ADVERTISEMENT

20ಕ್ಕೆ ಸರ್ಕಾರದ ವಿರುದ್ಧ ಪ್ರತಿಭಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯ ವೈಖರಿಗೆ ಶಾಸಕ ಕೆ.ಜಿ.ಬೋಪಯ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 8:58 IST
Last Updated 18 ಫೆಬ್ರುವರಿ 2017, 8:58 IST
ಮಡಿಕೇರಿ: ರಾಜ್ಯ ಸರ್ಕಾರದ ಕಾರ್ಯ ವೈಖರಿ ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಬೆಂಬಲ ನೀಡುತ್ತಿರುವ ಕ್ರಮ ಖಂಡಿಸಿ ಬಿಜೆಪಿ ಫೆ.20ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಎಂದು ಶಾಸಕ ಕೆ.ಜಿ. ಬೋಪಯ್ಯ ಶುಕ್ರವಾರ ಮಾಹಿತಿ ನೀಡಿದರು. 
 
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜನರಲ್‌ ತಿಮ್ಮಯ್ಯ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಅಂತ್ಯಗೊಳ್ಳಲಿದೆ’ ಎಂದು ವಿವರಿಸಿದರು.
 
ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ಮುಖ್ಯಮಂತ್ರಿ ವರ್ತನೆಯೇ ಸಚಿವ ಸಂಪುಟದ ಸದಸ್ಯರು ಹಾಗೂ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗುವಂತಿದೆ; ಈ ಹಿಂದೆ ಜಯಚಂದ್ರ ಹಾಗೂ ಚಿಕ್ಕರಾಯಪ್ಪ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸುವ ಮತ್ತಷ್ಟು ಅಧಿಕಾರಿಗಳು ಇದ್ದಾರೆ ಎಂದು ದೂರಿದರು.
 
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: ಪರಿಸರಕ್ಕೆ ಧಕ್ಕೆಯುಂಟು ಮಾಡುವ ನೀಲಗಿರಿ, ಅಕೇಶಿಯ ಗಿಡ ಬೆಳೆಸದಂತೆ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಆದರೂ, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತದೇ ಗಿಡಗಳನ್ನು ಬೆಳೆಸುತ್ತಿದ್ದಾರೆ. ಇದು ಅವಿವೇಕದ ನಿರ್ಧಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ವಿರಾಜಪೇಟೆ ತಾಲ್ಲೂಕು ಚನ್ನಯ್ಯನಕೋಟೆ ವ್ಯಾಪ್ತಿಯ ದಿಡ್ಡಳ್ಳಿ ಗಿರಿಜನರಿಗೆ ಅದೇ ಸ್ಥಳದಲ್ಲಿ 10 ಗುಂಟೆ ಜಾಗ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ಕೊಟ್ಟಿದ್ದರು. ಈಗ ಅರಣ್ಯ ಪ್ರದೇಶದಲ್ಲಿ ಜಾಗ ನೀಡಿದರೆ ಜೈಲಿಗೆ ಹೋಗುವ ಸಾಧ್ಯತೆಯಿದೆ ಎಂದು ಹೇಳುತ್ತಿದ್ದಾರೆ. ಇಂತಹ ಸುಳ್ಳು ಭರವಸೆ ಆದಿವಾಸಿಗಳಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಹೇಳಿದರು. 
 
ಹೊದ್ದೂರಿನ ಪಾಲೆಮಾಡು ಪೈಸಾರಿಯಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸುವುದರಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವವರಿಗೆ ಅನುಕೂಲವಾಗಲಿದೆ. ಕ್ರಿಕೆಟ್‌ ಸ್ಟೇಡಿಯಂಗೆ ನೀಡಿರುವ ಜಾಗದಲ್ಲಿ ಸ್ಮಶಾನದ ಎರಡು ಎಕರೆ ಪೈಸಾರಿ ಜಾಗ ಸೇರಿದೆ ಎಂಬುದು ಸ್ಥಳೀಯರ ಆರೋಪ. ಇವರಿಗೆ ಪರ್ಯಾಯ ಜಾಗ ನೀಡಲಿ ಎಂದು ಬೋಪಯ್ಯ ಆಗ್ರಹಿಸಿದರು. 
 
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಎಸ್.ಎಂ. ಕೃಷ್ಣ ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ; ಜನಾರ್ದನ ಪೂಜಾರಿ, ಎಚ್.ವಿಶ್ವನಾಥ್ ಅವರೂ ಬೆಲೆ ಸಿಗದೇ ರಾಜೀನಾಮೆ ಕೊಡಲು ಮುಂದಾಗಿದ್ದಾರೆ. ಹೀಗಿರುವಾಗ, ಪಕ್ಷದ ಆಂತರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲೇ ರಾಜ್ಯ ಸರ್ಕಾರ ಮುಳುಗಿದ್ದು, ಜನರ ಸಮಸ್ಯೆ ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್‌ನಲ್ಲಿ ವಲಸಿಗರು, ಮೂಲ ಕಾಂಗ್ರೆಸ್ಸಿಗರು ಎಂಬ ಕಿತ್ತಾಟ ಸಾಮಾನ್ಯವಾಗಿದೆ  ಎಂದು ಹೇಳಿದರು.
 
