ADVERTISEMENT

ಯವಕಪಾಡಿ; ಭಕ್ತರ ಮನಸೆಳೆವ ಕೊಡೆಹಬ್ಬ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 6:06 IST
Last Updated 12 ಏಪ್ರಿಲ್ 2017, 6:06 IST
ಯವಕಪಾಡಿ; ಭಕ್ತರ ಮನಸೆಳೆವ ಕೊಡೆಹಬ್ಬ
ಯವಕಪಾಡಿ; ಭಕ್ತರ ಮನಸೆಳೆವ ಕೊಡೆಹಬ್ಬ   

ನಾಪೋಕ್ಲು: ದೈವಶಕ್ತಿ ಆವಾಹನೆಯಾಗಿ ಕೊಡೆ ವೃತ್ತವಾಗಿ ಸುತ್ತುವಾಗ ಭಕ್ತರಿಗೆ ರೋಮಾಂಚನ. ಮತ್ತೊಂದೆಡೆ ಭಕ್ತರು ಕತ್ತಿಯಿಂದ ಮೈಗೆ ಕಡಿದುಕೊಂಡು ಆವೇಶಭರಿತ ನರ್ತನ.ಇವು ಸಮೀಪದ ಯವಕಪಾಡಿ ಗ್ರಾಮದ ಪನ್ನಂಗಾಲ ತಮ್ಮೆದೇವಿ ಉತ್ಸವದಲ್ಲಿ ಕಂಡುಬರುವ ಚಿತ್ರಣ. ಉತ್ಸವಕ್ಕೆ ಬುಧವಾರ ಚಾಲನೆ ಸಿಗಲಿದೆ.ಎರಡು ವರ್ಷಕ್ಕೊಮ್ಮೆ ನಡೆಯುವ ಈ ಉತ್ಸವದ ವೀಕ್ಷಣೆಗೆ ಸುತ್ತಮುತ್ತಲ ಗ್ರಾಮಗಳ ಜನರು ಸೇರುತ್ತಾರೆ.

ಕೊಡವರ ಮಳೆ ದೇವರೆಂದೇ ಹೆಸರಾದ ಇಗ್ಗುತಪ್ಪ ದೇವರ ಸಹೋದರಿ ಪನ್ನಂಗಾಲ ತಮ್ಮೆದೇವಿಯ ಉತ್ಸವಕ್ಕೆ ಗ್ರಾಮ ಸಜ್ಜಾಗಿದೆ.ಉತ್ಸವದ ಆರಂಭದಲ್ಲಿ ಅಂಜಪರವಂಡ ಐನ್‌ಮನೆಯಿಂದ ದೇವಾಲಯಕ್ಕೆ  ಭಂಡಾರ ಪೆಟ್ಟಿಗೆ ತರಲಾಗುವುದು. ಪನ್ನಂಗಾಲ ತಮ್ಮೆ ದೇವಾಲಯದಲ್ಲಿ ಪೂಜೆ, ಅಭಿಷೇಕ, ಸಾಂಪ್ರದಾಯಿಕ ಆಚರಣೆಗಳು ನೇರವೇರುತ್ತವೆ.

ಶ್ರದ್ಧಾಭಕ್ತಿಯಿಂದ ಓಲೆಯಲ್ಲಿ (ತಾಳೆ ಜಾತಿಗೆ ಸೇರಿದ ಮರದ ಗರಿ) ಎರಡು ಕೊಡೆ ಬಳಸಲಾಗುವುದು. ಈ ಕೊಡೆಯಲ್ಲಿ ಪನ್ನಂಗಾಲ ತಮ್ಮೆ ದೇವಿ ನೆಲೆಸಿದ್ದು ಅಣ್ಣನಾದ ಇಗ್ಗುತ್ತಪ್ಪ ಮನೆಗೆ ತಂಗಿ ಕರೆತರುವ ಆಚರಣೆ ನಡೆಯಲಿದೆ.

ADVERTISEMENT

ಅಣ್ಣನ (ಇಗ್ಗುತ್ತಪ್ಪ) ಬಿಟ್ಟು ಹೋಗಲು ಮನಸ್ಸಿಲ್ಲದ ತಂಗಿ ಮಾರ್ಗ ಮಧ್ಯೆ ಸಿಗುವ ಭತ್ತದ ಗದ್ದೆಯಿಂದ ವಾಪಸಾಗುವ ದೃಶ್ಯ ಭಕ್ತರನ್ನುರೋಮಾಂಚನಗೊಳಿಸುತ್ತದೆ. ಮಧ್ಯಾಹ್ನ ಪಾಡಿ ಇಗ್ಗುತ್ತಪ್ಪ ದೇವಾಲಯ ಸಮೀಪದ ಅಮ್ಮಂಗೇರಿಯಿಂದ ಬಿದಿರಿನ ಹೊಸಕೊಡೆಯನ್ನು ಪನ್ನಂಗಾಲ ತಮ್ಮೆ ದೇಗುಲ ಬಳಿಯ ಗದ್ದೆಗೆ ತರಲಾಗುತ್ತದೆ. ಈ ಸಂದರ್ಭ ಭಕ್ತರು ತಲೆಗೆ ಕತ್ತಿಯಿಂದ ಕಡಿದುಕೊಂಡು ಆವೇಶಭರಿತರಾಗಿ ನರ್ತಿಸುತ್ತಾರೆ.

ಯವಕಪಾಡಿ ಗ್ರಾಮದ ಅಂಜಪರವಂಡ, ಕರ್ತಂಡ, ಐರೀರ, ಅಪ್ಪಾರಂಡ ಕುಟುಂಬಸ್ಥರು, ಪರಿಶಿಷ್ಟವರ್ಗದ ಒಂಬತ್ತು ಕುಡಿಗಳು ಹಾಗೂ ಒಂದು ಕುಡಿಯ ಕುಟುಂಬದವರ ಉಸ್ತುವಾರಿಯಲ್ಲಿ ಕೊಡೆ ಉತ್ಸವ ನಡೆಯುತ್ತದೆ.ಸಂಜೆ ದೇವರ ಜಳಕ ಹಾಗೂ ರಾತ್ರಿ ಕರಿಚೌಂಡಿ ಬಾರಣೆ ಬಳಿಕ ಕುರುಂದ ಆಟ, ವಿವಿಧ ಪೂಜಾಕಾರ್ಯಗಳೊಂದಿಗೆ ಪನ್ನಂಗಾಲ ತಮ್ಮೆ ಉತ್ಸವ ಕೊನೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.