ADVERTISEMENT

ಫಲಪುಷ್ಪ ಪ್ರದರ್ಶನದ ಹೆಸರಲ್ಲಿ ‘ಅವ್ಯವಹಾರ’

ನಡೆಯದ ಪ್ರದರ್ಶನಕ್ಕೆ ಲಕ್ಷಾಂತರ ರೂಪಾಯಿ ಬಿಲ್‌ ಸೃಷ್ಟಿ; ಡಿ.ಸಿಯಿಂದ ಪರಿಶೀಲನೆ ಭರವಸೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 8:49 IST
Last Updated 9 ಮಾರ್ಚ್ 2017, 8:49 IST
ಫಲಪುಷ್ಪ ಪ್ರದರ್ಶನದ ಹೆಸರಲ್ಲಿ ‘ಅವ್ಯವಹಾರ’
ಫಲಪುಷ್ಪ ಪ್ರದರ್ಶನದ ಹೆಸರಲ್ಲಿ ‘ಅವ್ಯವಹಾರ’   
ಮಡಿಕೇರಿ:  ರಾಜಾಸೀಟ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಫಲಪುಷ್ಪವೇ ನಡೆಯದಿದ್ದರೂ, ಅಧಿಕಾರಿಯೊಬ್ಬರು ಫಲಪುಷ್ಪ ಪ್ರದರ್ಶನದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ.
 
ಮಾಹಿತಿ ಹಕ್ಕು ಕಾಯ್ದೆ ಅಡಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿ ಪಡೆದುಕೊಂಡಿರುವ ಮಾಹಿತಿಯಲ್ಲಿ ನಡೆಯದ ಫಲಪುಷ್ಪ ಪ್ರದರ್ಶನಕ್ಕೆ ಬಿಲ್‌ ಪಡೆದಿರುವುದು ಗೊತ್ತಾಗಿದೆ. ಅವ್ಯವಹಾರದ ಹಿನ್ನೆಲೆಯಲ್ಲಿ ಹೊಸದಾಗಿ ಬಂದ ಸಹಾಯಕ ತೋಟಗಾರಿಕೆ ನಿರ್ದೇಶಕಿ ಕೆ.ಪಿ. ದೇವಕ್ಕಿ ಅವರು ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಇವರೂ ಸಹ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಅವ್ಯವಹಾರ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದಾರೆ. 
 
ನಗರದ ರಾಜಾಸೀಟ್ ಉದ್ಯಾನದಲ್ಲಿ 2014–15, 2015–16ನೇ ಸಾಲಿನಲ್ಲಿ ಫಲಪುಷ್ಪ ಪ್ರದರ್ಶನವೇ ನಡೆದಿಲ್ಲ. ಆದರೆ, ಫಲಪುಷ್ಪ ಪ್ರದರ್ಶನ ನಡೆದಿದೆ ಎಂದು ಇಲಾಖೆಯಲ್ಲಿ ದಾಖಲೆಗಳನ್ನು ತಯಾರಿಸಿಕೊಂಡು ₹ 8 ಲಕ್ಷ ರೂಪಾಯಿ ಸ್ವಂತಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪ ಕೇಳಿಬಂದಿದೆ. ಹಿರಿಯ ತೋಟಗಾರಿಕಾ ನಿರ್ದೇಶಕರಾಗಿದ್ದ ಸುಧೀಂದ್ರಕುಮಾರ್‌ ಅವಧಿಯಲ್ಲಿ (ನಂಜನಗೂಡಿಗೆ ವರ್ಗಾವಣೆ ಆಗಿದ್ದಾರೆ) ಈ ಅವ್ಯವಹಾರ ನಡೆದಿದ್ದು, ಅವರಿಗೆ ನೋಟಿಸ್‌ ಜಾರಿ ಮಾಡಿ, ಶಿಸ್ತು ಕ್ರಮಕ್ಕೂ ಶಿಫಾರಸು ಮಾಡಲಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕ ಬಿ.ಆರ್‌.ಗಿರೀಶ್‌ ತಿಳಿಸಿದ್ದಾರೆ.
 
2015ರಲ್ಲಿ ಫಲಪುಷ್ಪ ಪ್ರದರ್ಶನ ನಡೆಯದಿದ್ದರೂ ಹೂವಿನ ಗಿಡಗಳ ಖರೀದಿಗೆ ₹ 99,981, ಬಹುಮಾನ ಹಾಗೂ ಬ್ಯಾಡ್ಜ್ ಖರೀದಿಗೆ ₹ 49,250, ಹಣ್ಣು ಮತ್ತು ತರಕಾರಿ ಖರೀದಿಗೆ ₹ 40,000, ಅಲಂಕಾರಿಕ ಕಲಾ ಕೃತಿ ಹೂ ಜೋಡಣೆಗೆ ₹ 99,650, ಅಲಂಕಾರಿಕ ಹೂವಿನ ಬೀಜ ಖರೀದಿಗೆ ₹ 50,750, ವಿದ್ಯುತ್ ಅಲಂಕಾರದ ವೆಚ್ಚಕ್ಕೆಂದು ₹ 60,000 ಬಿಲ್‌ ತಯಾರಿಸಲಾಗಿದೆ. ನಕಲಿ ಬಿಲ್‌ ತೋರಿಸಿ ಒಟ್ಟು 3,99,631 ಹಣ ಪಡೆಯಲಾಗಿದೆ ಎನ್ನಲಾಗಿದೆ.
 
