ADVERTISEMENT

ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಪರಿಹಾರ: ಶಾಸಕ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 6:28 IST
Last Updated 21 ಸೆಪ್ಟೆಂಬರ್ 2017, 6:28 IST
ವಿರಾಜಪೇಟೆ ಪಟ್ಟಣದಲ್ಲಿರುವ ಹುತಾತ್ಮ ಯೋಧರ ಸ್ಮಾರಕಕ್ಕೆ ಬುಧವಾರ ಶಾಸಕ ಕೆ.ಜಿ. ಬೋಪಯ್ಯ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು
ವಿರಾಜಪೇಟೆ ಪಟ್ಟಣದಲ್ಲಿರುವ ಹುತಾತ್ಮ ಯೋಧರ ಸ್ಮಾರಕಕ್ಕೆ ಬುಧವಾರ ಶಾಸಕ ಕೆ.ಜಿ. ಬೋಪಯ್ಯ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು   

ವಿರಾಜಪೇಟೆ: ವಿಶೇಷ ಪ್ರಕರಣವೆಂದು ಪರಿಗಣಿಸಿ ಪಟ್ಟಣದಲ್ಲಿನ ಮಾಜಿ ಸೈನಿಕರ ನೂತನ ಕಟ್ಟಡದಲ್ಲಿನ ಕ್ಯಾಂಟಿನ್‌ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕು. ಈ ಕುರಿತು ಶೀಘ್ರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಪಟ್ಟಣದಲ್ಲಿ ಮಾಜಿ ಸೈನಿಕರ ಸಹಕಾರ ಸಂಘದಿಂದ ನಿರ್ಮಿಸಿರುವ ಮಾಜಿ ಸೈನಿಕರ ಒಕ್ಕೂಟದ ಭವನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ನೂತನ ಕಟ್ಟಡದ ಸಮೀಪದಲ್ಲಿ ಸರ್ಕಾರಿ ಕಟ್ಟಡಗಳಿವೆ ಎಂದು ಅಬಕಾರಿ ಇಲಾಖೆ ಕ್ಯಾಂಟೀನ್‌ನಲ್ಲಿ ಮದ್ಯಮಾರಾಟಕ್ಕೆ ಪರವಾನಗಿ ನೀಡಲು ಹಿಂದೇಟು ಹಾಕುತ್ತಿದೆ.ಆದರೆ ಸೈನಿಕರ ಕ್ಯಾಂಟೀನ್‌ ಗುರುತಿನ ಚೀಟಿ ಹೊಂದಿರುವ ಸೈನಿಕರಿಗೆ ಮಾತ್ರ ನಿಯಮದಂತೆ ಮದ್ಯ ವಿತರಣೆ ಮಾಡುವ ಕೇಂದ್ರವಾಗಿದೆ.

ಈ ಕುರಿತು ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ಕಟ್ಟಡದ 2ನೇ ಹಂತದ ಕಾಮಗಾರಿಗೆ ಆರ್ಥಿಕ ಸಮಸ್ಯೆಯಿದ್ದು ಈ ಕುರಿತು ಸಮಯನುಸಾರ ಸ್ವಂದಿಸುವುದಾಗಿ ಅವರು ತಿಳಿಸಿದರು.

ADVERTISEMENT

ಈ ಸಂದರ್ಭ ಸಂಘದ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ, ಮಡಿಕೇರಿ ಇಸಿಎಚ್ ಪಾಲಿಕ್ಲಿನಿಕ್‌ನ ಕರ್ನಲ್ ಡಾ.ನಾಳಿಯಂಡ ಕರುಂಬಯ್ಯ, ಜಿಲ್ಲಾ ಸೈನಿಕ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕಿ ಲೆ.ಕ. ಗೀತಾ ಮಹಾಬಲ ಶೆಟ್ಟಿ, ತಹಶೀಲ್ದಾರ್ ಆರ್‌. ಗೋವಿಂದ ರಾಜು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಮದಲೈ ಮುತ್ತು, ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಸೂಫಿ ಮತ್ತಿತರರು ಉಪಸ್ಥಿತರಿದ್ದರು.

ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಹಳೆ ತಾಲ್ಲೂಕು ಕಚೇರಿಯ ಸಮೀಪದ ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಜಿಲ್ಲಾ ಮೀಸಲು ಪೊಲೀಸ್ ತುಕಡಿ ವತಿಯಿಂದ ಮೂರು ಸುತ್ತು ಕುಶಾಲ ತೋಪುಗಳನ್ನು ಹಾರಿಸಿ ಗೌರವ ರಕ್ಷೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.