ADVERTISEMENT

ಬೆಳೆ ವಿಮೆ: ಸಮರ್ಪಕ ಅನುಷ್ಠಾನಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 8:48 IST
Last Updated 22 ಜೂನ್ 2017, 8:48 IST

ಮಡಿಕೇರಿ: ಪ್ರಧಾನಮಂತ್ರಿ ಫಸಲ್ ಬಿಮಾ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ರೈತರು ಹೆಸರು ನೋಂದಾಯಿಸುವಂತಾಗಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಅನುಷ್ಠಾನ ಗೊಳಿಸುವ ಕುರಿತು ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಮುಂಗಾರು ಹಂಗಾಮಿಗೆ ಹವಾಮಾನ ಆಧಾರಿತ ಬೆಳೆ (ಕಾಳುಮೆಣಸು ಮತ್ತು ಅಡಿಕೆ) ವಿಮೆಗೆ ಹೆಸರು ನೋಂದಾಯಿಸಲು ಜೂನ್ 30 ಕಡೆ ದಿನ.

ಹಾಗೆಯೇ ಪ್ರಧಾನಮಂತ್ರಿ ಫಸಲ್ ಬಿಮಾ (ಭತ್ತ, ಮುಸುಕಿನ ಜೋಳ) ಯೋಜನೆಯಡಿ ಹೆಸರು ನೋಂದಾಯಿಸಲು ಜುಲೈ 15 ಕೊನೆಯ ದಿನ. ಆದ್ದರಿಂದ ರೈತರಿಗೆ ಮಾಹಿತಿ ನೀಡಿ ಈ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯ ಸಹಕಾರ ನೀಡುವಂತೆ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.

ADVERTISEMENT

ನಬಾರ್ಡ್ ಜಿಲ್ಲಾ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ.ನಾಣಯ್ಯ ಮಾತನಾಡಿ, ‘ಕಳೆದ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಾಯಿತ ಸುಮಾರು 3,900 ರೈತರಲ್ಲಿ 1,070 ರೈತರು ಬೆಳೆ ನಷ್ಟದ ವಿಮಾ ಪರಿಹಾರಕ್ಕಾಗಿ ಆಯ್ಕೆಯಾಗಿದ್ದಾರೆ’ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ಆರ್.ಗಿರೀಶ್ ಮಾತನಾಡಿ, ‘ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಮಂಜೂರಾತಿ ನೀಡಿದೆ.

ಈ ಯೋಜನೆಯನ್ನು ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಅಡಿಕೆ (ಭಾಗಮಂಡಲ, ಸಂಪಾಜೆ, ಅಮ್ಮತ್ತಿ, ಪೊನ್ನಂಪೇಟೆ ಮತ್ತು ಶ್ರೀಮಂಗಲ) ಮತ್ತು ಕಾಳುಮೆಣಸು (ಜಿಲ್ಲೆಯ 16 ಹೋಬಳಿ ವ್ಯಾಪ್ತಿಯಲ್ಲಿ) ಬೆಳೆಗಳಿಗೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.