ADVERTISEMENT

‘ಬಾಣೆ: ಸ್ವಾಭಿಮಾನ ಕೆಣಕುವ ಕೆಲಸ’

ಲೆಕ್ಕ ಪರಿಶೋಧನಾ ವರದಿ ವಿರುದ್ಧ ಜನಾಂದೋಲನ: ಕೆ.ಜಿ. ಬೋಪಯ್ಯ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 12:55 IST
Last Updated 15 ಜೂನ್ 2018, 12:55 IST

ಮಡಿಕೇರಿ: ‘ಜಮ್ಮಾ ಬಾಣೆಗೆ ಕಂದಾಯ ನಿಗದಿ ಮಾಡಬೇಕೆಂದು ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದಿದ್ದರೂ, ಕಂದಾಯ ನಿಗದಿಪಡಿಸುವ ಕೆಲಸ ಆಗಿಲ್ಲ. ಕಂದಾಯ ಇಲಾಖೆಯ ಬಗ್ಗೆ ಲೆಕ್ಕ ಪರಿಶೋಧನೆ ವರದಿಯಲ್ಲಿ ಉಲ್ಲೇಖವಾಗಿರುವ ಅಂಶಗಳು ನಮ್ಮ ಸ್ವಾಭಿಮಾನ ಕೆಣಕುವ ಕ್ರಮವಾಗಿದೆ. ಅದರ ವಿರುದ್ಧ ಜನಾಂದೋಲನಾ ರೂಪಿಸಲಾಗುವುದು’ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಜಮ್ಮಾ ಬಾಣೆ ಹಾಗೂ ಒಣ ಭೂಮಿ ಅರಣ್ಯ ಎನ್ನುವುದಕ್ಕೆ ಯಾವ ಸಾಕ್ಷ್ಯವಿದೆ? ಒಣ ಭೂಮಿಯೂ ನಿಮ್ಮದಲ್ಲ ಎನ್ನುತ್ತಾರೆ. ಹಾಗಿದ್ದರೆ ಕೊಡಗಿನ ಜನರು ಎಲ್ಲಿಗೆ ತೆರಳಬೇಕು? ನಮ್ಮ ಭಾವನೆ ಕೆರಳಿಸಲಾಗುತ್ತಿದೆ. ಬಿಜೆಪಿ ಆಡಳಿತದಲ್ಲಿ ಮಾಡಲಾಗಿದ್ದ ತಿದ್ದುಪಡಿಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದರೆ ಯಾವುದೇ ಸಮಸ್ಯೆ ಉಂಟಾಗುತ್ತಿರಲಿಲ್ಲ. ಲೆಕ್ಕ ಪರಿಶೋಧನೆ ವರದಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಜನಾಂದೋಲನ ರೂಪಿಸಲಾಗುವುದು’ ಎಂದು ಎಚ್ಚರಿಸಿದರು.

‘ಕಂದಾಯ ನಿಗದಿ ಮಾಡಿರುವುದು, ಭೂಪರಿವರ್ತನೆಗೆ ಅವಕಾಶ ನೀಡಿರುವುದು, ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದು ಸರಿಯಲ್ಲವೆಂದು ಜಿಲ್ಲಾ ಕಂದಾಯ ಇಲಾಖೆ ಕುರಿತು ಲೆಕ್ಕ ತಪಾಸಣೆ ಮಾಡಿರುವ ತಂಡ ವರದಿ ಸಲ್ಲಿಸಿದೆ ಎಂದು ಗೊತ್ತಾಗಿದೆ. ವರದಿಯನ್ನು ತರಿಸಿಕೊಂಡು ಪರಿಶೀಲಿಸಿದ್ದೇನೆ. ತಿದ್ದುಪಡಿ ವರದಿಯನ್ನೇ ಓದದೇ ವರದಿ ನೀಡಲಾಗಿದೆ. ಸುತ್ತೊಲೆಗೆ ತಕ್ಕ ಉತ್ತರ ನೀಡುತ್ತೇವೆ’ ಎಂದು ಎಚ್ಚರಿಸಿದರು.

