ADVERTISEMENT

ಶಿಕ್ಷಣ ವ್ಯಾಪಾರೀಕರಣದಿಂದ ಗ್ರಾಮೀಣರು ವಂಚಿತ

ಗುರುವಂದನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 10:07 IST
Last Updated 28 ಫೆಬ್ರುವರಿ 2017, 10:07 IST
ಸೋಮವಾರಪೇಟೆ ಸಮೀಪದ ಗೌಡಳ್ಳಿಯಲ್ಲಿಸೋಮವಾರ ಗುರುವಂದನಾ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠಾಧೀಶರಾದ ಡಾ. ನಿರ್ಮಲಾನಂದನಾಥ ಸಾಮೀಜಿ  ಅವರು ಉದ್ಘಾಟಿಸಿದರು
ಸೋಮವಾರಪೇಟೆ ಸಮೀಪದ ಗೌಡಳ್ಳಿಯಲ್ಲಿಸೋಮವಾರ ಗುರುವಂದನಾ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠಾಧೀಶರಾದ ಡಾ. ನಿರ್ಮಲಾನಂದನಾಥ ಸಾಮೀಜಿ ಅವರು ಉದ್ಘಾಟಿಸಿದರು   

ಸೋಮವಾರಪೇಟೆ: ‘ಶಿಕ್ಷಣ ಇಂದು ವ್ಯಾಪಾರೀಕ ರಣಗೊಂಡಿದ್ದು,  ಗ್ರಾಮೀಣ ಜನರಿಗೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸೋಮವಾರ ಆರೋಪಿಸಿದರು. 

ಸಮೀಪದ ಗೌಡಳ್ಳಿ ವಿದ್ಯಾಸಂಸ್ಥೆ ಆವರಣದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಏರ್ಪಡಿಸಿದ್ದ ಆದಿಚುಂಚನಗಿರಿ ಕ್ಷೇತ್ರದ ಮಠಾಧೀಶ ಡಾ. ನಿರ್ಮಲಾನಂದ ನಾಥ ಸ್ವಾಮೀಜಿ ಪುರ ಪ್ರವೇಶ, ಗುರುವಂದನಾ ಕಾರ್ಯಕ್ರಮ, ಗೌಡಳ್ಳಿ ಪ್ರೌಢಶಾಲೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭ ದಿವಂಗತ ವಿ.ಟಿ. ಈರಪ್ಪ ಪುತ್ಥಳಿ ಅನಾವರಣ ಮಾಡಲಾಯಿತು

‘ವಿದ್ಯಾ ಕೇಂದ್ರಗಳು ವ್ಯಾಪಾರಿ ಕೇಂದ್ರಗಳಾಗಬಾರದು. ಇದರಿಂದಾಗಿ ಸಾಮಾನ್ಯ ಜನರು ಒಳ್ಳೆಯ ಶಿಕ್ಷಣದಿಂದ ವಂಚಿತಾರುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಪರಿವರ್ತನೆ ಮನೆಯಿಂದಲೇ ಆರಂಭವಾಗಬೇಕು’ ಎಂದರು.

ADVERTISEMENT

ಇಂದು ಯುವಜನರಿಗೆ ಮಠಮಾನ್ಯಗಳು ನೈತಿಕ ಸ್ಥೈರ್ಯ ತುಂಬುವ ಶಿಕ್ಷಣ ನೀಡುತ್ತಿವೆ. ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣ ನೀಡುವ ಶಕ್ತಿ ಮಠಮಾನ್ಯಗಳಿಗೆ ಮಾತ್ರ ಇದೆ ಎಂದು ಅಭಿಪ್ರಾಯಪಟ್ಟರು.

