ADVERTISEMENT

ನಿಗಮದ ಸೌಲಭ್ಯ ಪಡೆಯಲು ವಿಶ್ವಕರ್ಮ ಸಮುದಾಯಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 11:26 IST
Last Updated 15 ಜನವರಿ 2018, 11:26 IST

ಸೋಮವಾರಪೇಟೆ: ‘ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅಗತ್ಯ ನೆರವು ಪಡೆಯಲು ಸಮಾಜದ ಜನರು ಮುಂದಾಗಬೇಕು’ ಎಂದು ನಿಗಮದ ನಾಮಕರಣ ಸದಸ್ಯ ಬಿ.ಬಿ. ನಾಗರಾಜು ಹೇಳಿದರು.

ಶನಿವಾರ ಸುದ್ಧಿಗೋಷ್ಠಿಯಲ್ಲಿ ಅವರು, ಕೊಡಗಿನಲ್ಲಿ 45 ಸಾವಿರಕ್ಕೂ ಅಧಿಕ ವಿಶ್ವಕರ್ಮ ಜನರಿದ್ದಾರೆ. ಇವರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು.

ನಿಗಮಕ್ಕೆ ಕೊಡಗು ಜಿಲ್ಲೆಯಿಂದ ತಮ್ಮನ್ನು ನಾಮನಿರ್ದೇಶಿತ ಸದಸ್ಯನಾಗಿ ಆಯ್ಕೆ ಮಾಡಿದ್ದು, ಜಿಲ್ಲೆಯ ಸಮಾಜದ ಬಾಂಧವರಿಗೆ ಸೌಲಭ್ಯ ತಲುಪಿಸಲು ಶ್ರಮಿಸಲಾಗುವುದು ಎಂದರು.

ADVERTISEMENT

ಉದ್ಯೋಗ, ಗಂಗಾಕಲ್ಯಾಣ, ವಿದ್ಯಾಭ್ಯಾಸ, ಗುಡಿ ಕೈಗಾರಿಕೆಗಳಿಗೆ ₹ 40 ಸಾವಿರದಿಂದ 2 ಲಕ್ಷವರೆಗೆ ಸಾಲ ಸೌಲಭ್ಯ ನೀಡಲಾಗುವುದು. ₹ 50 ಸಾವಿರ ವಾರ್ಷಿಕ ಆದಾಯ ಹೊಂದಿರುವವರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ನಿಗಮಕ್ಕೆ ಹೆಚ್ಚುವರಿಯಾಗಿ ₹ 5 ಕೋಟಿ ಅನುದಾನ ಒದಗಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ನಿಗಮದ ಸವಲತ್ತುಗಳು ಹಾಗೂ ಒಕ್ಕೂಟದ ಸದಸ್ಯತ್ವಕ್ಕಾಗಿ ಮೊ: 9481858878, 9448896499 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಎಸ್.ಜೆ. ದೇವದಾಸ್ ಅವರು, ಗ್ರಾಮ, ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಸಮಾಜ ಸಂಘಟಿಸಲಾಗುತ್ತಿದೆ ಎಂದರು.

ಸೋಮವಾರಪೇಟೆಯಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ 50 ಸೆಂಟ್ಸ್ ನಿವೇಶನ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ತಾಲ್ಲೂಕು ತಹಸೀಲ್ದಾರ್ ಸ್ಥಳ ಗುರುತಿಸಿ ಪ್ರಸ್ತಾವನೆ ಸಲ್ಲಿಸಬೇಕಿದೆ ಎಂದು ತಿಳಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಕೆ.ರಮೇಶ್‌, ಸಂಘಟನಾ ಕಾರ್ಯದರ್ಶಿ ಕೆ.ಟಿ.ಸಂತೋಷ್ ಹಾಗೂ ಇತರ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.