ADVERTISEMENT

ಮೇನಲ್ಲಿ ಆನೆ ಗಣತಿ ಆರಂಭ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:13 IST
Last Updated 16 ಜನವರಿ 2017, 6:13 IST
ಮೇನಲ್ಲಿ ಆನೆ ಗಣತಿ ಆರಂಭ
ಮೇನಲ್ಲಿ ಆನೆ ಗಣತಿ ಆರಂಭ   

ಹುಣಸೂರು: ರಾಷ್ಟ್ರೀಯ ಉದ್ಯಾನದ ನಾಗರಹೊಳೆಯಲ್ಲಿ ಮೇಯಿಂದ ಆನೆ ಗಣತಿ ಆರಂಭವಾಗಲಿದೆ ಎಂದು ಹುಲಿ ಯೋಜನಾ ನಿರ್ದೇಶಕ ಮಣಿಕಂಠನ್ ತಿಳಿಸಿದ್ದಾರೆ.
ಆನೆ ಗಣತಿ ಕುರಿತು ಈಗಾಗಲೇ ಬನ್ನೇರುಘಟ್ಟದಲ್ಲಿ ರಾಜ್ಯಮಟ್ಟದ ಒಂದು ಸುತ್ತಿನ ಸಭೆ ಮುಗಿದಿದೆ. ನಾಗರಹೊಳೆಯಲ್ಲಿ ಸಹ ಸ್ಥಳೀಯ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ.

ಆನೆ ಗಣತಿ ಕುರಿತಂತೆ ತೆಗೆದುಕೊಳ್ಳಬೇಕಿರುವ ಪ್ರಾಥಮಿಕ ಹಂತದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಎಲ್ಲಾ ವಲಯ ಅಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ನೀರಿನ ಸಮಸ್ಯೆ:  ಬರ ಬೇಸಿಗೆ ಎದುರಾಗಿದ್ದು ರಾಷ್ಟ್ರೀಯ ಉದ್ಯಾನದಲ್ಲಿ ಪ್ರಾಣಿಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ. ಕಾಡಿನ ಮಧ್ಯೆ ಹರಿಯುವ ನಾಗರಹೊಳೆ ಹಾಗೂ ಲಕ್ಷ್ಮಣತೀರ್ಥ ನದಿಯಿಂದ ಅರಣ್ಯದೊಳಗಿನ ಕೆರೆಗಳಿಗೆ ನೀರು ತುಂಬಿಸುವ ಕ್ರಮ ಕೈಕೊಳ್ಳಲಾಗಿದೆ.

ಲಕ್ಷ್ಮಣತೀರ್ಥ ನದಿಯಿಂದ ಅರಣ್ಯದೊಳಗಿನ ಎರಡು ಕೆರೆಗಳಿಗೆ ಈಗಾಗಲೇ ನೀರು ತುಂಬಿಸಲಾಗಿದ್ದು, ಕಾಡು ಪ್ರಾಣಿಗಳಿಗೆ ನೀರಿನ ಕ್ಷಾಮ ತಾಕದಂತೆ ಎಚ್ಚರ ವಹಿಸಲಾಗಿದೆ ಎಂದರು.

ಅಂತರಸಂತೆ ವಲಯದ ಟೈಗರ್‌ ಕೆರೆ, ಜೆ.ಕೆ.ಕೆರೆ, ಹೊಸಕೆರೆ, ಮೇಟಿಕುಪ್ಪೆ ಕೆರೆ, ಜೋಡಿ ಕೆರೆ ಮತ್ತು ಮರಳು ಕಟ್ಟೆ ಕೆರೆ, ಮಂಡಳ್ಳಿಕೆರೆಗಳಿಗೆ ನೀರು ತುಂಬಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಸೋಲಾರ್‌:  ಅರಣ್ಯದೊಳಗೆ 8 ಭಾಗದಲ್ಲಿ ಕೊಳವೆ ಬಾವಿ ಕೊರೆದಿದ್ದು, ಈ  ಬಾವಿಯಿಂದ ಸೋಲಾರ್‌  ವಿದ್ಯುತ್‌  ಬಳಸಿ ನೀರು ಕೆರೆಗೆ ತುಂಬಿಸಲಾಗುತ್ತಿದೆ ಎಂದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ 180 ಕೆರೆ ಸೇರಿದಂತೆ 2 ನದಿ, ಎರಡು ಜಲಾಶಯ ವ್ಯವಸ್ಥೆ ಇದ್ದರೂ ಈ ಸಾಲಿನಲ್ಲಿ ಮಳೆ ಕ್ಷೀಣಿಸಿ ನೀರಿನ ಕ್ಷಾಮ ಎದುರಾಗಿದೆ.
ಇದಕ್ಕೆ ಇಲಾಖೆ ತಾತ್ಕಾಲಿಕ ಪರಿಹಾರ ವ್ಯವಸ್ಥೆ ತೆಗೆದುಕೊಂಡಿದ್ದು, ಕಾಡಂಚಿನ ಗ್ರಾಮಗಳಲ್ಲಿ ಆನೆ ಮಾನವ ಸಂಘರ್ಷ ನಿಯಂತ್ರಿಸುವ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.