ADVERTISEMENT

ಮುಖ್ಯಶಿಕ್ಷಕಿಯಿಂದ ಆತ್ಮಹತ್ಯೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 8:20 IST
Last Updated 14 ಜುಲೈ 2017, 8:20 IST

ಹೆತ್ತೂರು: ಯಸಳೂರು ಹೋಬಳಿಯ ಮಾಗೇರಿ ಕಿರಿಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಹೇಮಾವತಿ, ‘ಹಳ್ಳಿ ಶಾಲೆ ಬೇಡ ಬೇರೆಡೆ ವರ್ಗಾವಣೆ ಮಾಡಿ’ ಎಂದು ಕೂಗಾಡಿ ಸಾರ್ವಜನಿಕರ ಮುಂದೆ ಆತ್ಮಹತ್ಯೆ ಬೆದರಿಕೆ ಒಡ್ಡಿದ ಘಟನೆ ಗುರುವಾರ ಬೆಳಿಗ್ಗೆ ವನಗೂರು ವೃತ್ತದಲ್ಲಿ ನಡೆದಿದೆ.

ಮಾಗೇರಿ ಸರ್ಕಾರಿ ಕಿರಿಯ ಶಾಲೆಯಲ್ಲಿ ಇವರು 4 ತಿಂಗಳುಗಳಿಂದ ಕೆಲಸ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯವರಾದ ಇವರು ತುಮಕೂರು ಜಿಲ್ಲೆಯ ಪಾವಗಡ ಗ್ರಾಮದಿಂದ ಸ್ವಯಂ ಆಸಕ್ತಿಯಿಂದ ವರ್ಗಾವಣೆ ಮಾಡಿಸಿಕೊಂಡಿದ್ದರು.

ಹಾಸನದಿಂದ ಪ್ರತಿದಿನ ಸುಮಾರು 80 ಕಿ.ಮೀ. ಇರುವ ಶಾಲೆಗೆ ಮಧ್ಯಾಹ್ನ 12ಕ್ಕೆ ಬಂದು 3ಕ್ಕೆ ಹಿಂದಿರುಗುತ್ತಾರೆ. ಇದನ್ನು ಪ್ರಶ್ನಿಸಿ ಬುಧವಾರ ಮಧ್ಯಾಹ್ನ ಪೋಷಕರು ತರಾಟೆಗೆ ತೆಗೆದುಕೊಂಡಿದ್ದರು. ನಂತರ ಮನೆಗೆ ಹಿಂದಿರುಗಿದ ಶಿಕ್ಷಕಿ ಗುರುವಾರ ಬೆಳಿಗ್ಗೆ ಬಂದು ವನಗೂರು ವೃತ್ತದಲ್ಲಿ ನಿಂತು, ‘ಆನಂದ ಎಂಬುವವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನನಗೆ ನ್ಯಾಯ ಬೇಕು, ನಡು ರಸ್ತೆಯಲ್ಲಿ ಜನರನ್ನು ಸೇರಿಸಿ ಅವಮಾನ ಮಾಡಿದ್ದಾರೆ. ಇವರ ಮೇಲೆ ಪೊಲೀಸ್‌ ದೂರು ನೀಡುತ್ತೇನೆ’ ಎಂದು ಕೂಗಾಡಿದರು.

ADVERTISEMENT

ಕೂಗಾಟ ಕೇಳಿ ಗ್ರಾಮಸ್ಥರು ಸೇರಿ ವಿಚಾರಿಸಿದಾಗ ‘ನನಗೆ ನ್ಯಾಯ ಸಿಗಲಿಲ್ಲ ಎಂದರೆ, ನಿಮ್ಮ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಸಿದ್ದಾರೆ.
ಗ್ರಾಮಸ್ಥ ವಸಂತ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದರು. ಶಿಕ್ಷಣಾಧಿಕಾರಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಿಕ್ಷಕಿ,‘ನನಗೆ ಸುಮಾರು 200 ಮಂದಿ ಮುತ್ತಿಗೆ ಹಾಕಿ ವಿನಾ ಕಾರಣ ತೊಂದರೆ ಕೊಡುತ್ತಿದ್ದಾರೆ’ ಎಂದು ಕಣ್ಣೀರು ಹಾಕಿದರು.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಾರ್ವಜನಿಕರಿಗೆ ಪ್ರತಿಕ್ರಿಯೆ ನೀಡಿ,‘ಈ ಶಿಕ್ಷಕಿಗೆ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಇಷ್ಟವಿಲ್ಲ. ಈ ರೀತಿ ಗಲಾಟೆ ಮಾಡಿದರೆ ಬೇರೆ ಸ್ಥಳಕ್ಕೆ ವರ್ಗಾವಣೆ ಆಗಬಹುದು ಎಂಬ ದುರಾಲೋಚನೆಯಿಂದ ಹೀಗೆ ಮಾಡಿದ್ದಾರೆ. ಕಚೇರಿಗೆ ಕರೆದು ಬುದ್ಧಿ ಹೇಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.