ADVERTISEMENT

ಬಿಜೆಪಿ ಕಾರ್ಯಕರ್ತನ ಮೇಲೆ ಕತ್ತಿಯಿಂದ ಹಲ್ಲೆ

ಸೋಮವಾರಪೇಟೆಯಲ್ಲಿ ಮತ್ತೊಂದು ಹಲ್ಲೆ ಪ್ರಕರಣ; ಗಾಯಾಳು ಆಸ್ಪತ್ರೆಗೆ ದಾಖಲು, ಪಟ್ಟಣದಲ್ಲಿ ಮತ್ತೆ ಗೊಂದಲ

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 6:51 IST
Last Updated 25 ಜೂನ್ 2016, 6:51 IST

ಸೋಮವಾರಪೇಟೆ: ಬಿಜೆಪಿ ಕಾರ್ಯಕರ್ತನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಸಮೀಪದ ಮಸಗೋಡು ಗ್ರಾಮದ ಜಂಕ್ಷನ್‌ನಲ್ಲಿ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.

ಸಮೀಪದ ಮಸಗೋಡು ಗ್ರಾಮದ ನಿವಾಸಿ ಕೊಮಾರಿ ಸತೀಶ್ ಎಂಬವವರು ಗುರುವಾರ ರಾತ್ರಿ 11 ಗಂಟೆಗೆ ಕಾರಿನಲ್ಲಿ ಪಟ್ಟಣದಿಂದ ಮನೆಗೆ ತೆರಳುವ ಮಾರ್ಗಮಧ್ಯೆ ಘಟನೆ ನಡೆದಿದ್ದು, ಬೈಕಿನಲ್ಲಿ ಬಂದ ಯುವಕ ತನ್ನ ಬಳಿಯಿದ್ದ ಕತ್ತಿಯಿಂದ ಸತೀಶ್ ಅವರ ಕುತ್ತಿಗೆ ಭಾಗಕ್ಕೆ ಹೊಡೆದಿದ್ದಾನೆ.

ಕಾರನ್ನು ಮುಂದೆ ಚಲಿಸಿದ ಕಾರಣ ಸತೀಶ್‌ ಸಾವಿನಿಂದ ಪಾರಾಗಿದ್ದಾರೆ. ಅವರ ಭುಜದ ಭಾಗಕ್ಕೆ ಗಾಯವಾಗಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಮಸಗೋಡು ಗ್ರಾಮಕ್ಕೆ ತಿರುವು ತೆಗೆದುಕೊಳ್ಳುವ ಜಂಕ್ಷನ್‌ನಲ್ಲಿ ತಣ್ಣೀರುಹಳ್ಳದ ಕಡೆಯಿಂದ ಬೈಕಿನಲ್ಲಿ ಬಂದ ಯುವಕರು ‘ಮಡಿಕೇರಿಗೆ ರಸ್ತೆ ಯಾವುದು?’ ಎಂದು ಕೇಳಿದ್ದಾರೆ.

ಉತ್ತರಿಸುವ ಸಂದರ್ಭ ಹಿಂಬದಿಯಿಂದ ಬಂದ ಯುವಕ ಸತೀಶ್ ಮೇಲೆ ಏಕಾಏಕಿ ಕತ್ತಿಯಿಂದ ಹಲ್ಲೆ ನಡೆಸಿದ. ಕಾರನ್ನು ಮುಂದೆ ಚಲಾಯಿಸುತ್ತಿದ್ದಂತೆ ಯುವಕರು ಎರಡು ಬೈಕುಗಳಲ್ಲಿ ಸ್ಥಳದಿಂದ ಪರಾರಿಯಾದರು. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪರಿಚಿತರಿಂದ ಹಲ್ಲೆ ಪ್ರಕರಣ ದಾಖಲಾಗಿದೆ.

‘ಅಮಾಯಕರ ಬಂಧನ ಸಲ್ಲದು’
ಮಡಿಕೇರಿ: 
‘ಸೋಮವಾರಪೇಟೆಯಲ್ಲಿ ಈಚೆಗೆ ನಡೆದ ಹಲ್ಲೆ ಘಟನೆಯಲ್ಲಿ ಅಮಾಯಕ ಯುವಕರನ್ನು ಬಂಧಿಸದೇ ತಪ್ಪಿತಸ್ಥರನ್ನು ಬಂಧಿಸಬೇಕು’ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್‌ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೆಲವರು ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಮೂಲಕ ಅಶಾಂತಿ ವಾತಾವರಣ ಸೃಷ್ಟಿಸುತ್ತಿದ್ದಾರೆ. ಮೋಹನ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಅಲ್ಪಸಂಖ್ಯಾತರ ಘಟಕ ಖಂಡಿಸುತ್ತದೆ.

