ADVERTISEMENT

ಬರಿದಾದ ಜೀವನದಿ ಕಾವೇರಿ, ಕದನೂರು ಹೊಳೆ: ಬೇಸಿಗೆಗೂ ಮುನ್ನ ಕಾಡುವ ನೀರಿನ ಸಮಸ್ಯೆ

ವಿರಾಜಪೇಟೆ ತಾಲ್ಲೂಕು

ಹೇಮಂತಕುಮಾರ್ ಎಂ.ಎನ್‌
Published 28 ಫೆಬ್ರುವರಿ 2017, 10:18 IST
Last Updated 28 ಫೆಬ್ರುವರಿ 2017, 10:18 IST
ವಿರಾಜಪೇಟೆ  ಸಮೀಪದ ಕದನೂರು ಹೊಳೆಯಲ್ಲಿ ಕ್ಷೀಣಿಸಿದ ನೀರಿನ  ಹರಿವು
ವಿರಾಜಪೇಟೆ ಸಮೀಪದ ಕದನೂರು ಹೊಳೆಯಲ್ಲಿ ಕ್ಷೀಣಿಸಿದ ನೀರಿನ ಹರಿವು   

ವಿರಾಜಪೇಟೆ: ‘ದೀಪದ ಬುಡದಲ್ಲಿಯೇ ಕತ್ತಲು’ ಎಂಬಂತೆ ಮಲೆನಾಡು ಹಾಗೂ ರಾಜ್ಯದ ಜೀವನದಿ ಕಾವೇರಿ ತವರು ಜಿಲ್ಲೆಯಲ್ಲೆ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಕಾಣಿಸುತ್ತಿದೆ. ಅಂಥ ದಟ್ಟ ಲಕ್ಷಣಗಳು ಬೇಸಿಗೆ ಆರಂಭವಾಗುವ ಮುನ್ನವೇ ಗೋಚರವಾಗುತ್ತಿವೆ.  ಬಿಸಿಲಿನ ಝಳ ಹೆಚ್ಚಿದಂತೆ ಸುತ್ತಲ ಕೆಲ ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಕಾಣಿಸುತ್ತಿದೆ. ಬೇಸಿಗೆಯ ಅವಧಿ ಕಳೆಯುವುದು ಹೇಗೆಂಬ ಚಿಂತೆ ಜನರನ್ನು ಕಾಡುತ್ತಿದೆ.

ತಾಲ್ಲೂಕಿನ ಅಮ್ಮತ್ತಿ, ವಿರಾಜಪೇಟೆ ಹಾಗೂ ಬಾಳೆಲೆ ಹೋಬಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬೇಸಿಗೆಗೂ ಮುನ್ನವೇ ಕಾಡುತ್ತಿದೆ.
ಹೋಬಳಿಯ ಕಾರ್ಮಾಡು, ಬಾಡಗ ಬಾಣಂಗಾಲ, ವಿರಾಜಪೇಟೆ ಹೋಬಳಿಯ ಕಾಕೋಟುಪರಂಬು, ಕದನೂರು, ಬೋಯಿಕೇರಿ ಹಾಗೂ ಬಾಳಲೆ ವ್ಯಾಪ್ತಿಯ ಗಂಧದ ಗುಡಿ ಕಾಲೊನಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.

ಅದರಲ್ಲೂ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಯಿಕೇರಿಯಲ್ಲಿ ಈಗಾಗಲೇ ಕುಡಿಯುವ ನೀರಿನ ತೀವ್ರ ಸಮಸ್ಯೆ ಕಾಣಿಸಿಕೊಂಡು ಜನ ಪರದಾಡುತ್ತಿದ್ದಾರೆ.

ADVERTISEMENT

ಇಲ್ಲಿನ ಜನಸಂಖ್ಯೆ ಸುಮಾರು 700 ಇದ್ದು, ಬಹುತೇಕ ಕೂಲಿ ಕಾರ್ಮಿಕರು. ಪಂಚಾಯಿತಿ ಕಲ್ಪಿಸಿರುವ 6  ಬಾವಿ ಸೇರಿ 12 ಬಾವಿಗಳಿವೆ. ಎಲ್ಲದರಲ್ಲಿ ನೀರು ತಳಕಂಡಿದೆ.

