ADVERTISEMENT

ವಿಪ್‌ ಉಲ್ಲಂಘನೆ; ಸದಸ್ಯತ್ವ ಅನರ್ಹ

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ; ನಿಯಮ ಪಾಲಿಸದ ಸದಸ್ಯರಾದ ಶ್ರೀಮತಿ ಬಂಗೇರ, ವೀಣಾಕ್ಷಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 9:07 IST
Last Updated 2 ಮಾರ್ಚ್ 2017, 9:07 IST

ಮಡಿಕೇರಿ:  ನಗರಸಭೆ ಸದಸ್ಯರಾದ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಅವರ ಸದಸ್ಯತ್ವವನ್ನು ಕೊಡಗು ಜಿಲ್ಲಾಧಿಕಾರಿ ನ್ಯಾಯಾಲಯವು ಅನರ್ಹಗೊಳಿಸಿ ಬುಧವಾರ ಆದೇಶ ಹೊರಡಿಸಿದೆ.

ಕಾಂಗ್ರೆಸ್‌ನಿಂದ ಗೆದ್ದಿದ್ದ ಇಬ್ಬರು ಸದಸ್ಯರು, ಸೆ.9ರಂದು ನಡೆದ ಎರಡನೇ ಅವಧಿಯ ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿ ವಿಪ್‌ ಉಲ್ಲಂಘಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಚುನಾವಣೆಯಲ್ಲಿ ಪಕ್ಷ ವಿರೋಧಿ ಚುಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಕಾಂಗ್ರೆಸ್‌ ದೂರು ದಾಖಲಿಸಿತ್ತು.

ಪಕ್ಷದ ವಿಪ್‌ ಪ್ರತಿಯನ್ನು ಸಹಿ ಮಾಡಿ ಜಿಲ್ಲಾ ಅಧ್ಯಕ್ಷ ಟಿ.ಪಿ. ರಮೇಶ್‌ ಪಡೆದುಕೊಂಡಿದ್ದರೂ ಉಲ್ಲಂಘಿಸಿ ಬಿಜೆಪಿಯ ಅಭ್ಯರ್ಥಿಗಳ ಪರ ಕೈಎತ್ತಿರುವುದು ಸಾಬೀತಾಗಿದ್ದು, ಕರ್ನಾಟಕ ಸ್ಥಳೀಯ ಪ್ರಾಧಿಕಾರಿಗಳ (ಪಕ್ಷಾಂತರ ನಿಷೇಧ) ಕಾಯ್ದೆ ಅಡಿ ನಗರಸಭೆ ಸದಸ್ಯತ್ವ ಅನರ್ಹಗೊಳಿಸಿ ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಆದೇಶಿಸಿದ್ದಾರೆ.

ಕಾಂಗ್ರೆಸ್‌ನ 10, ಬಿಜೆಪಿಯ 8, ಎಸ್‌ಡಿಪಿಐನ 4, ಜೆಡಿಎಸ್‌ನ ಏಕೈಕ ಸದಸ್ಯೆ ಸೇರಿದಂತೆ ಒಟ್ಟು 23 ಸದಸ್ಯರನ್ನು ಇಲ್ಲಿನ ನಗರಸಭೆ ಒಳಗೊಂಡಿದೆ. 2ನೇ ಅವಧಿಯ ಅಧ್ಯಕ್ಷ ಸ್ಥಾನ ‘ಸಾಮಾನ್ಯ ಮಹಿಳೆ’, ಉಪಾಧ್ಯಕ್ಷ ಸ್ಥಾನ ‘ಸಾಮಾನ್ಯ ವರ್ಗ’ಕ್ಕೆ ಮೀಸಲಾಗಿತ್ತು. ಬಿಜೆಪಿಯ ಸಂಸದ ಪ್ರತಾಪಸಿಂಹ, ಶಾಸಕ ಅಪ್ಪಚ್ಚು ರಂಜನ್‌, ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಹಣ್ಯ ಹಾಗೂ ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಅವರಿಗೂ ಮತದಾನದ ಅವಕಾಶವಿದ್ದ ಕಾರಣ ಅಂದು ಆಯ್ಕೆ ಕುತೂಹಲ ಮೂಡಿಸಿತ್ತು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಕಾವೇರಮ್ಮ ಸೋಮಣ್ಣ ಹಾಗೂ ಬಿಜೆಪಿಯ ಅನಿತಾ ಪೂವಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಪ್ರಕಾಶ್‌ ಆಚಾರ್ಯ ಹಾಗೂ ಬಿಜೆಪಿಯ ಟಿ.ಎಸ್‌. ಪ್ರಕಾಶ್‌ ನಾಮಪತ್ರ ಸಲ್ಲಿಸಿದ್ದರು. ಇದನ್ನು ಪಕ್ಷದ ಮುಖಂಡರು ನಿರಾಕರಿಸಿದ ಹಿನ್ನೆಲೆಯಲ್ಲಿ ಬಂಗೇರ ಹಾಗೂ 17ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ವೀಣಾಕ್ಷಿ ಅವರು ಬಂಡಾಯವೆದಿದ್ದರು.