2016ರಲ್ಲಿ ಫಲಪುಷ್ಪ ಪ್ರದರ್ಶನಕ್ಕೆಂದು ಅಲಂಕಾರಿಕಾ ಹೂವು ಬೀಜಗಳು ಹಾಗೂ ಪ್ಲಾಸ್ಟಿಕ್‌ ಟ್ರೇ ಖರೀದಿಗೆ ₹ 59,955, ಅಲಂಕಾರಿಕಾ ಹೂವು ಗಿಡಗಳ ಖರೀದಿಗೆ ₹ 99,983, ಹೂವಿನ ಕುಂಡಗಳ ಖರೀದಿಗೆ ₹ 39,990, ಕಲಾಕೃತಿ ಮಾದರಿಯ ಹೂವು ಜೋಡಣೆಗೆಂದು ₹ 99,975 ಪಾವತಿಯ ಲೆಕ್ಕ ತೋರಿಸಿ ಒಟ್ಟು ₹ 4,09,434ರಷ್ಟು ಹಣ ಖರ್ಚಾಗಿರುವ ಬಿಲ್ಲು ತೋರಿಸಿ ಕಾನೂನು ಬಾಹಿರವಾಗಿ ಹಣ ಪಡೆದಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. 
 
ನೂತನವಾಗಿ ಜಿಲ್ಲೆಗೆ ವರ್ಗಾವಣೆಗೊಂಡು ಬಂದ ಕೆ.ಪಿ. ದೇವಕ್ಕಿ ಅವರ ಪ್ರಯತ್ನದಿಂದ ಈ ಪ್ರಕರಣ ಬೆಳಕಿಗೆ ಬರಲು ಕಾರಣವಾಗಿದೆ. ಇಲ್ಲದಿದ್ದರೆ ₹ 8 ಲಕ್ಷ ಅವ್ಯವಹಾರ ಪ್ರಕರಣವೇ ಮುಚ್ಚಿ ಹೋಗುತ್ತಿತ್ತು ಎಂಬ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ. 

ಹಿರಿಯ ಅಧಿಕಾರಿಗೆ ಪತ್ರ
ಮಡಿಕೇರಿ:
2013–14 ಹಾಗೂ 2015–16ನೇ ಸಾಲಿನಲ್ಲಿ ಹಿರಿಯ ತೋಟಗಾರಿಕಾ ನಿರ್ದೇಶಕರಾಗಿದ್ದ ಸುಧೀಂದ್ರಕುಮಾರ್ ಇದೀಗ ನಂಜನಗೂಡಿಗೆ ವರ್ಗಾವಣೆಗೊಂಡಿದ್ದಾರೆ. ಇವರ ಅವಧಿಯಲ್ಲಿ ಈ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು  ಕೊಡಗು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಕೆ.ಪಿ. ದೇವಕ್ಕಿ ಹೇಳಿದರು.

ಚೆಕ್‌ಗೆ ತಡೆ
ಮಡಿಕೇರಿ:
ರಾಜಾಸೀಟ್‌ನಲ್ಲಿ 2014–15, 2015–16ನೇ ಸಾಲಿನಲ್ಲಿ ಫಲಪುಷ್ಪ ಪ್ರದರ್ಶನ ನಡೆದಿಲ್ಲ. 2013–14ನೇ ಸಾಲಿನ ಫಲಪುಷ್ಪ ಪ್ರದರ್ಶನ 2015ರಲ್ಲಿ ನಡೆದಿತ್ತು. ಆದರೆ, 2014–15ನೇ ಸಾಲಿಗೆ ಬಿಲ್‌ ಪಾವತಿಯಾಗಿದೆ. 2015–16ನೇ ಸಾಲಿಗೆ ಬಿಲ್‌ ಮಾಡಿರುವುದಕ್ಕೆ ಚೆಕ್‌ ಬಂದಿದ್ದು ಅವ್ಯವಹಾರದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದೆ. ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ ಎಂದು  ಕೊಡಗು ಜಿಲ್ಲಾ ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ ಬಿ.ಆರ್. ಗಿರೀಶ್ ತಿಳಿಸಿದರು.

ಅನುದಾನದ ನೆಪ; ಪ್ರದರ್ಶನವೇ ಸ್ಥಗಿತ
ಮಡಿಕೇರಿ:
ಫಲಪುಷ್ಪ ಪ್ರದರ್ಶನವನ್ನು ನಡೆಸಿ ಎಂದು ಸಂಘಟನೆಗಳು ಆಗ್ರಹಿಸಿದ್ದರೂ ಅನುದಾನದ ಇಲ್ಲ ಎಂಬ ಕಾರಣ ನೀಡಿ ಪ್ರದರ್ಶವನ್ನೇ ಸ್ಥಗಿತಗೊಳಿಸಲಾಗಿತ್ತು. ಮಾಧ್ಯಮಗಳು ಗಮನ ಸೆಳೆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿರಲಿಲ್ಲ. ಆದರೆ, ನಡೆಯದ ಪ್ರದರ್ಶನಕ್ಕೆ ಬಿಲ್‌ ಸೃಷ್ಟಿಸಿ ಅನುದಾನ ಪಡೆಯಲಾಗಿದೆ. ಈ ಸಂಬಂಧ ಸಮಗ್ರ ತನಿಖೆ ಆಗಬೇಕು. ಹಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸಂಘ– ಸಂಸ್ಥೆಗಳು ಆಗ್ರಹಿಸುತ್ತಿವೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.