ಕುಡಿಯುವ ನೀರಿಗೆ ಪರದಾಟ ಆರಂಭವಾಗಿದೆ.  ಬಾವಿಗಿಳಿಸಿದ ಕೊಡ ಕಾಲು ಭಾಗವೂ ತುಂಬುವುದಿಲ್ಲ. ಒಂದು ಕೊಡ ತುಂಬಿಸಲು ಕನಿಷ್ಠ         8-10 ಬಾರಿ ಕೊಡ ಬಾವಿಗಿಳಿಸಬೇಕು. ಅಲ್ಪಸ್ವಲ್ಪ ನೀರಿಗಾಗಿ ರಾತ್ರಿಯಿಡಿ ಜನ ಬಾವಿ ಬಳಿ ಪರದಾಡುವುದು ಕಂಡುಬರುತ್ತಿದೆ. ಸುಮಾರು 20 ವರ್ಷದ ಹಿಂದೆ ಕದನೂರು ಹೊಳೆಯಿಂದ ನೀರು ಪೂರೈಸುವ ಯೋಜನೆ ಜಾರಿಗೆ ಬಂದಿದೆ. ಈಚೆಗೆ ನೀರು ಪೂರೈಕೆ ಆಗುತ್ತಿಲ್ಲ ಎನ್ನುವುದು ಗ್ರಾಮಸ್ಥರು ಅಳಲು.

ನೀರಿಗಾಗಿ ಜನರು ಒಂದುವರೆ ಕಿ.ಮೀ. ದೂರದ ಹೊಳೆಗೆ ಹೋಗುವ ಪರಿಸ್ಥಿತಿ ಮೂಡಿದೆ. ಕೆಲವರು   ವಾಹನ ಬಳಸಿ ಹೊಳೆಯಿಂದ ನೀರು ತರುತ್ತಿದ್ದರೆ, ಮತ್ತೆ ಕೆಲವರು ಕುಡಿಯುವ ನೀರನ್ನು ಹಣ ಕೊಟ್ಟು ತರುತ್ತಿದ್ದಾರೆ.

ಈಚೆಗೆ ಜಿಲ್ಲಾ ಪಂಚಾಯಿತಿ  ಕೊಳವೆಬಾವಿಯೊಂದನ್ನು ಕೊರೆಸಿ ಸಣ್ಣ ನೀರಿನ ಟ್ಯಾಂಕ್‌ ಅನ್ನು ನಿರ್ಮಿಸಿದೆ. ಇದು, ಇಲ್ಲಿನ ಜನಸಂಖ್ಯೆ, ಬೇಡಿಕೆಗೆ ಸಾಕಾಗದು.

ಸುಮಾರು 20 ವರ್ಷ ಹಿಂದೆ ಇಲ್ಲಿ ನಿರ್ಮಿಸಿರುವ 50 ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್ ಶಿಥಿಲವಾಗಿದೆ. ಯಾವಾಗ ಕುಸಿಯಲಿದೆಯೋ ಎಂಬ ಆತಂಕ ಜನರದು.

ಸತತ ಬರದಿಂದ ಜನ-ಜಾನುವಾರುಗಳಿಗೆ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ಮನಗಂಡಿರುವ ತಾಲ್ಲೂಕು ಆಡಳಿತ ಕೆಲವೆಡೆ ಕೊಳವೆಬಾವಿ ಕೊರೆಸುವುದು ಸೇರಿ ಅಗತ್ಯ ಕ್ರಮಕೈಗೊಂಡಿದೆ. ಆದಾಗ್ಯೂ ಸಮಸ್ಯೆ ಇನ್ನು ಬಗೆಹರಿದಿಲ್ಲ.

ಇನ್ನು ಸುತ್ತಮುತ್ತಲಿನ ಗ್ರಾಮಗಳ ಬಾವಿಗಳಲ್ಲಿ ನೀರು ಪ್ರತಿವರ್ಷ ಮೇ ತಿಂಗಳಿನಲ್ಲಿದ್ದ ತಳಮಟ್ಟಕ್ಕೆ ಕುಸಿದಿರುವುದು ಆತಂಕ ಹೆಚ್ಚಾಗಿದೆ.
ವಿರಾಜಪೇಟೆ ಪಟ್ಟಣಕ್ಕೆ ನೀರು ಪೂರೈಕೆ ಆಗುವ ಸಮೀಪದ ಭೇತ್ರಿಯ ಕಾವೇರಿ ನದಿಯ ಮೂಲದಲ್ಲಿ ನೀರಿನ ಹರಿವು ಬೇಸಿಗೆ ಆರಂಭಕ್ಕೆ ಮುನ್ನವೇ ಕ್ಷೀಣಿಸಿದೆ.

ಹಿಂದೆ  ಸಂಪೂರ್ಣ ವಿರಾಜಪೇಟೆ ಪಟ್ಟಣಕ್ಕೆ ನೀರನ್ನು ಪೂರೈಸುತ್ತಿದ್ದ ಕದನೂರು ಹೊಳೆ ಮಳೆ ಅಭಾವದಿಂದ ಹೆಚ್ಚುಕಡಿಮೆ ಬತ್ತಿದೆ. ಕೊಳಚೆ ನೀರು ಹರಿಯುವಂತೆ ಕಾಣುತ್ತಿದೆ.

