ADVERTISEMENT

ಸಂಭ್ರಮದಿಂದ ಜರುಗಿದ ಅಮ್ಮ–ಮಕ್ಕಳ ಜಾತ್ರೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:15 IST
Last Updated 16 ಜನವರಿ 2017, 6:15 IST
ಸಂಭ್ರಮದಿಂದ ಜರುಗಿದ ಅಮ್ಮ–ಮಕ್ಕಳ ಜಾತ್ರೆ
ಸಂಭ್ರಮದಿಂದ ಜರುಗಿದ ಅಮ್ಮ–ಮಕ್ಕಳ ಜಾತ್ರೆ   

ಶನಿವಾರಸಂತೆ: ಬೆಂಬಳೂರು ಗ್ರಾಮದಲ್ಲಿ ಭಾನುವಾರ ಬಾಣಂತಮ್ಮ ದೇವಿ ಹಾಗೂ ಕುಮಾರಲಿಂಗೇಶ್ವರ ಜಾತ್ರೆ ವಿಜೃಂಭಣೆಯಿಂದ ಜರುಗಿತು. ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿ, ಸಕಲೇಶಪುರ ತಾಲ್ಲೂಕಿನ ಹೆತ್ತೂರು, ಯಸಳೂರು, ಚಂಗಡಹಳ್ಳಿ ಸೇರಿದಂತೆ ಅನೇಕ ಕಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು ಗ್ರಾಮೀಣ ಸಂಸ್ಕೃತಿಯ, ಜಾನಪದ ಸೊಗಡಿನ ಐತಿಹಾಸಿಕ ಜಾತ್ರೆಗೆ ಸಾಕ್ಷಿಯಾದರು.

ಬೆಳಿಗ್ಗೆ 9 ಗಂಟೆಗೆ ಬಾಣಂತಮ್ಮ ದೇವಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಜಾತ್ರಾ ಮೈದಾನಕ್ಕೆ ಕೊಂಡೊಯ್ದು ಮಂಟಪ ದಲ್ಲಿ ಇರಿಸಲಾಯಿತು. ಭಕ್ತಾದಿಗಳಿಂದ ಪೂಜಾ ವಿಧಿವಿಧಾನಗಳು ನಡೆದವು. ಮಡೆಗಾಗಿ ಸ್ವೀಕರಿಸಿದ ಪದಾರ್ಥಗಳಿಂದ ತಯಾರಿಸಿದ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸಲಾಯಿತು.

ಮಧ್ಯಾಹ್ನ 1 ಗಂಟೆಗೆ ಮಹಾ ಮಂಗಳಾರತಿಯೊಂದಿಗೆ ಬಾಣಂತಮ್ಮ ಜಾತ್ರೆ ಮುಕ್ತಾಯವಾಯಿತು. ದೇವಿಯ ಅಡ್ಡಪಲ್ಲಕ್ಕಿಯನ್ನು ಮರಳಿ ದೇವಾಲಯಕ್ಕೆ ಕೊಂಡೊಯ್ಯಲಾಯಿತು.

ಮಧ್ಯಾಹ್ನದ ನಂತರ 2 ಗಂಟೆಗೆ ಬಾಣಂತಮ್ಮ ದೇವಿಯ ಮಗ ಕುಂಟ ಮಗ ಕುಮಾರಲಿಂಗೇಶ್ವರ ಜಾತ್ರೆ ಆರಂಭವಾಯಿತು. ಕುಮಾರಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಪಲ್ಲಕ್ಕಿಯಲ್ಲಿ ಹೊತ್ತು, ಕುಂಟುತ್ತಲೆ ಮೆರವಣಿಗೆಯಲ್ಲಿ ಜಾತ್ರಾ ಮೈದಾನಕ್ಕೆ ಕರೆತರಲಾಯಿತು. ಭಕ್ತಾದಿಗಳಿಂದ ಪುಜಾ ವಿಧಿಗಳು ನೆರವೇರಿದ ಬಳಿಕ ಸಂಜೆ 5ಕ್ಕೆ ಜಾತ್ರೆ ಸಂಪನ್ನವಾಗಿ ಕುಮಾರಲಿಂಗೇಶ್ವರ ದೇವರ ಅಡ್ಡಪಲ್ಲಕ್ಕಿಯನ್ನು ಮರಳಿ ದೇವಾಲಯಕ್ಕೆ ಕೊಂಡೊಯ್ಯಲಾಯಿತು.

ಜಾತ್ರೆಯಲ್ಲಿ ತೆರೆದಿದ್ದ ಶೃಂಗಾರ ಸಾಧನಗಳ, ಮಕ್ಕಳ ಆಟಿಕೆಗಳ, ತಿಂಡಿ–ತಿನಿಸುಗಳ ಅಂಗಡಿ ಮುಂಗಟ್ಟು, ಹೋಟೆಲ್‌ಗಳ ಮುಂದೆ ನೆರೆದಿದ್ದ ಮಹಿಳೆಯರು, ಮಕ್ಕಳು ಅಗತ್ಯ ವಸ್ತುಗಳನ್ನು ಸಂಭ್ರಮದಿಂದ ಖರೀದಿಸುತ್ತಿದ್ದರು.


