ADVERTISEMENT

ಸಮಾಜದ ಕೊಳೆ ತೆಗೆಯಲು ಕಲೆ ಸಹಕಾರಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಲ್.ಎನ್. ಕುಳ್ಳಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 9:48 IST
Last Updated 3 ಜನವರಿ 2017, 9:48 IST

ಮಡಿಕೇರಿ:  ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಗಟ್ಟಿಗೊಳಿಸಿ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಲ್.ಎನ್. ಕುಳ್ಳಯ್ಯ ಹೇಳಿದರು. ಸಮೀಪದ ಬೆಟ್ಟಗೇರಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ‘ಯುವಸೌರಭ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ನಾಡಿನಲ್ಲಿ ಹಲವು ಬಗೆಯ ಕಲೆಗಳಿದ್ದು, ಅವುಗಳನ್ನು ಬೆಳೆಸಲು ಇಲಾಖೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಯುವ ಸೌರಭವೂ ಒಂದಾಗಿದೆ. ಈ ಮೂಲಕ ಕಲೆಯನ್ನು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಪರಿಚಯಿಸಲಾಗುತ್ತಿದೆ. ಯುವಸಮೂಹ ಸರ್ಕಾರ ಯೋಜನೆ ಗಳನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಗಮನಹರಿಸಬೇಕು ಎಂದು ಕರೆ ನೀಡಿದರು.

ಯಾಂತ್ರಿಕ ಯುಗದ ಪೈಪೋಟಿ ಜಗತ್ತಿನಲ್ಲಿ ಒಳ್ಳೆಯ ಮನಸ್ಸುಗಳು ಗಟ್ಟಿಯಾಗಿ ನಿಲ್ಲಬೇಕಾದರೆ ಶಿಕ್ಷಣ ದೊಂದಿಗೆ ಸಂಸ್ಕೃತಿಯ ಸದಭಿರುಚಿ ಬೆಳೆಸಿಕೊಳ್ಳುವುದು ಅವಶ್ಯ.ಕಲೆಯು ಮನಸ್ಸಿನ ಸಂಸ್ಕೃತಿಯನ್ನು ತಿಳಿಗೊಳಿಸು ವುದರೊಂದಿಗೆ ಸಮಾಜದ ಕೊಳೆ ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಯ್ಯ ಮಾತನಾಡಿ, ಜಿಲ್ಲೆಯ ಕಲೆಗಳಿಗೆ ವಿಶೇಷ ಸ್ಥಾನಮಾನವಿದೆ. ಇಲ್ಲಿನ ಸಂಪ್ರದಾಯ, ಸಂಸ್ಕೃತಿ, ಆಚಾರ–ವಿಚಾರಗಳು ವಿಭಿನ್ನ ವಾಗಿವೆ. ಇದರಿಂದಲೇ ವಿಶೇಷ ಗೌರವವಿದೆ. ಜಿಲ್ಲೆಯ ಕಲಾವಿದರಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಹಿಂದಿನಿಂದಲೂ ಜಾನಪದ ಸಾಹಿತ್ಯವು ನಮ್ಮ ಸಮಾಜದ ಸರ್ವ ತೋಮುಖ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಿದೆ. ಆದರೆ, ಇಂದಿನ ಆಧುನಿಕ ಜಗತ್ತಿನಲ್ಲಿ ದೂರದರ್ಶನಗಳಿಗೆ ಮಾರುಹೋಗಿ ಸಂಸ್ಕೃತಿ ಮರೆ ಆಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಉದಯ ವಿದ್ಯಾಸಂಸ್ಥೆಯ ಅಧ್ಯಕ್ಷ ತಳೂರು ಕಿಶೋರ್‌ಕುಮಾರ್ ಮಾತ ನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಕ್ರೀಡೆ, ಸಾಹಿತ್ಯ, ಸಂಸ್ಕೃತಿ, ಯೋಗ, ಧ್ಯಾನದ ಕಡೆಗೆ ಒಲವು ತೋರಬೇಕು. ಇದರಿಂದಾಗಿ ಶಿಸ್ತಿನ ಜೀವನ ಅಳವಡಿಸಿ ಕೊಂಡು ಸ್ವಾವಲಂಬಿಗಳಾಗಬಹುದು ಎಂದು ಅಭಿಪ್ರಾಯಪಟ್ಟರು.

ವಕೀಲ ಕಾರೇರ ಕವನ ಮಾದಪ್ಪ ಮಾತನಾಡಿ, ಸಂಸ್ಕೃತಿಯೊಂದಿಗೆ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳ ಬೇಕು. ಪರಿಸರ ಉಳಿದರೆ ಭಾಷೆ ಉಳಿದಂತೆ, ಭಾಷೆ ಉಳಿದರೆ ದೇಶ ಉಳಿದಂತೆ ಎಂದು ಹೇಳಿದರು.

ಮಣಜೂರು ಮಂಜುನಾಥ, ಎಸ್. ಗಣಪತಿ, ತಳೂರು ಸೋಮಣ್ಣ, ಜಗದೀಶ್ ರೈ, ಅರುಣ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಸಮೂಹ ನೃತ್ಯ, ಭಜನೆ, ಕಥಾ ಕೀರ್ತನೆ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.