ADVERTISEMENT

ಅಕ್ರಮ ಮರಳು ಫಿಲ್ಟರ್‌ ದಂಧೆ ತಡೆಗಟ್ಟಿ

ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರಿಂದ ತಹಶೀಲ್ದಾರ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 6:11 IST
Last Updated 21 ಡಿಸೆಂಬರ್ 2017, 6:11 IST
ಅಕ್ರಮ ಮರಳು ಫಿಲ್ಟರ್ ದಂಧೆಯನ್ನು ತಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ತಹಶೀಲ್ದಾರ್ ಬಿ.ಎನ್.ಪ್ರವೀಣ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಅಕ್ರಮ ಮರಳು ಫಿಲ್ಟರ್ ದಂಧೆಯನ್ನು ತಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ತಹಶೀಲ್ದಾರ್ ಬಿ.ಎನ್.ಪ್ರವೀಣ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಮುಳಬಾಗಿಲು: ತಾಲ್ಲೂಕಿನಾದ್ಯಂತ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಫಿಲ್ಟರ್ ದಂಧೆಯನ್ನು ತಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ತಹಶೀಲ್ದಾರ್ ಬಿ.ಎನ್.ಪ್ರವೀಣ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ತಾಲ್ಲೂಕಿನಲ್ಲಿ ಮರಳು ಪಿಲ್ಟರ್ ಹಾಗೂ ಟ್ರಾಕ್ಟರ್ ಮಾಫಿಯಾ ನಡೆಯುತ್ತಿದೆ. ಈ ಬಗ್ಗೆ ತಾಲ್ಲೂಕು ಆಡಳಿತ ಗಮನಹರಿಸಬೇಕು. ಇತ್ತೀಚೆಗೆ ಉತ್ತಮ ಮಳೆ ಸುರಿದಿರುವುದರಿಂದ ಸುಮಾರು 14 ವರ್ಷಗಳಿಂದ ತುಂಬದ ಕೆರೆಗಳು ಈ ವರ್ಷ ತುಂಬಿವೆ. ಕೆರೆ ಕುಂಟೆಗಳಲ್ಲಿನ ನೀರನ್ನು ಕೃಷಿ ಚಟುವಟಿಕೆಗಳ ಉಪಯೋಗಕ್ಕೆ ಬಳಸಿಕೊಳ್ಳುವುದನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಡೆಗಟ್ಟಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕಿನ ದುಗ್ಗಸಂದ್ರ, ನಂಗಲಿ, ಬೈರಕೂರು, ಆವಣಿ ಮೊದಲಾದ ಸ್ಥಳಗಳಲ್ಲಿ ಅಕ್ರಮ ಮರಳು ಪಿಲ್ಟರ್ ದಂದೆ ಹೆಚ್ಚಾಗಿ ನಡೆಯುತ್ತಿದ್ದು, ಕೆರೆಗಳನ್ನು ನಾಶಮಾಡಿಸುತ್ತಿರುವ ದಂಧೆಕೋರರಿಗೆ ಕಾನೂನು ರೀತಿ ಶಿಕ್ಷೆ ವಿಧಿಸಬೇಕು. ಟ್ರಾಕ್ಟರ್ ಮುಖಾಂತರ ಮರಳು ಸಾಗಣೆ ಮಾಡಿ, ಲಾರಿಗಳಿಗೆ ಕೊಡುತ್ತಿದ್ದಾರೆ. ಈ ಮೂಲಕ ಅಕ್ರಮ ಮರಳು ದಂಧೆಗೆ ಟ್ರಾಕ್ಟರ್ ಮಾಲೀಕರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಟ್ರಾಕ್ಟರ್ ಹಾವಳಿಯಿಂದ ಜನ ಸಾಮಾನ್ಯರು ತತ್ತರಿಸಿದ್ದು, ಪೊಲೀಸ್ ಮತ್ತು ಕಂದಾಯ ಇಲಾಖೆ ಕೈಕಟ್ಟಿ ಸುಮ್ಮನಿದ್ದಾರೆ. ಪರವಾನಗೆ ಇಲ್ಲದೆ ರಾಜಾರೋಷವಾಗಿ ಅಕ್ರಮ ಫಿಲ್ಟರ್ ದಂಧೆ ನಡೆಸುವ ಹಾಗೂ ಮರಳು ಟ್ರ್ಯಾಕ್ಟರ್‌ಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮರಗಲ್ ಶ್ರೀನಿವಾಸ್ ಆಗ್ರಹಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಾರುಕ್‍ ಪಾಷಾ, ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ರಂಜಿತ್‍ಕುಮಾರ್, ಪುತ್ತೇರಿ ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.