ADVERTISEMENT

ಪ್ರೇರಣೆಗೆ ಒಳಗಾಗದೇ ಮತ ಚಲಾಯಿಸಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 8:47 IST
Last Updated 28 ಜನವರಿ 2018, 8:47 IST

ಮಡಿಕೇರಿ:  ‘ಪ್ರಜಾಪ್ರಭುತ್ವ ಬಲ ಪಡಿಸಲು 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನ ಮಾಡುವುದು ಸಂವಿಧಾನಬದ್ಧ ಕರ್ತವ್ಯವಾಗಿದೆ’ ಎಂದು ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಕರೆ ನೀಡಿದರು.

ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ನಗರದ ಹಳೇ ಕೋಟೆ ವಿಧಾನ ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವದಲ್ಲಿ ಪ್ರಜೆ ಗಳಿಗೆ ಮತದಾನದ ಮೂಲಕ ಸಾರ್ವಭೌಮತ್ವವನ್ನು ನೀಡಲಾಗಿದ್ದು, ಮತದಾನ ಕಾನೂನು ಬದ್ಧ ಹಕ್ಕಾಗಿದೆ. ಗುರುತಿನ ಚೀಟಿ ಪಡೆದು ಮತ ಚಲಾಯಿಸಬೇಕು’ಎಂದು ತಿಳಿಸಿದರು.

ADVERTISEMENT

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಮಾತನಾಡಿ, ‘ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗೆ ಒಳಗಾಗದೇ ಮತ ಚಲಾಯಿಸಬೇಕು’ ಎಂದು ನುಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ‘ರಾಷ್ಟ್ರವು ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದ್ದು, ದೇಶದ ಅಭಿವೃದ್ಧಿಗೆ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಿ ಮತದಾನದಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ಡೆನ್ಮಾರ್ಕ್, ಆಸ್ಟ್ರೇಲಿಯ ಮತ್ತಿತರ ರಾಷ್ಟ್ರಗಳಲ್ಲಿ ಮತದಾನ ಮಾಡುವುದು ಕಡ್ಡಾಯವಾಗಿದೆ. ಮತದಾನ ಮಾಡದಿದ್ದಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅಂತಹ ಕಠಿಣ ಕಾನೂನುಗಳು ವಿವಿಧ ರಾಷ್ಟ್ರಗಳಲ್ಲಿ ಇವೆ ಎಂದು ಹೇಳಿದರು. ಕೆ.ಜೆ.ದಿವಾಕರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.