ADVERTISEMENT

ರಾಜ್ಯ ಸರ್ಕಾರದಿಂದ ಸೇಡಿನ ರಾಜಕಾರಣ

ಕೇಂದ್ರ ಸಚಿವ ಡಿವಿಎಸ್ ಆರೋಪ; ಬಿಜೆಪಿ, ಕಾಂಗ್ರೆಸ್‌ನಿಂದ ಕಪ್ಪ ಸಲ್ಲಿಕೆ ಹೊಸದಲ್ಲ –ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 10:04 IST
Last Updated 28 ಫೆಬ್ರುವರಿ 2017, 10:04 IST

ಸೋಮವಾರಪೇಟೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಸೇಡಿನ ರಾಜಕಾರಣ ಮಾಡುತ್ತಿದೆ’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಆರೋಪಿಸಿದರು.

ಸಮೀಪದ ಗೌಡಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ಗೆ ಕಪ್ಪ ನೀಡಿದ್ದ ಡೈರಿ ಬಿಡುಗಡೆ ನಂತರ ಮುಖ್ಯಮಂತ್ರಿ ಸತ್ಯ ಮರೆಮಾಚಲು ಸೇಡಿನ ರಾಜಕೀಯಕ್ಕೆ ಇಳಿದಿದ್ದಾರೆ’ ಎಂದರು.

ಬಿಜೆಪಿ ಮುಖಂಡರ ಮೇಲಿದ್ದ ಆರೋಪಗಳಿಗೆ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದೆ. ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ’ ಎಂದರು.

ADVERTISEMENT

ಡೈರಿ ಮಾಹಿತಿ ಬಿಡುಗಡೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸತ್ಯವನ್ನು ಸಹಿಸಲಾಗದೇ ಸೇಡಿನ ರಾಜಕೀಯಕ್ಕೆ ಇಳಿದಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಮುಖಂಡರ ಮೇಲೆ ಇದ್ದ ದೂರುಗಳ ವಿರುದ್ಧ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಏನ್ನನಾದರೂ ಮಾಡಿ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.

ಆದರೆ, ಈ ವಿಷಯದಲ್ಲಿ ಮುಖ್ಯಮಂತ್ರಿಗೆ ಜಯ ಸಿಗುವುದಿಲ್ಲ. ನ್ಯಾಯಾಲಯಕ್ಕೆ ಮತ್ತೊಮ್ಮೆ ಹೋದರೂ ಅವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು.

ಕಪ್ಪ ಸಂದಾಯ ಹೊಸತಲ್ಲ: ಎಚ್‌ಡಿಕೆ: ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ‘ರಾಜ್ಯದ ಸಂಪತ್ತನ್ನು ಕೊಳ್ಳೆಹೊಡೆದು ತಮ್ಮ ಪಕ್ಷಗಳ ನಾಯಕರಿಗೆ ಹಣ ಸಂದಾಯ ಮಾಡಿರುವ ವಿಚಾರ ಹೊಸದಲ್ಲ’ ಎಂದರು.

‘ಹತ್ತು ವರ್ಷಗಳ ಹಿಂದೆಯೇ ನಾನು ಈ ವಿಚಾರವನ್ನು ಬಹಿರಂಗಪಡಿಸಿದ್ದೆ. ಹಿಂದಿನ ಬಿಜೆಪಿ ಸರ್ಕಾರ ಯಾವ ರೀತಿಯಲ್ಲಿ ಹಣ ಸಂಗ್ರಹಿಸಿ ಕೇಂದ್ರದ ನಾಯಕರಿಗೆ ಸಂದಾಯ ಮಾಡಿತ್ತು ಎಂಬುದನ್ನು ಬಯಲಿಗೆ ತಂದಿದ್ದೆ’ ಎಂದು ಹೇಳಿದರು.

ರಾಜ್ಯ ಸರ್ಕಾರ ಮಾರ್ಚ್‌ 15ರಂದು ಬಜೆಟ್‌ ಮಂಡಿಸಲಿದೆ. ಅಲ್ಲಿ ಕೃಷಿ ಸಾಲ ಮನ್ನಾ ಕುರಿತು ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ನಿರೀಕ್ಷಿಸುತ್ತಿದ್ದೇವೆ ಎಂದೂ ಕುಮಾರಸ್ವಾಮಿ ಹೇಳಿದರು.

ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಕೃಷಿ ಸಾಲ ಮನ್ನಾ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳದೇ ಇದ್ದಲ್ಲಿ ಮುಂದಿನ  ಹೋರಾಟದ ಬಗ್ಗೆ  ಜೆಡಿಎಸ್ ಯೋಜನೆ ರೂಪಿಸಲಿದೆ ಎಂದು ಅವರು ಭರವಸೆ ನೀಡಿದರು.

ರೈತರಿಂದ ಸಾಲ ಮನ್ನಾ ವಿಷಯ ಪ್ರಸ್ತಾಪ
ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಗೆ ರೈತರು ಆಗ್ರಹಿಸಿದ ಘಟನೆ ನಡೆಯಿತು.

ಗೌಡಳ್ಳಿ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸೇರಿದ್ದ ರೈತರು ಈ ಆಗ್ರಹ ಮಂಡಿಸಿದರು.

ವೇದಿಕೆಯಲ್ಲಿದ್ದ  ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ಈ ಕುರಿತು ಆಗ್ರಹ ಮಂಡಿಸಿದರು.

ರಾಜ್ಯದ ಮೂರು ಪಕ್ಷಗಳ ಮುಖಂಡರು ಚರ್ಚಿಸಿ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವಂತೆ ರೈತರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ಗೆ ಅಧಿಕಾರ ನೀಡಿದಲ್ಲಿ ಕೃಷಿ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದೇವೆ. ನಮಗೆ ಯಾವುದೇ ಹೈಕಮಾಂಡ್‌ನ ಆದೇಶ ಬೇಕಾಗಿಲ್ಲ ಎಂದರು.

ಡಿ.ವಿ.ಸದಾನಂದಗೌಡ ಅವರು, ‘ನಮ್ಮದು ರಾಷ್ಟ್ರೀಯ ಪಕ್ಷ. ನಮಗೆ ಹೈಕಮಾಂಡ್‌ ಇದೆ. ಅಧಿಕಾರದಲ್ಲಿ ಇರುವ ರಾಜ್ಯ ಸರ್ಕಾರ ಈ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.