ಸಮಾಜಕ್ಕೆ ಶಕ್ತಿಯಾಗಬೇಕೆಂಬ ಪರಿಕಲ್ಪನೆಯಿಂದ  ಮಠಮಾನ್ಯಗಳು ಇಟ್ಟುಕೊಂಡು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿವೆ. ನಮ್ಮ ದೇಶದಲ್ಲಿ  ಆದರ್ಶಗಳಿಗೆ ಕೊರತೆಯಿಲ್ಲ. ಆದರೆ ಅನುಷ್ಠಾನದ ಕೊರತೆ ಇದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಸಾಧನೆ ಆಪಾರ. ಶಿಕ್ಷಣ ಎಂದಿಗೂ ವ್ಯಾಪಾರ, ಬಂಡವಾಳ ಹೂಡಿಕೆ ಕ್ಷೇತ್ರ  ಆಗಬಾರದು. ಗ್ರಾಮೀಣ  ಜನರ ಕಣ್ಣೊರೆಸುವ ಶಕ್ತಿ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡಲಿ:
ಮುಖ್ಯ ಅತಿಥಿ ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ‘ರಾಜ್ಯದಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುವ ಸರ್ಕಾರ ಬರಬೇಕು. ಸರ್ಕಾರಗಳು ಶಿಕ್ಷಣಕ್ಕೆ ಸಂಬಂಧಿತ ಕಾರ್ಯಕ್ರಮ ಜಾರಿಗೊಳಿಸುವಲ್ಲಿ ವಿಫಲವಾಗಿವೆ’ ಎಂದರು.

‘ನಿರೀಕ್ಷೆಗಳಿಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ ಹೆಚ್ಚು ಶ್ರಮಿಸಿದೆ’ ಎಂದು ಶ್ಲಾಘಿಸಿದರು.

ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠಾಧೀಶರಾದ ಡಾ. ನಿರ್ಮಲಾನಂದ ನಾಥ ಸಾಮೀಜಿ, ‘ದೇಶದ ಸಂಸ್ಕೃತಿ ಮಹಿಳೆಯರಿಂದ ಉಳಿದಿದೆ. ಮಕ್ಕಳನ್ನು ದೇಶದ ಆಸ್ತಿಯಾಗಿ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ. ಪೋಷಕರು  ಮಕ್ಕಳ ಮನಸ್ಸಿಗೆ ಘಾಸಿಗೊಳಿಸಿದರೆ ಪರಿಣಾಮ ಎದುರಿಸಬೇಕಾದಿತು ಎಂಬ ಎಚ್ಚರಿಕೆ ಇರಬೇಕು ಎಂದರು.

ವಿದ್ಯಾರ್ಥಿಗಳು  ವಿಜ್ಞಾನ ವಿಷಯದತ್ತ ಹೆಚ್ಚಿನ ಆಸಕ್ತಿ ವಹಿಸಬೇಕು.  ವಿಜ್ಞಾನ ವಿಷಯಕ್ಕೆ ಒತ್ತು ನೀಡಲು ಗೌಡಳ್ಳಿಯಲ್ಲಿ ವಿಜ್ಞಾನ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು

ಗೌಡಳ್ಳಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಬಿ.ಭರತ್‌ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಆದಿ ಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಸಂಸದ ಪ್ರತಾಪಸಿಂಹ, ಶಾಸಕ ಅಪ್ಪಚ್ಚು ರಂಜನ್, ಮಾಜಿ ಸಚಿವ ಬಿ.ಎ.ಜೀವಿಜಯ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ರಾಜ್ಯ ಒಕ್ಕಲಿಗರ ಸಂಘದ  ನಿರ್ದೇಶಕ ಎಚ್.ಕೆ. ಶೇಖರ್, ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಕೆ.ಪಿ.ಚಂದ್ರಕಲಾ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಗೌಡಳ್ಳಿ ಗ್ರಾ.ಪಂ ಅಧ್ಯಕ್ಷ ಧರ್ಮಾಚಾರಿ, ದೊಡ್ಡಮಳ್ತೆ ಗ್ರಾ.ಪಂ ಅಧ್ಯಕ್ಷ ದಿವಾಕರ್ ಇದ್ದರು.

ಕಾರ್ಯಕ್ರಮಕ್ಕೆ ಮುನ್ನ  ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ್ದು, ಕಳಸ ಹೊತ್ತ ಮಹಿಳೆಯರ ತಂಡ, ಜಾನಪದ ಕಲಾತಂಡಗಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.