿಯ ನಿರಾಶ್ರಿತರ ಪುನರ್ವಸತಿ  ಹೊಣೆಯನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ವಹಿಸಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ನಿರಾಶ್ರಿತರ ಹೋರಾಟ ಸಮಿತಿ ಪರವಾಗಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ, ಹಿರಿಯ ವಕೀಲ ಎ.ಕೆ. ಸುಬ್ಬಯ್ಯ, ಹೋರಾಟಗಾರರಾದ ಸಿರಿಮನೆ ನಾಗರಾಜ್‌, ನೂರ್ ಶ್ರೀಧರ್‌, ನಟ ಚೇತನ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯ ಬಳಿಕ ಮಾತನಾಡಿದ  ಕಾಗೋಡು ತಿಮ್ಮಪ್ಪ, ‘ಕಾಫಿ ತೋಟದಲ್ಲಿ ವಾಸ ಮಾಡುತ್ತಿದ್ದ 577 ಕುಟುಂಬಗಳನ್ನು ಹಿಂದೆ ಮುಂದೆ ನೋಡದೆ ಒಕ್ಕಲೆಬ್ಬಿಸಲಾಗಿತ್ತು. ಇದೇ 17 ಮತ್ತು 18ರಂದು ಕೊಡಗಿಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ನಿರಾಶ್ರಿತ ಕುಟುಂಬಗಳ ಜತೆ ಚರ್ಚೆ ನಡೆಸಲಿದ್ದೇನೆ’ ಎಂದರು.

ADVERTISEMENT

‘ನಿರಾಶ್ರಿತರು ವಾಸಿಸುತ್ತಿದ್ದ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಂದಾಯ ಇಲಾಖೆಯದ್ದು ಎಂದು ನಿರಾಶ್ರಿತರು ಪ್ರತಿಪಾದಿಸುತ್ತಿದ್ದಾರೆ. ಕಂದಾಯ ಇಲಾಖೆಗೆ ಸೇರಿದ್ದಾದರೆ 15 ದಿನದೊಳಗೆ ಹಕ್ಕು ಪತ್ರ ನೀಡಿ, ಮನೆ ಕಟ್ಟಿಸಿಕೊಡಲಾಗುವುದು’ ಎಂದು ಅವರು ಭರವಸೆ ನೀಡಿದರು.

‘ದಾಖಲೆಗಳ ಪ್ರಕಾರ ಈ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ದೃಢಪಟ್ಟರೆ ಅಲ್ಲಿಯೇ ಪುನರ್ವಸತಿ ಕಲ್ಪಿಸಲು ಆಗುವುದಿಲ್ಲ. ಭೂಮಿ ಕುರಿತು ಅರಣ್ಯ ಮತ್ತು ಕಂದಾಯ ಇಲಾಖೆಯ ಮಧ್ಯೆ ವ್ಯಾಜ್ಯ ಮುಂದುವರಿದರೆ ನಿರಾಶ್ರಿತರು ಪರದೇಶಿಗಳಾಗುತ್ತಾರೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸದೆ ಇದ್ದರೆ ಸರ್ಕಾರ ನಡೆಸಲು ಯೋಗ್ಯತೆಯೇ ಇರುವುದಿಲ್ಲ’ ಎಂದರು.

3 ಎಕರೆ ಭೂಮಿ ಭರವಸೆ:  ನಿರಾಶ್ರಿತರನ್ನು ಒಕ್ಕಲೆಬ್ಬಿಸಿದ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ದೃಢಪಟ್ಟರೆ ಬೇರೆ ಕಡೆಯಲ್ಲಿರುವ ಕಂದಾಯ ಇಲಾಖೆ ಭೂಮಿಯಲ್ಲಿ ಪ್ರತಿ ಕುಟುಂಬಕ್ಕೆ ಮೂರು ಎಕರೆ ಭೂಮಿ ನೀಡುವ ಜತೆಗೆ ಮನೆ ನಿರ್ಮಿಸಿಕೊಡಲಾಗುವುದು ಎಂದು ಸಿದ್ದರಾಮಯ್ಯ ಸಭೆಯಲ್ಲಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಜೀತ ಪದ್ಧತಿ ಜೀವಂತ: ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ಪ್ಲಾಂಟೇಶನ್‌ಗಳಲ್ಲಿ  ಜೀತ ಪದ್ಧತಿ ಇನ್ನೂ ಇದೆ ಎಂಬ ಸಂಗತಿ ಗಮನಕ್ಕೆ ಬಂದಿದೆ. ಜೀತ ಪದ್ಧತಿ ನಿಷೇಧಿಸಿ ಕಾನೂನು ಜಾರಿಯಾಗಿ ಇಷ್ಟು ವರ್ಷ ಕಳೆದರೂ ಈ ಪದ್ಧತಿ ಮುಂದುವರಿದಿರುವುದು ನಾಚಿಕೆಗೇಡು’ ಎಂದೂ ಕಾಗೋಡು ಹೇಳಿದರು.

‘ಪ್ಲಾಂಟೇಶನ್‌ಗಳಲ್ಲಿ ಕೃಷಿ ಕಾರ್ಮಿಕರಾಗಿರುವ ಜೇನು ಕುರುಬರು, ಕಾಡು ಕುರುಬರು, ಬೆಟ್ಟ ಕುರುಬರು, ಮಲೆಕುಡಿಯ ಸಮುದಾಯದವರ  ಆಧಾರ್‌ ಸಂಖ್ಯೆ, ಬಡತನ ರೇಖೆಗಿಂತ ಕೆಳಗಿರುವವರ (ಬಿಪಿಎಲ್‌) ಪಡಿತರ ಚೀಟಿ, ಮತದಾರರ ಗುರುತಿನ ಚೀಟಿಯನ್ನು ಮಾಲೀಕರೇ ಇಟ್ಟುಕೊಂಡು, ಜೀತದಾಳಾಗಿ ದುಡಿಸಿಕೊಳ್ಳುತ್ತಿದ್ದಾರೆ. ಯಾವ ತೋಟದಲ್ಲಿ ಎಷ್ಟು ಸಂಖ್ಯೆಯಲ್ಲಿ ಜೀತದಾಳು ಇದ್ದಾರೆ ಎಂಬ ಸಮೀಕ್ಷೆ ನಡೆಸಲು ರೆವಿನ್ಯೂ ಇನ್‌ಸ್ಪೆಕ್ಟರ್‌ ಹಾಗೂ ಗ್ರಾಮಲೆಕ್ಕಿಗರಿಗೆ ಸೂಚಿಸಲಾಗುವುದು. ಎಲ್ಲ ಜೀತದಾಳುಗಳನ್ನು ಬಿಡುಗಡೆ ಮಾಡಿಸಿ, ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.