ADVERTISEMENT

ಪೊನ್ನಂಪೇಟೆ ತಾಲ್ಲೂಕು ಆಗಲೇ ಬೇಕು

15 ದಿನಕ್ಕೆ ಕಾಲಿಟ್ಟ ಹೋರಾಟ: ವಿವಿಧ ಸಂಘಟನೆಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 10:52 IST
Last Updated 16 ನವೆಂಬರ್ 2017, 10:52 IST
ಪೊನ್ನಂಪೇಟೆ ತಾಲ್ಲೂಕು ಆಗಲೇ ಬೇಕು
ಪೊನ್ನಂಪೇಟೆ ತಾಲ್ಲೂಕು ಆಗಲೇ ಬೇಕು   

ಗೋಣಿಕೊಪ್ಪಲು: ಬೇಕೆ ಬೇಕು ನ್ಯಾಯಬೇಕು, ಪೊನ್ನಂಪೇಟೆ ತಾಲ್ಲೂಕು ಆಗಲೇ ಬೇಕು ಎಂಬ ಘೋಷಣೆಗಳೊಂದಿಗೆ ಬುಧವಾರ ಪೊನ್ನಂಪೇಟೆಯಲ್ಲಿ ವಿವಿಧ ಸಂ–ಸಂಸ್ಥೆಗಳ ಪದಾಧಿಕಾರಿಗಳು ತಾಲ್ಲೂಕು ರಚನೆಗೆ ಒತ್ತಾಯಿಸಿ 15ನೇ ದಿನವೂ ಧರಣಿ ನಡೆಸಿದರು.

ಸ್ತ್ರೀಶಕ್ತಿ ಸಂಘ, ವಿವಿಧ ಜನಪ್ರತಿನಿಧಿಗಳು, ಕೊಡವ ಸಮಾಜದ ಪದಾಧಿಕಾರಿಗಳು, ನಾಗರಿಕೆ ವೇದಿಕೆ ಸದಸ್ಯರು ಸೇರಿ ಪೊನ್ನಂಪೇಟೆಯನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡೀರ ಪೊನ್ನಪ್ಪ ನೇತೃತ್ವದಲ್ಲಿ ಅಲ್ಲಿನ ಗಾಂಧಿ ಪ್ರತಿಮೆ ಬಳಿ ಧರಣಿ ಕುಳಿತಿದ್ದ ಪ್ರತಿಭಟನಾಕಾರರು ನ್ಯಾಯಾಲಯ, ಪದವಿ ಪೂರ್ವ ಕಾಲೇಜು, ಖಜಾನೆ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ತಾಲ್ಲೂಕು ಪಂಚಾಯಿತಿ ಕಚೇರಿ ಮುಂತಾದವುಗಳೆಲ್ಲ ಪೊನ್ನಂಪೇಟೆಯಲ್ಲಿವೆ. ಸರ್ಕಾರ ಇದನ್ನೆಲ್ಲ ಪರಿಗಣಿಸಿ ಕೂಡಲೇ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಧರಣಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಶ್ರೀಧರ್, ಕಾಳಿಮಾಡ ಮೋಟಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ, ಹೋರಾಟ ಸಮಿತಿ ಸದಸ್ಯ ಐನಂಡ ಬೋಪಣ್ಣ, ಕೋದೇಂಗಡ ವಿಠಲ, ಪುಚ್ಚಿಮಾಡ ವಸಂತ, ಚೆಪ್ಪುಡೀರ ಸೋಮಯ್ಯ, ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ.ಪೂಣಚ್ಚ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ಕುಶಾಲಪ್ಪ ಪಾಲ್ಗೊಂಡಿದ್ದರು.

ರೈತ ಸಂಘದಿಂದ ಪ್ರತಿಭಟನೆ: ನೂತನ ತಾಲ್ಲೂಕು ರಚನೆಗೆ ಒತ್ತಾಯಿಸಿ ಜಿಲ್ಲಾ ರೈತ ಸಂಘದಿಂದ ನ. 17ರಂದು ಪೊನ್ನಂಪೇಟೆಯಲ್ಲಿ ಬೃಹತ್ ಪ್ರತಿಭಟನಾ ಚಳವಳಿ ಹಮ್ಮಿಕೊಂಡಿದೆ. ಬೆಳಿಗ್ಗೆ 10.30ಕ್ಕೆ ರಸ್ತೆ ತಡೆ ನಡೆಸಿ ಚಳವಳಿಯನ್ನು ತೀವ್ರಗೊಳಿಸಲಾಗುವುದು ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕಳ್ಳಿಚಂಡ ಧನು ತಿಳಿಸಿದರು.

ಪೊನ್ನಂಪೇಟೆ ಸುತ್ತತಲಿನ ಕುಗ್ರಾಮಗಳಿಗೆ ಈಗಿನ ವಿರಾಜಪೇಟೆ ತಾಲ್ಲೂಕು ಕೇಂದ್ರ ಬಹಳ ದೂರವಾಗಿದೆ. ಪೊನ್ನಂಪೇಟೆ ತಾಲ್ಲೂಕು ಕೇಂದ್ರ ಮಾಡಿದರೆ ಸಾರ್ವಜನಿಕರಿಗೆ ಒಳಿತಾಗುತ್ತದೆ. ಎಲ್ಲ ಕಚೇರಿಗಳು ಈಗಾಗಲೇ ಇರುವುದರಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆ ಆಗಲಾರದು ಎಂದು ಹೇಳಿದರು.

17ರಂದು ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ಗಮನ ಸೆಳೆಯಲಾಗುವುದು. ಬಳಿಕ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು.

ಅಲ್ಲದೆ ರೈತ ಸಂಘದ ಮುಖಂಡ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಮೂಲಕವೂ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದರು.

ಧರಣಿಯಲ್ಲಿ ಬಾಚಮಾಡ ಭವಿ ಕುಮಾರ್, ಚೋನೀರ ಸತ್ಯ, ಅಜ್ಜಮಾಡ ಚಂಗಪ್ಪ, ಬೋಡಂಗಡ ಅಶೋಕ್, ಮಚ್ಚಾಮಾಡ ರಂಜಿ, ಕಾಳಿಮಾಡ ಉದಯ, ಹ್ಯಾರೀಸ್, ಪುಚ್ಚಿಮಾಡ ಸಂತೋಷ್, ತೀತರಮಾಡ ಸುನಿಲ್ ಪುಚ್ಚಿಮಾಡ ಸುನಿಲ್,ಅಜ್ಜಮಾಡ ಮೋಹನ್, ಪ್ರಮೋದ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.