ಈ ಎಲ್ಲದರ ನಡುವೆ ಪಟ್ಟಣ ಪಂಚಾಯಿತಿ ಕುಡಿಯುವ ನೀರಿನ ಸಮಸ್ಯೆ ತಲೆದೊರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಸಮಸ್ಯೆಗಳಿದ್ದ ನೆಹರುನಗರ ಸೇರಿದಂತೆ ಕೆಲವೆಡೆ ಕೊಳವೆಬಾವಿ ಕೊರೆಯಿಸಲಾಗಿದೆ.

ಪಟ್ಟಣದ ವ್ಯಾಪ್ತಿಯ ಕೆಲವೆಡೆ ಸಣ್ಣಪುಟ್ಟ ಸಮಸ್ಯೆಗಳಿವೆ. ಇದನ್ನು ಹೊರತುಪಡಿಸಿ  ಸಮಸ್ಯೆ ಹೆಚ್ಚು ಬಾಧಿಸುವುದಿಲ್ಲ ಎಂಬ ವಿಶ್ವಾಸ ಇಲ್ಲಿನ ಪಟ್ಟಣ ಪಂಚಾಯಿತಿ ಅಧಿಕಾರಿಗಳದು.

ಕಾಫಿ ಫಸಲಿನ ಮೇಲೆ ಪರಿಣಾಮ
ಕೆಲ ದಿನಗಳ ಹಿಂದೆ ಕಾಫಿ ಕೊಯ್ಲು ಮುನ್ನವೆ ಒಂದು ಬಾರಿ ಸುರಿದ ಅಕಾಲಿಕ ಮಳೆಯಿಂದ ಕಾಫಿ ಹೂ ಬಿಟ್ಟರೂ ಬ್ಯಾಕ್ಅಪ್ ಇಲ್ಲದಿರುವುದರಿಂದ ಹೂಗಳೆಲ್ಲ ಒಣಗಿದ್ದವು. ಇದು ಮುಂದಿನ ಸಾಲಿನ ಕಾಫಿ ಫಸಲಿನ ಮೇಲೆ ಪರಿಣಾಮ ಬೀರಬಹುದು ಎನ್ನುವ ಆತಂಕದಲ್ಲಿ ರೈತರಿದ್ದಾರೆ. ಇತ್ತ,  ಕುಡಿಯುವ ನೀರಿನ ಅಭಾವದ ನಡುವೆ ಕೆಲವೆಡೆ ಹರಿಯುವ ನೀರಿಗೆ ಮೋಟಾರ್ ಅಳವಡಿಸಿ ಕೃಷಿಗೆ ಬಳಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ಪರಿಹಾರ ಕ್ರಮಗಳ ಜತೆಗೆ, ಬೇಸಿಗೆಯಲ್ಲಿ ಉತ್ತಮವಾಗಿ ಮಳೆಯೂ ಸುರಿದರೆ ಜನತೆ ಕೊಂಚ ನೆಮ್ಮದಿ ನಿಟ್ಟುಸಿರು ಬಿಡಬಹುದು.

* ಕದನೂರು ಗ್ರಾ.ಪಂ. ₹ 60 ಲಕ್ಷ ಮೊತ್ತದ ಯೋಜನೆ ರೂಪಿಸಿದೆ ಎಂಬ ಮಾಹಿತಿ ಸಿಗುತ್ತದೆ. ಆದರೆ, ಇದು ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಎನ್ನುವುದು ತಿಳಿದಿಲ್ಲ
-ಅಮ್ಮುಣಿಚಂಡ ರಾಜ ನಂಜಪ್ಪ, ಮಾಜಿ ಸದಸ್ಯ, ಕದನೂರು ಗ್ರಾ. ಪಂಚಾಯಿತಿ

* 20ವರ್ಷದ ಹಿಂದೆ ಕದನೂರು ಹೊಳೆಯಿಂದ ನೀರು ಪೂರೈಸುವ ಯೋಜನೆ ಜಾರಿಗೆ
* 50ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್ ಶಿಥಿಲ
ಹೊಳೆಯಿಂದ ನೀರು 
ನೀರಿಗಾಗಿ ಜನರು ಒಂದುವರೆ ಕಿ.ಮೀ. ದೂರದ ಹೊಳೆಗೆ ಹೋಗುವ ಪರಿಸ್ಥಿತಿ ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.