ವಿಧಾನ ಪರಿಷತ್‌ನ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಜಿಲ್ಲೆಯನ್ನು ಬರ ಜಿಲ್ಲೆ ಎಂದು ಘೋಷಿಸಿದ್ದಾರೆಯೇ ಹೊರತು ಅದಕ್ಕೆ ತಕ್ಕ ಪ್ರತಿಫಲವನ್ನು ರೈತರಿಗೆ ನೀಡಿಲ್ಲ. ನೀರಿಲ್ಲದೆ ಕಾಫಿ ಬೆಳೆಯಲ್ಲಿ ಪ್ರಸಕ್ತ ವರ್ಷ ಶೇ 25ರಷ್ಟು ಫಸಲು ತೆಗೆಯಲು ಸಾಧ್ಯ ಆಗುತ್ತಿಲ್ಲ. ಜಿಲ್ಲೆಯ ರೈತರಿಗೆ ರಾಜ್ಯ ಸರ್ಕಾರ ಕಿಂಚಿತ್ತೂ ಬೆಲೆ ಕೊಡದ ಕಾರಣ ಪಕ್ಷ ರೈತ ಮುಖಂಡರ ಜತೆಗೆ ಧರಣಿ ನಡೆಸುವ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮನು ಮುತ್ತಪ್ಪ ಹಾಜರಿದ್ದರು.
 
‘ಸೂಕ್ಷ್ಮ ವಲಯ ಘೋಷಣೆ’ಗೆ ವಿರೋಧ
ಮಡಿಕೇರಿ: ಕೊಡಗು ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಬಾರದು ಎಂದು ಶಾಸಕ ಕೆ.ಜಿ. ಬೋಪಯ್ಯ ಆಗ್ರಹಿಸಿದರು.

ಜಿಲ್ಲೆಯನ್ನು ಪರಿಸರ ಸೂಕ್ಮ ವಲಯವೆಂದು ಘೋಷಿಸಬೇಕು ಎನ್ನುವ ಕೊಡಗು ವನ್ಯಜೀವಿ ಸಂಸ್ಥೆಯ ಬೇಡಿಕೆ ಸರಿಯಲ್ಲ ಎಂದು ಪ್ರತಿಪಾದಿಸಿದರು.
‘ಈಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿನ ಮೂಲ ನಿವಾಸಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸೂಕ್ಷ್ಮ ವಲಯ ಎಂದು ಘೋಷಣೆಯಾದರೆ ಇನ್ನಷ್ಟು ಸಮಸ್ಯೆ ಉದ್ಭವಿಸಲಿವೆ. ಜತೆಗೆ, ಜನರಿಗೆ ಮಾರಾಕವಾಗಲಿದೆ’ ಎಂದು ಹೇಳಿದರು.
 
ತುಳು ಸಂಸ್ಕೃತಿ, ಆಚಾರ ಉಳಿಸಿ
ಮಡಿಕೇರಿ:
‘ತುಳು ಭಾಷಿಕ 13 ಸಮುದಾಯಗಳು ಒಂದೇ ವೇದಿಕೆಯಡಿ ಕಾರ್ಯ ನಿರ್ವಹಿಸಿ ತುಳು ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ಒತ್ತು ನೀಡಿರುವುದು   ಶ್ಲಾಘನೀಯ’ ಎಂದು ತುಳುವೆರ ಜನಪದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ತಿಳಿಸಿದರು.

ಮಡಿಕೇರಿ ತಾಲ್ಲೂಕಿನ ಗಾಳಿಬೀಡಿನಲ್ಲಿ ಈಚೆಗೆ ಜನಪದ ಕೂಟದ ವಲಯ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.
ತುಳು ಭಾಷಿಕರು ಒಂದೇ ವೇದಿಕೆಯಡಿ ಸಂಘಟಿತರಾಗುವುದು ಶ್ಲಾಘನೀಯ; ಶ್ರೀಮಂತ ತುಳು ಸಂಸ್ಕೃತಿ, ಆಚಾರ ಉಳಿಸಿ, ಬೆಳೆಸುವ ಅಗತ್ಯವಿದೆ. ಗ್ರಾಮಮಟ್ಟದಲ್ಲಿ ಸಂಘಟನೆ ಸದೃಢವಾಗಬೇಕು ಎಂದು ಹೇಳಿದರು.

ಕೂಟದ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣ ರೈ, ಮುಂದಿನ ದಿನಗಳಲ್ಲಿ ಗ್ರಾಮ ಸಮಿತಿಗಳನ್ನು ರಚಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಗೌರವ ಸಲಹೆಗಾರ ಐತ್ತಪ್ಪ ರೈ, ತಾಲ್ಲೂಕು ತುಳುವೆರ ಜನಪದ ಕೂಟದ ಅಧ್ಯಕ್ಷ ಪ್ರಭು ರೈ, ತಾಲ್ಲೂಕು ಭಂಟರ ಸಂಘದ ಅಧ್ಯಕ್ಷ ರಮೇಶ್ ರೈ, ವಿಶ್ವಕರ್ಮ ಸಮಾಜದ ತಾಲ್ಲೂಕು ಅಧ್ಯಕ್ಷ ರಮೇಶ್ ಆಚಾರ್ಯ, ತುಳುವೆರ ಜನಪದ ಕೂಟದ ತಾಲ್ಲೂಕು ಉಪಾಧ್ಯಕ್ಷ ಸುರೇಶ್ ಕುಲಾಲ್, ನಿರ್ದೇಶಕ ಲಕ್ಷ್ಮಿ ಪ್ರಸಾದ್ ಪೆರ್ಲ, ಖಜಾಂಚಿ ಆಶೋಕ್ ಆಚಾರ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.