ಜೆಡಿಎಸ್‌ ಸದಸ್ಯೆ ಸಂಗೀತಾ ಪ್ರಸನ್ನ ಬೆಂಬಲ ಸಹ ಬಿಜೆಪಿ ಇತ್ತು. ಕಾಂಗ್ರೆಸ್‌ನ ಬಂಡಾಯದ ಲಾಭ ಪಡೆಯಲು ಬಿಜೆಪಿ ಮುಖಂಡರು ಪ್ರಯತ್ನಿಸಿ, ತೆರೆಮರೆಯ ಕಸರತ್ತು ನಡೆಸಿ ಯಶಸ್ವಿಯಾಗಿದ್ದರು. ಎಸ್‌ಡಿಪಿಐನ ನಾಲ್ವರು ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದರೂ ಸ್ವಪಕ್ಷದವರೇ ಕೈಕೊಟ್ಟಿದ್ದ ಕಾರಣ ಕಾಂಗ್ರೆಸ್‌ಗೆ ನಷ್ಟವಾಗಿತ್ತು.

ಚುನಾವಣೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು 13–13 ಸಮಬಲದ ಮತ ಪಡೆದುಕೊಂಡಿದ್ದರು. ಬಳಿಕ ಲಾಟರಿ ಮೂಲಕ ಆಯ್ಕೆ ನಡೆಯಿತು. ಲಾಟರಿಯಲ್ಲಿ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ ಒಲಿದರೆ, ಬಿಜೆಪಿಗೆ ಉಪಾಧ್ಯಕ್ಷ ಸ್ಥಾನ ಒಲಿದಿತ್ತು. ಬಂಗೇರಾ ಹಾಗೂ ವೀಣಾಕ್ಷಿ ಕಾಂಗ್ರೆಸ್‌ ಅಭ್ಯರ್ಥಿಗಳ ವಿರುದ್ಧ ಕೈಎತ್ತಿದ್ದರು ಎಂಬ ಆರೋಪವಿತ್ತು. ಸಂಸದ ಪ್ರತಾಪ್‌ ಸಿಂಹ ಚುನಾವಣೆಗೆ ಗೈರಾಗಿದ್ದರು. ಒಂದು ವೇಳೆ ಸಂಸದರು ಚುನಾವಣೆಗೆ ಹಾಜರಾಗಿದ್ದರೆ ಕಾಂಗ್ರೆಸ್‌ಗೆ ಅಧಿಕಾರ ಕೈತಪ್ಪುತ್ತಿತ್ತು.

ಹೈಕೋರ್ಟ್ ಮೊರೆಗೆ ನಿರ್ಧಾರ
ಮಡಿಕೇರಿ:
  ನಗರಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವ ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುವುದಾಗಿ ಅನರ್ಹಗೊಂಡಿರುವ ಸದಸ್ಯೆ ಶ್ರೀಮತಿ ಬಂಗೇರಾ, ವೀಣಾಕ್ಷಿ ತಿಳಿಸಿದ್ದಾರೆ.

‘25 ವರ್ಷಗಳಿಂದ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತೆಯಾಗಿ ಪಕ್ಷದ ಬೆಳವಣಿಗೆಗಾಗಿ ದುಡಿದ ನನ್ನನ್ನು ಇಂದು ಪಕ್ಷದಿಂದ ಅಮಾನತುಗೊಳಿಸಿರುವುದು ವಿಷಾದನೀಯ. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ತೊರೆದು ಬಿಜೆಪಿಯ ಮೂಲಕ ನಗರಸಭಾ ಅಧ್ಯಕ್ಷರಾದ ಸದಸ್ಯರೊಬ್ಬರ ಕುತಂತ್ರದಿಂದ ಹಿನ್ನಡೆಯಾಗಿದೆ’ ಎಂದು ಶ್ರೀಮತಿ ಬಂಗೇರಾ ತಿಳಿಸಿದ್ದಾರೆ.

ಮುಂದಿನ ರಾಜಕೀಯ ನಡೆಯ ಬಗ್ಗೆ ಸದ್ಯದಲ್ಲಿಯೇ ನಿರ್ಧಾರ ಕೈಗೊಳ್ಳುತ್ತೇನೆ ಎಂದ್ದಾರೆ. ‘ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಅಗೌರವದಿಂದ ಕಾಣುವ ಮೂಲಕ ಪಕ್ಷವನ್ನು ಹೀನಾಯ ಸ್ಥಿತಿಗೆ ಕೊಂಡೊಯ್ಯುತ್ತಿರುವ ಮುಖಂಡರನ್ನು ಮೊದಲು ಜಿಲ್ಲಾಧ್ಯಕ್ಷರು ಅಮಾನತು ಮಾಡಲಿ. ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುತ್ತೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತೆ’ ಎಂದು ವೀಣಾಕ್ಷಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.