ಶಾಂತಳ್ಳಿ: ರಥೋತ್ಸವ ಇಂದು
ಸೋಮವಾರಪೇಟೆ: ಸಮೀಪದ ಶಾಂತಳ್ಳಿ  ಕುಮಾರಲಿಂಗೇಶ್ವರ ದೇವಾಲಯದ 58ನೇ ಮಹಾ ರಥೋತ್ಸವ ನಡೆಯಲಿದ್ದು, ಅದರ ಪ್ರಯುಕ್ತ ಕಳೆದ ಎರಡು ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.

ದೇವಾಲಯದಲ್ಲಿ ಶನಿವಾರ ಮಕರ ಸಂಕ್ರಮಣ ಕರುವಿನ ಹಬ್ಬ ನಡೆದಿದ್ದು, ಭಾನುವಾರ ಅರಸುಬಲ ಸೇವೆ ನೆರವೇರಿತು. ಜ.16ರಂದು ಮಧ್ಯಾಹ್ನ 12 ಗಂಟೆಗೆ ಕುಮಾರಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವ  ನಡೆಯಲಿದ್ದು, ಮಧ್ಯಾಹ್ನ 12.10ರಿಂದ 2.30ರವರೆಗೆ ಅನ್ನ ಸಂತರ್ಪಣೆ ನಡೆಯಲಿದೆ.

   ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂಜೆ 6 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ.  17ರಂದು ವಿವಿಧ ಪೂಜಾ ಕಾರ್ಯಕ್ರಮಗಳು ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.

ಅಂದು ಬೆಳಿಗ್ಗೆ 10ರಿಂದ ಆಹ್ವಾನಿತ ನೃತ್ಯ ತಂಡಗಳಿಂದ ನೃತ್ಯ ಪ್ರದರ್ಶನ, ಸಂಜೆ 5 ಗಂಟೆಯಿಂದ ಸುಧಾ ಬರಗೂರು ಮತ್ತು ತಂಡದವರಿಂದ ನಗೆ ಹಬ್ಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಶಾಂತಳ್ಳಿ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಜಿ.ಎಸ್. ರಘು ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಂಸದ ಪ್ರತಾಪ ಸಿಂಹ, ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಭಾಗವಹಿಸಲಿದ್ದಾರೆ.

ಅದ್ಧೂರಿ ದೊಡ್ಡಯ್ಯನ ಉತ್ಸವ
ಹೆತ್ತೂರು: ಸಕಲೇಶಪುರ ತಾಲ್ಲೂಕಿನ ಗೊದ್ದು ಸಮೀಪದ ಕೊಂಗಳ್ಳಿ ಗ್ರಾಮದಲ್ಲಿ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಕುಮಾರ ಲಿಂಗೇಶ್ವರ (ದೊಡ್ಡಯ್ಯಸ್ವಾಮಿ)ಯ 346ನೇ ಜಾತ್ರಾ ಮಹೋತ್ಸವ ನಡೆಯಿತು.

ಪಶ್ಚಿಮಘಟ್ಟದ ಬಿಸಿಲೆ ಹಾಗೂ ಕೊಡಗಿನ ಪುಷ್ಪಗಿರಿ ರಕ್ಷಿತಾರಣ್ಯದಂಚಿನಲ್ಲಿ ನಡೆಯುವ ಜಾತ್ರೆಗೆ ಪ್ರತಿ ವರ್ಷದಂತೆ ಈ ಬಾರಿಯೂ ಸುಮಾರು 40 ಸಾವಿರ ಭಕ್ತರು ಪಾಲ್ಗೊಂಡಿದ್ದರು. ಭಕ್ತರು ಹರಕೆ ಅರ್ಪಿಸಿ ಪೂಜೆ ಸಲ್ಲಿಸಿದರು.

ಕೊಡಗು, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಯಿಂದ ಭಕ್ತದಂಡು ಹರಿದು ಬಂದಿತ್ತು. ಬೆಳಿಗ್ಗೆ 6 ಗಂಟೆ ಗ್ರಾಮಸ್ಥರು ತಂಬಾಯಿಲು ಗ್ರಾಮದ ಮೂಲ ದೇವಸ್ಥಾನದಿಂದ ಕರಡಿ ವಾದ್ಯ, ತಮಟೆ, ಸುಗ್ಗಿ ಕುಣಿತದೊಂದಿಗೆ ಮೆರವಣಿಗೆ ಮೂಲಕ ದೊಡ್ಡಯ್ಯ ಉತ್ಸವಮೂರ್ತಿ ಕರೆತಂದರು. ಕೊಂಗಳ್ಳಿಯ ಕುಮಾರಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮೆರವಣಿಗೆ ಯಲ್ಲಿ ತರಲಾಯಿತು.  ಜಾತ್ರೆಯ ದಿನ ಮಾತ್ರ ದೊಡ್ಡಯ್ಯಸ್ವಾಮಿಯ ದರ್ಶನವಾಗುವುದರಿಂದ ಭಕ್ತರ ನೂಕು ನುಗ್ಗಲಿನಲ್ಲಿ ಬಂದು ದೇವರ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT