ADVERTISEMENT

1.29 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ

ಜಿಲ್ಲಾಮಟ್ಟದಲ್ಲಿ ದಡಾರ,ರುಬೆಲ್ಲಾ ರೋಗ ಲಸಿಕಾ ಅಭಿಯಾನ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 6:02 IST
Last Updated 6 ಫೆಬ್ರುವರಿ 2017, 6:02 IST

ಮಡಿಕೇರಿ: ದಡಾರ ಮತ್ತು ರುಬೆಲ್ಲಾ ರೋಗವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಟ್ಟಿದ್ದು, ಇದಕ್ಕೆ ಜಿಲ್ಲೆಯ ಅಧಿಕಾರಿಗಳು ಪೂರಕವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಸೂಚಿಸಿದರು.

ನಗರದಲ್ಲಿ ನಡೆದ ದಡಾರ ಮತ್ತು ರುಬೆಲ್ಲಾ ನಿಯಂತ್ರಣ ಅಭಿಯಾನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 9 ತಿಂಗಳಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೂ ದಡಾರ, ರುಬೆಲ್ಲಾ ನಿಯಂತ್ರಣ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್. ಶ್ರೀರಂಗಪ್ಪ ಮಾತನಾಡಿ, ದಡಾರ, ರುಬೆಲ್ಲಾ ನಿಯಂತ್ರಣ ಅಭಿಯಾನವು ಫೆ.7ರಿಂದ 28ರವರೆಗೆ  ಒಟ್ಟು 21 ದಿನಗಳ ಕಾಲ ನಡೆಯಲಿದೆ ಎಂದು ವಿವರಿಸಿದರು.

ಆರ್‌ಸಿಎಚ್ ಅಧಿಕಾರಿ ಡಾ.ನಿಲೇಶ್ ಮಾತನಾಡಿ, ಮಕ್ಕಳಿಗೆ ಲಸಿಕೆ ನೀಡುವುದರ ಮೂಲಕ ಸಮುದಾಯದಲ್ಲಿ ದಡಾರ ಮತ್ತು ರುಬೆಲ್ಲಾ ನಿಯಂತ್ರಣಕ್ಕೆ ಮುಂದಾಗಲಾಗಿದೆ. ಎಲ್ಲ ಸರ್ಕಾರಿ ಅನುದಾನಿತ, ಖಾಸಗಿ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಆರೋಗ್ಯ ಉಪ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹಾಗೂ ಸಮುದಾಯ ಆರೋಗ್ಯ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು. 

ದಡಾರ, ರುಬೆಲ್ಲಾ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 1.29 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಚುಚ್ಚುಮದ್ದು ಮಾದರಿಯಲ್ಲಿ ಲಸಿಕೆಯನ್ನು ನೀಡಲಾಗುತ್ತದೆ ಎಂದು ನಿಲೇಶ್ ತಿಳಿಸಿದರು.   

ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವಾದ ಫೆ.10ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, 1ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆ ಪಡೆದುಕೊಳ್ಳಿ ಎಂದು ಡಿಎಚ್‌ಒ ಡಾ.ಒ.ಆರ್. ಶ್ರೀರಂಗಪ್ಪ  ತಿಳಿಸಿದರು.  

1ರಿಂದ 19 ವರ್ಷದೊಳಗಿನ ಮಕ್ಕಳಿಗೆ ಶಾಲೆ ಮತ್ತು ಅಂಗನವಾಡಿಗಳಲ್ಲಿ ಜಂತುಹುಳ ನಿವಾರಣಾ ಮಾತ್ರೆಯನ್ನು ಉಚಿತವಾಗಿ ನೀಡಲಾಗುವುದು. ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಸಹ ಜಂತುಹುಳ ಮಾತ್ರೆ ನೀಡಲಾಗುವುದು.

ಆದ್ದರಿಂದ ಜಂತುಹುಳ ನಿವಾರಣಾ ಕಾರ್ಯಕ್ರಮಕ್ಕೆ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಜಿಲ್ಲಾ ಪಂಚಾಯಿತಿ ಸಿಒಒ ಚಾರುಲತ್ ಸೋಮಲ್, ಡಿಡಿಪಿಐ ಬಸವರಾಜು ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT