ADVERTISEMENT

ಸಂಸ್ಕೃತಿ ಅಭಿಮಾನದಿಂದ ಜನಾಂಗದ ಉಳಿವು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 9:03 IST
Last Updated 13 ನವೆಂಬರ್ 2017, 9:03 IST

ಗೋಣಿಕೊಪ್ಪಲು: ಕೊಡವರು ತಮ್ಮ ಸಂಸ್ಕೃತಿಯ ಬಗ್ಗೆ ಹೊಂದಿರುವ ಅಭಿಮಾನ ಮತ್ತು ಪ್ರೀತಿಯಿಂದ ಜನಾಂಗದ ಪರಂಪರೆ ಉಳಿವು ಸಾಧ್ಯವಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್‌.ತಮ್ಮಯ್ಯ ಹೇಳಿದರು. ಚಿಕ್ಕಮಂಡೂರಿನ ಅಜ್ಜಿಕುಟ್ಟೀರ ಐನ್ಮನೆಯಲ್ಲಿ ಶನಿವಾರ ರೀಟಾ ಬೋಪಯ್ಯ ಅವರ ಮಾವೀರ ಅಚ್ಚುನಾಯಕ ಕೃತಿ ಬಿಡುಗಡೆಮಾಡಿ ಮಾತನಾಡಿದರು.

ಅನ್ಯ ಧರ್ಮೀಯರ ಪ್ರಭಾವದ ನಡುವೆಯೂ ತನ್ನತನವನ್ನು ಉಳಿಸಿಕೊಂಡಿರುವುದಕ್ಕೆ ಕಾರಣ ಅದರಲ್ಲಿರುವ ಹಿರಿಮೆ ಎಂದು ಅಭಿಮಾನದಿಂದ ನುಡಿದರು. ಅಜ್ಜಿಕುಟ್ಟೀರ ಕುಟುಂಬ ಪಟ್ಟೆದಾರ ಭೀಮಯ್ಯ ಮಾತನಾಡಿ, ‘ನಮ್ಮ ಕುಟುಂಬದ ಮೂಲ ಗುರು ಅಚ್ಚುನಾಯಕನ ಪುಸ್ತಕ ಮುಂದಿನ ಪೀಳಿಗೆಗೆ ಉತ್ತಮ ಮಾಹಿತಿ ನೀಡುವ ಕೃತಿಯಾಗಲಿದೆ. ಗುರುವಿನ ಸಾಹಸ, ಬದ್ಧತೆ ಉತ್ತಮವಾಗಿ ಮೂಡಿಬಂದಿದೆ ಎಂದರು.

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಅಚ್ಚುನಾಯಕ ಸಾಹಸ ಪುರುಷ. ಆತನ ಬಗ್ಗೆ ವಿಚಾರ ಸಂಕಿರಣ, ಮತ್ತಿತರ ಕಾರ್ಯಕ್ರಮ ಮಾಡಿ ಜನತೆಗೆ ತಿಳಿಸುವ ಅಗತ್ಯವಿದೆ ಎಂದರು. ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, ಕೊಡವರ ಮೂಲಕ ಸಂಸ್ಕೃತಿ, ಆಚಾರ-ವಿಚಾರ ಉಳಿಯಬೇಕಾದರೆ ಐನ್ಮನೆಯೊಂದಿಗಿನ ಸಂಬಂಧ ಮುಂದುವರಿಯಬೇಕು. ಕೊಡವ ಸಮಾಜಗಳು ಕೇವಲ ಕಲ್ಯಾಣ ಮಂಟಪಗಳಾಗದೆ ಕೊಡವಾಮೆಯ ಪೋಷಣೆಗೆ ಮುಂದಾಗಬೇಕು ಎಂದರು.

ADVERTISEMENT

ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟದಿಂದ ಭವ್ಯ ಇತಿಹಾಸ ಹೊಂದಿರುವ ಅಚ್ಚುನಾಯಕನ ಬಗ್ಗೆ ಹೊರತರುತ್ತಿರುವ ಪುಸ್ತಕ ಸಂಸ್ಕೃತಿಯ ರಕ್ಷಣೆಗೆ ಆದ್ಯತೆ ನೀಡಿದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡವ ಭಾಷೆಯ ಆದಿ ಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ ಜೀವನ ಚರಿತ್ರೆ ಹಾಗೂ ಅವರ ಹಾಡುಗಳನ್ನು ಮದ್ರೀರ ಸಂಜು ಹಾಗೂ ವಿ. ಟಿ. ಶ್ರೀನಿವಾಸ್ ಪ್ರಸ್ತುತಪಡಿಸಿದರು.

ಕುಟುಂಬದ ಹಿರಿಯರಾದ ಅಜ್ಜಿಕುಟ್ಟೀರ ಚಿಟ್ಯಪ್ಪ, ಲೇಖಕಿ ಕಾಡ್ಯಮಾಡ ರೀಟಾ ಬೋಪಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶರೀನ್ ಸುಬ್ಬಯ್ಯ, ಬಾಳೆಯಡ ದಿವ್ಯಾ ಮಂದಪ್ಪ, ಐನಂಡ ಪುಷ್ಪಾ, ಅಜ್ಜಿಕುಟ್ಟೀರ ದೇವಯ್ಯ ಅಜ್ಜಿಕುಟ್ಟೀರ ಮಾದಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.