ಆದರೆ, ಅಮಾಯಕರನ್ನು ಬಂಧಿ ಸುತ್ತಿರುವ ಪೊಲೀಸರ ಕ್ರಮ ಸರಿಯಲ್ಲ. ಬಷೀರ್ ಎಂಬಾತ ಘಟನೆ ನಡೆದಾಗ ಪ್ರಾರ್ಥನಾ ಮಂದಿರದಲ್ಲಿದ್ದರು. ಆದರೆ, ಇವರನ್ನು ಕೂಡ ಬಂಧಿಸಲಾಗಿರುವುದು ದುರಂತ’ ಎಂದು ಹೇಳಿದರು.

‘ಕೆಲವು ಸಂಘಟನೆಗಳ ಕಾರ್ಯಕರ್ತರು ಅಲ್ಪಸಂಖ್ಯಾತರ ಅಂಗಡಿಗಳ ಮೇಲೆ ದಾಳಿ ನಡೆಸಿ ಮಾಲೀಕರ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಪ್ರತಿಭಟನೆ ನಡೆಸುವ ಹಕ್ಕಿದೆ. ಅಮಾಯಕರ ಮೇಲೆ ಹಲ್ಲೆ ನಡೆಸುವುದು ಸರಿಯಾದ ಕ್ರಮವಲ್ಲ. ಹಲ್ಲೆಯಲ್ಲಿ ಗಾಯಗೊಂಡವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಸೋಮವಾರಪೇಟೆಯಲ್ಲಿ ಅಲ್ಪಸಂಖ್ಯಾತರು ಭಯಭೀತರಾಗಿದ್ದು, ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವವರನ್ನು ಪೊಲೀಸರು ತಕ್ಷಣ ಬಂಧಿಸಬೇಕೆಂದು’ ಯಾಕೂಬ್ ಒತ್ತಾಯಿಸಿದರು.

‘ಬಿಜೆಪಿ, ಆರ್‌ಎಸ್‌ಎಸ್‌ ಮುಖಂಡರೂ ನಮ್ಮ ಸ್ನೇಹಿತರು; ಚುನಾವಣೆ ಬಂದಾಗ ಮಾತ್ರ ರಾಜಕಾರಣ ಮಾಡೋಣ. ಇದೀಗ ಸೌಹಾರ್ದಕ್ಕೆ ಧಕ್ಕೆ ತರುವ ಘಟನೆಗಳು ನಡೆಯುವುದು ಬೇಡ. ಬೆರಳೆಣಿಕೆಯ ಮಂದಿ ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ’ ಎಂದು ಎಚ್ಚರಿಸಿದರು.
ಎಂ.ಎ.ಉಸ್ಮಾನ್, ಮುನೀರ್, ಖಾಲೀದ್ ಹಾಜರಿದ್ದರು.

ಕಠಿಣ ಕಾನೂನು ಕ್ರಮಕ್ಕೆ ಆಗ್ರಹ
ನಾಪೋಕ್ಲು:
ಶಾಂತಿಯ ಕೇಂದ್ರವಾದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ಕಿಡಿಗೇಡಿಗಳು ಶಾಂತಿ ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಇಂಥವರ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ. ಮನ್ಸೂರ್ ಅಲಿ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಶಾಂತಿಯ ಸಂಕೇತವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ಪರಿಣಾಮವಾಗಿ ಜಿಲ್ಲೆಗೆ ಕೆಟ್ಟ ಹೆಸರು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಸಮಾಜವನ್ನು ರಕ್ಷಿಸಲು ಸರ್ಕಾರ ಪೊಲೀಸರನ್ನು ನಿಯೋಜನೆಗೊಳಿಸಿದೆ. ಆದರೆ,  ಪೊಲೀಸರ ಮೇಲೆಯೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದೌರ್ಜನ್ಯ ನಡೆಸುತ್ತಿದ್ದು ಕಾನೂನನ್ನು ರಕ್ಷಿಸುವ ಪೊಲೀಸರಿಗೆ ಭದ್ರತೆಯಿಲ್ಲ ಎಂಬ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಂ.ರಶೀದ್, ಇಬ್ರಾಹಿಂ ಎಂ.ಎಸ್, ಅಬೂಬಕ್ಕರ್ ಎಂ.ಎಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.