ADVERTISEMENT

‘ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ನಮ್ಮ ಸರ್ಕಾರದ ಅವಧಿಯಲ್ಲಿ ರಸ್ತೆ ದುರಸ್ತಿಗೆ ಪ್ಯಾಕೇಜ್‌ ನೀಡಲಾಗುತ್ತಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮೂರು ಬಾರಿ ಮಾತ್ರ ರಸ್ತೆಗೆ ಅನುದಾನ ನೀಡಲಾಗಿತ್ತು. ಬಳಿಕ ಅನುದಾನವನ್ನೇ ನೀಡಲಿಲ್ಲ. ನಂಜುಂಡಪ್ಪ ಆಯೋಗದ ವರದಿ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಮಳೆಗೆ ರಸ್ತೆಗಳು ಹಾಳಾಗುತ್ತವೆ. ಹೀಗಾಗಿ, ಪ್ರತಿವರ್ಷ ಅನುದಾನ ನೀಡಬೇಕು. ಆದರೆ, ನಿರ್ಲಕ್ಷ್ಯ ಮಾಡಲಾಗುತ್ತಿದೆ’ ಬೋಪಯ್ಯ ದೂರಿದರು.

‘ಜೀವನದಿ ಕಾವೇರಿ ಜಿಲ್ಲೆಯಲ್ಲಿ ಹುಟ್ಟಿದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಹಿಂದಿನ ಸರ್ಕಾರ ಅನುದಾನವನ್ನೇ ನೀಡಲಿಲ್ಲ. ಹೀಗಾಗಿ, ನನೆಗುದಿಗೆ ಬಿದ್ದಿತು’ ಎಂದು ದೂರಿದರು.

‘ಕೊಡಗಿನ ಸಂಸ್ಕೃತಿ, ಆಚಾರ– ವಿಚಾರಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುವುದು. ಕಾಡಾನೆ ಹಾಗೂ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಮಾಡುತ್ತೇವೆಂದು ಚುನಾವಣೆಗೆ ಮುನ್ನ ನಮ್ಮ ಜಿಲ್ಲಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದೆವು. ಕೆಲವು ತಪ್ಪುಗಳಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ. ಆದರೂ, ರೈಲು ಹಳಿ ಅಳವಡಿಸುವ ಮೂಲಕ ಆನೆ ಹಾವಳಿ ನಿಯಂತ್ರಣಕ್ಕೆ ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಮಾವು– ಹಲಸು ಬೆಳೆಸಿ’: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಮಾತನಾಡಿ, ‘ಅರಣ್ಯದಲ್ಲಿರುವ ಬೀಟೆ ಮರಗಳನ್ನು ಹಂತಹಂತವಾಗಿ ತೆಗೆಸಿ ಮಾವು, ಹಲಸು ಹಾಗೂ ಬಿದಿರು ಬೆಳೆಸಬೇಕು. ಆ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ’ ಎಂದು ಹೇಳಿದರು.
ಪ್ರೆಸ್‌ಕ್ಲಬ್‌ ಅಧ್ಯಕ್ಷ ಅಜ್ಜಮಾಡ ರಮೇಶ್‌ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣಿ ಹಾಜರಿದ್ದರು.

ರೈಲು ಮಾರ್ಗಕ್ಕೆ ವಿರೋಧ

‘ಕೊಡಗಿನ ಮೂಲಕ ಕೇರಳಕ್ಕೆ ಹಾದು ಹೋಗುವ ರೈಲು ಮಾರ್ಗಕ್ಕೆ ನಮ್ಮ ವಿರೋಧವಿದ್ದು ಯಾವುದೇ ಕಾರಣಕ್ಕೂ ಈ ಉದ್ದೇಶಿತ ಯೋಜನೆಗೆ ಅವಕಾಶ ನೀಡುವುದಿಲ್ಲ’ ಎಂದು ಕೆ.ಜಿ. ಬೋಪಯ್ಯ ಹೇಳಿದರು.

‘ಮೈಸೂರಿನಿಂದ ಕುಶಾಲನಗರ ತನಕ ಮಾತ್ರ ರೈಲು ಯೋಜನೆಗೆ ನಮ್ಮ ಒಪ್ಪಿಗೆಯಿದೆ. ಅದನ್ನು ಹೊರತುಪಡಿಸಿ, ಜಿಲ್ಲೆಯ ಯಾವ ಮಾರ್ಗಕ್ಕೂ ಅವಕಾಶ ನೀಡುವುದಿಲ್ಲ’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.