ADVERTISEMENT

ಸುಂಟಿಕೊಪ್ಪ: ‘ಸ್ವಸ್ಥ’ ಮಕ್ಕಳಿಗೆ ಮನರಂಜನೆಯ ಸಿಂಚನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 9:31 IST
Last Updated 15 ನವೆಂಬರ್ 2017, 9:31 IST

ಸುಂಟಿಕೊಪ್ಪ: ಸ್ವಸ್ಥ ವಿಶೇಷ ಶಾಲೆಯಲ್ಲಿ ಮಂಗಳವಾರ ಸಂಭ್ರಮ ಮನೆಮಾಡಿತ್ತು. ಜಾದೂ, ನೃತ್ಯ, ಹಾಸ್ಯ ಬೆರೆತ ಮನರಂಜನಾ ಕಾರ್ಯಕ್ರಮಗಳು ಹರ್ಷದ ಹೊನಲನ್ನು ಹರಿಸಿದ್ದವು. ವಿಶೇಷ ಮಕ್ಕಳು ಕೇಕ್‌ ತಿಂದು ನಕ್ಕು ನಲಿದರು. ಮಡಿಕೇರಿಯ ಕ್ಲಬ್ ಮಹೀಂದ್ರ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ‘ಮಕ್ಕಳ ಹಬ್ಬ’ದ ದೃಶ್ಯವಿದು.

ಕಾರ್ಯಕ್ರಮ ಉದ್ಘಾಟಿಸಿದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಒ ಮೇದಪ್ಪ, ‘ಈ ಶಾಲೆಯಲ್ಲಿ ವಿಶೇಷ ಮಕ್ಕಳನ್ನು ಸಿಬ್ಬಂದಿ ತಮ್ಮ ಮಕ್ಕಳಿಗಿಂತಲೂ ಹೆಚ್ಚಿನ ಕಾಳಜಿ ವಹಿಸಿ ನೋಡಿಕೊಳ್ಳುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ವಿಶೇಷ ಮಕ್ಕಳೇ ತಯಾರಿಸಿದ ಕರಕುಶಲ ವಸ್ತುಗಳು, ಪೆಂಟಿಂಗ್‌ ಮೊದಲಾದ ಕಲೆಯನ್ನು ನೋಡಿದಾಗ ಮಕ್ಕಳ ದಿನಾಚರಣೆಗೆ ಅರ್ಥ ಬಂದಂತಾಗಿದೆ ಎಂದು ಹೇಳಿದರು

ADVERTISEMENT

ಕ್ಲಬ್ ಮಹೀಂದ್ರ ರೆಸಾರ್ಟ್‌ನ ವ್ಯವಸ್ಥಾಪಕ ಸ್ವಪನ್ ದಾಸ್ ಮಾತನಾಡಿ, ‘ಇಲ್ಲಿನ ಮಕ್ಕಳಿಗೆ ಬೇಕಾದಂತಹ ಸಹಕಾರವನ್ನು ನಾವು ನೀಡುತ್ತೇವೆ’ ಎಂದರು. ಸ್ವಸ್ಥ ವಿಶೇಷ ಶಾಲೆಯ ನಿರ್ದೇಶಕಿ ಆರತಿ ಸೋಮಯ್ಯ ಮಾತನಾಡಿ, ‘ಮಕ್ಕಳ ಬದುಕಿನಲ್ಲಿ ಶಿಕ್ಷಕರಿಗಿಂತಲೂ ಪೋಷಕರು ಒಬ್ಬ ಗೆಳೆಯರಾಗಿ, ಶಿಕ್ಷಕರಾಗಿ ಕಾರ್ಯ ನಿರ್ವಹಿಸಬೇಕಿದೆ. ಈ ಮಕ್ಕಳಿಗಾಗಿ ಹಲವು ರೀತಿಯ ತರಬೇತಿಗಳನ್ನು ನೀಡಿ ಅವರು ಸಮಾಜದಲ್ಲಿ ಸದೃಢ ಪ್ರಜೆಯಾಗಿ ಬೆಳೆಯಲು ಅನುವು ಮಾಡಿಕೊಡಲಾಗಿದೆ’ ಎಂದು ಹೇಳಿದರು.

ವಿಶೇಷ ಮಕ್ಕಳಾದ ಮಹಮ್ಮದ್ ಆನಸ್, ವಿನೋದ್, ರಾಜು ಅವರ ಹುಟ್ಟುಹಬ್ಬವನ್ನು ಕೇಕ್‌ ಕತ್ತರಿಸುವ ಮೂಲಕ ಆಚರಿಸಲಾಯಿತು.
ನಂತರ ಕ್ಲಬ್ ಮಹೀಂದ್ರದಿಂದ ಜಾದೂ ಪ್ರದರ್ಶನ, ಹಾಸ್ಯ ಕಲಾ ವಿದರ ನಟನೆ, ಮಿಮಿಕ್ರಿ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಮಕ್ಕಳ ನೃತ್ಯ ಪ್ರದರ್ಶನಗಳು ಆಕರ್ಷಿಸಿದವು. ಸ್ವಸ್ಥ ಸಂಸ್ಥೆಯ ಸಂಯೋಜಕ ಮುರುಗೇಶ್, ವಿಜು, ಪವಿತ್ರಾ, ಲತಾ, ಶಿಕ್ಷಕಿಯರು, ಕ್ಲಬ್ ಮಹೀಂದ್ರ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.